ಭಾನುವಾರದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಗಿರೀಶ್ ಲಿಂಗಣ್ಣ ಅವರ ಅಂಕಣ ಬರಹ
ರಾಜತಾಂತ್ರಿಕತೆಯ ಸಮಯ ಈಗ ಏಕಕಾಲಕ್ಕೇ ಗಂಭೀರವೂ, ಆಶ್ಚರ್ಯಕರವೂ ಆಗಿದೆ. ಅಮೆರಿಕಾ ಭಾರತದ ಉತ್ಪನ್ನಗಳ ಆಮದಿನ ಮೇಲೆ 50% ಸುಂಕ ವಿಧಿಸಿದ ಕೆಲವೇ ದಿನಗಳ ಬಳಿಕ, ಈಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚೀನಾ ಭೇಟಿಗೆ ಸಜ್ಜಾಗಿದ್ದಾರೆ. ನವದೆಹಲಿ ಇವೆರಡೂ ಬೆಳವಣಿಗೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಅಧಿಕೃತವಾಗಿಯೇ ತಿಳಿಸಿದ್ದರೂ, ವಾಸ್ತವ ಚಿತ್ರಣ ಮಾತ್ರ ಸ್ಪಷ್ಟವಾಗಿದೆ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅನಿರೀಕ್ಷಿತ ಮತ್ತು ತೀವ್ರವಾದ ನೀತಿಗಳು ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಅಮೆರಿಕಾದ ಹಲವು ವರ್ಷಗಳ ಪ್ರಯತ್ನಗಳನ್ನು ಹಾಳು ಮಾಡುತ್ತಿದ್ದು, ಭಾರತವನ್ನು ಅಮೆರಿಕಾ ನಿರ್ಬಂಧಿಸಲು ಪ್ರಯತ್ನಿಸುತ್ತಿರುವ ಚೀನಾಗೆ ಹೆಚ್ಚು ಹತ್ತಿರಾಗುವಂತೆ ಮಾಡುತ್ತಿದೆ.
ಇದು ಕೇವಲ ಒಂದು ತಪ್ಪು ಹೆಜ್ಜೆ ಮಾತ್ರವಲ್ಲದೆ, ಭಾರತ ಅಮೆರಿಕಾದ ನಂಬಿಕಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದ ಗೊಂದಲಮಯ ಕ್ರಮಗಳ ಭಾಗವಾಗಿದೆ. ಭಾರತದ ಮೇಲೆ ವಿಧಿಸಿದ ಮೊದಲ ಸುಂಕವನ್ನು ಭಾರತದ ವ್ಯಾಪಾರ ಹೆಚ್ಚುವರಿಗೆ ಅಮೆರಿಕಾದ ಪ್ರತಿಕ್ರಿಯೆ ಎಂದು ಟ್ರಂಪ್ ವಿವರಿಸಿದ್ದರು. ಭಾರತದ ಹೆಚ್ಚಿನ ರಫ್ತು ಮತ್ತು ಕಡಿಮೆ ಆಮದನ್ನು ಟ್ರಂಪ್ ಮೊದಲಿನಿಂದಲೂ ದೂರುತ್ತಿದ್ದರು. ಆದರೆ, ಭಾರತ ರಷ್ಯಾದಿಂದ ತೈಲ ಖರೀದಿಸುವುದಕ್ಕೆ ಶಿಕ್ಷೆಯ ರೂಪದಲ್ಲಿ ಆಗಸ್ಟ್ 27ರಿಂದ ಹೆಚ್ಚುವರಿ 25% ಸುಂಕ ವಿಧಿಸುವುದಾಗಿ ಟ್ರಂಪ್ ಘೋಷಿಸಿದಾಗ ಪರಿಸ್ಥಿತಿ ತೀವ್ರವಾಗಿ ಹದಗೆಡತೊಡಗಿತು. ರಷ್ಯಾದಿಂದ ಭಾರತಕ್ಕಿಂತಲೂ ಹೆಚ್ಚು ತೈಲ ಖರೀದಿಸುವ ಚೀನಾ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ, ಅಮೆರಿಕಾದ ಮಿತ್ರನಾದ ಭಾರತವನ್ನು ಗುರಿಯಾಗಿಸಿ ಟ್ರಂಪ್ ವಿಧಿಸಿದ ಸುಂಕ ನ್ಯಾಯಯುತವಾಗಂತೂ ಕಾಣಿಸಿಕೊಂಡಿಲ್ಲ. ತೀರಾ ಇತ್ತೀಚಿನ ತನಕವೂ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಅಮೆರಿಕಾ ವಿರೋಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ನಡೆದಿರುವ ಬದಲಾವಣೆಗಳು ಆಘಾತಕಾರಿಯಾಗಿವೆ.
ಟ್ರಂಪ್ ಇದ್ದಕ್ಕಿದ್ದಂತೆ ಭಾರತದ ಬದ್ಧ ವೈರಿಯಾದ ಪಾಕಿಸ್ತಾನದೊಡನೆ ಅತಿಯಾದ ಸ್ನೇಹ ಬೆಳೆಸಿರುವುದೂ ಈಗಾಗಲೇ ತಲೆದೋರಿರುವ ಗೊಂದಲವನ್ನು ಇನ್ನಷ್ಟು ಆಳವಾಗಿಸಿದೆ. ಟ್ರಂಪ್ ಕಾಶ್ಮೀರದ ಕುರಿತು ಪಾಕಿಸ್ತಾನದ ದೃಷ್ಟಿಕೋನವನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದು, ಮೇ ತಿಂಗಳಲ್ಲಿ ಭಾರತ ಪಾಕ್ ನಡುವೆ ಕದನ ವಿರಾಮ ತಾನೇ ಏರ್ಪಡಿಸಿದ್ದು ಎನ್ನುವುದು ಸೇರಿದಂತೆ, ಇಸ್ಲಾಮಾಬಾದ್‌ಗೆ ಟ್ರಂಪ್ ಬೆಂಬಲ ನೀಡುತ್ತಿದ್ದರಿಂದ ನವದೆಹಲಿ ಸಹಜವಾಗಿಯೇ ಅಸಮಾಧಾನಗೊಂಡಿತ್ತು. ಪಾಕಿಸ್ತಾನಿ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಜೊತೆ ಟ್ರಂಪ್ ವಾಷಿಂಗ್ಟನ್‌ನಲ್ಲಿ 2 ಗಂಟೆಗಳ ಸಮಾಲೋಚನೆ, ಭೋಜನ ನಡೆಸಿದ್ದೂ ಅಮೆರಿಕಾ ತನಗೆ ದ್ರೋಹ ಬಗೆಯುತ್ತಿದೆ ಎಂಬ ಭಾವನೆ ಭಾರತಕ್ಕೆ ಗಟ್ಟಿಯಾಗುವಂತೆ ಮಾಡಿತು. ಒಂದು ಕಾಲದಲ್ಲಿ ನರೇಂದ್ರ ಮೋದಿ ತನ್ನ ನೈಜ ಮಿತ್ರ ಎಂದು ಕರೆದಿದ್ದ, ಗುಜರಾತಿನ 1 ಲಕ್ಷಕ್ಕೂ ಅಧಿಕ ಜನರ ಮುಂದೆ ಅಮೆರಿಕಾ ಭಾರತವನ್ನು ಪ್ರೀತಿಸುತ್ತದೆ ಎಂದು ಭಾಷಣ ಮಾಡಿದ್ದ ಅಮೆರಿಕಾ ಅಧ್ಯಕ್ಷರ ಈ ಯು ಟರ್ನ್ ಗಂಭೀರ ನಂಬಿಕೆ ದ್ರೋಹವಲ್ಲದೆ ಮತ್ತಿನ್ನೇನು?
ಈ ದೂರ ತಳ್ಳುವಿಕೆಯ ಪರಿಣಾಮಗಳು ಈಗಾಗಲೇ ಸ್ಪಷ್ಟವಾಗಿ ಕಾಣತೊಡಗಿವೆ. ಆಗಸ್ಟ್ 31ರಂದು ಪ್ರಧಾನಿ ಮೋದಿ ತನ್ನ ಪಾಶ್ಚಾತ್ಯ ಸಹಯೋಗಿಗಳನ್ನು ಭೇಟಿಯಾಗುತ್ತಿಲ್ಲ. ಬದಲಿಗೆ, ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ಸಮಾಲೋಚನೆ ನಡೆಸಲಿದ್ದಾರೆ. 2020ರ ತೀವ್ರ ಗಡಿ ಚಕಮಕಿಯ ಬಳಿಕ ಸ್ಥಗಿತಗೊಂಡಿದ್ದ ಭಾರತ ಚೀನಾ ಸಂಬಂಧಗಳ ಸುಧಾರಣೆಗೆ ಮೋದಿ ಉಪಸ್ಥಿತಿ ಸಾಕ್ಷಿಯಾಗಲಿದೆ. ಭಾರತ ಚೀನಾಗಳ ನಡುವೆ ನೇರ ವಿಮಾನ ಸಂಚಾರ, ಗಡಿ ವ್ಯಾಪಾರ ಪುನರಾರಂಭದಂತಹ ಕ್ರಮಗಳ ಮೂಲಕ ಉಭಯ ದೇಶಗಳ ಸಂಬಂಧ ಉತ್ತಮಗೊಳ್ಳುತ್ತಿತ್ತು. ಆದರೆ ಅಮೆರಿಕಾದ ಕ್ರಮಗಳು ಇದಕ್ಕೆ ಇನ್ನಷ್ಟು ವೇಗ ನೀಡಿವೆ. ಚೀನಾ ಒಂದು ನಂಬಿಕಾರ್ಹ ಸ್ನೇಹಿತ ಅಲ್ಲದಿದ್ದರೂ, ಟ್ರಂಪ್ ಅನಿಶ್ಚಿತ ನಡೆಗಳು ಭಾರತಕ್ಕೆ ಚೀನಾವೇ ಹೆಚ್ಚು ಯೋಗ್ಯ ಸಹವರ್ತಿಯಂತೆ ಗೋಚರಿಸುವಂತೆ ಮಾಡಿವೆ.
ಇವೆಲ್ಲ ಬೆಳವಣಿಗೆಗಳಿಂದ ಅತಿ ಹೆಚ್ಚು ಅಪಾಯ ಎದುರಿಸುತ್ತಿರುವುದು ಕ್ವಾಡ್ರಿಲಾಟರಲ್ ಸೆಕ್ಯುರಿಟಿ ಡೈಲಾಗ್ (ಕ್ವಾಡ್) ಒಕ್ಕೂಟ. ಅಮೆರಿಕಾ, ಭಾರತ, ಜಪಾನ್, ಮತ್ತು ಆಸ್ಟ್ರೇಲಿಯಾಗಳನ್ನು ಒಳಗೊಂಡ ಈ ಒಕ್ಕೂಟ, ಚೀನಾದ ಪ್ರಾಬಲ್ಯವನ್ನು ತಗ್ಗಿಸುವ ಇಂಡೋ ಪೆಸಿಫಿಕ್ ಕಾರ್ಯತಂತ್ರಕ್ಕೆ ಅತ್ಯಂತ ಮುಖ್ಯವಾಗಿದೆ. ಕ್ವಾಡ್ ಭವಿಷ್ಯವೇ ಈಗ ಅನಿಶ್ಚಿತವಾಗಿದ್ದು, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ತ್ರಿ ಕ್ವಾಡ್ ಇಂದಿಗೂ ಆದ್ಯತೆಯ ವಿಚಾರವೇ ಎಂದಿದ್ದಾರೆ. ಆದರೂ, ಈ ವರ್ಷ ಭಾರತ ಆಯೋಜಿಸಬೇಕಾದ ಕ್ವಾಡ್ ಶೃಂಗಸಭೆ ನಡೆಯುವುದು ಅನುಮಾನ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ನವದೆಹಲಿಯ ಕೆಲವು ರಾಜತಾಂತ್ರಿಕರಂತೂ ಈ ಸಭೆ ನಡೆಯಲು ಸಾಧ್ಯವೇ ಇಲ್ಲವೆಂದು ಭಾವಿಸಿದ್ದಾರೆ. ಭಾರತದಂತಹ ಪ್ರಮುಖ ಸಹಯೋಗಿಗೆ ಕೋಪ ತರಿಸುವ ಮೂಲಕ, ಅಮೆರಿಕಾ ನೇರವಾಗಿ ತನ್ನ ಪ್ರಾಬಲ್ಯವನ್ನು ತಗ್ಗಿಸಲು ಬಯಸುವ ಸಹಯೋಗಗಳನ್ನು ದುರ್ಬಲವಾಗಿಸುವ ಚೀನಾದ ಗುರಿಗೆ ನೇರವಾಗಿ ಸಹಾಯ ಮಾಡುತ್ತಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸ್ಪಷ್ಟವಾಗಿ ಹೇಳುವುದಾದರೆ, ಭಾರತ ಮತ್ತು ಚೀನಾ ನಡುವಿನ ಉತ್ತಮ ಬಾಂಧವ್ಯ ಎಂದ ಮಾತ್ರಕ್ಕೆ ಅದು ಪೂರ್ಣ ಸಹಯೋಗ ಎಂದರ್ಥವಲ್ಲ. ಡ್ರ್ಯಾಗನ್ ಮತ್ತು ಆನೆಯ ನೃತ್ಯ ಎಂದು ನಾಯಕರು ಕರೆಯುವ ಈ ಸಂಬಂಧ ನಿಜಕ್ಕೂ ಜಾಗರೂಕವಾಗಿ ಗಮನಿಸಬೇಕಾದ ಸಂಬಂಧವೇ. ಭಾರತ ಇಂದಿಗೂ ತನ್ನ ಉತ್ತರದ ಗಡಿಯ ಕುರಿತಾಗಿ ಗಂಭೀರ ಆತಂಕಗಳನ್ನು ಹೊದಿದ್ದು, ದಕ್ಷಿಣ ಏಷ್ಯಾದಲ್ಲಿ ಚೀನಾದ ಪ್ರಭಾವದ ಕುರಿತೂ ಚಿಂತಿಸುತ್ತಿದೆ. ಅದರೊಡನೆ, ಚೀನಾ ಪಾಕಿಸ್ತಾನದ ಅತಿದೊಡ್ಡ ಆಯುಧ ಪೂರೈಕೆದಾರನ ಪಾತ್ರವನ್ನೂ ನಿರ್ವಹಿಸುತ್ತಿದೆ. ಆದರೆ, ಭಾರತದ ಸಹವರ್ತಿಯಾಗಿ ವರ್ತಿಸುತ್ತಿದ್ದ ಅಮೆರಿಕಾ ಈಗ ಇದ್ದಕ್ಕಿದ್ದಂತೆ ಅನಿಶ್ಚಿತವಾಗಿ ಮತ್ತು ಸ್ನೇಹವನ್ನು ಮರೆತಂತೆ ವರ್ತಿಸುವಾಗ, ಅದು ಸಹಜವಾಗಿಯೇ ಭಾರತ ಜಾಗರೂಕವಾಗುವಂತೆ, ಮತ್ತು ಬೇರೆ ದೇಶಗಳೊಡನೆ ಹೆಚ್ಚು ಆತ್ಮೀಯವಾಗಿ ಕಾರ್ಯಾಚರಿಸುವಂತೆ ಮಾಡುತ್ತದೆ.
ಅಂತಿಮವಾಗಿ, ಸ್ನೇಹಿತರನ್ನೇ ಶತ್ರುಗಳಂತೆ ಕಾಣುವ ಮೂಲಕ ಡೊನಾಲ್ಡ್ ಟ್ರಂಪ್ ಆಡಳಿತ ಭಾರತದೊಡನೆ ತನ್ನ ಸಂಬಂಧಕ್ಕೆ ಮಾತ್ರ ಧಕ್ಕೆ ತರುತ್ತಿಲ್ಲ. ಅದರೊಡನೆ, ತನ್ನ ಸ್ವಂತ ಗುರಿಗಳಿಗೂ ತೊಂದರೆ ತಂದುಕೊಳ್ಳುತ್ತಿದೆ. ಊಹಿಸಲೇ ಸಾಧ್ಯವಿಲ್ಲದಂತೆ ವರ್ತಿಸುತ್ತಿರುವ ಅಮೆರಿಕಾ, ಭಾರತವನ್ನಾಗಲಿ, ಬೇರೆ ಇನ್ನಾವುದೇ ದೇಶವನ್ನಾಗಲಿ ಚೀನಾ ಅಥವಾ ರಷ್ಯಾದಿಂದ ದೂರ ಸರಿಯುವಂತೆ ಮನ ಒಲಿಸಲು ಸಾಧ್ಯವಿಲ್ಲ. ತನ್ನ ಅನಗತ್ಯ ಕ್ರಮಗಳ ಮೂಲಕ ವಾಷಿಂಗ್ಟನ್ ಭಾರತದಂತಹ ಸ್ನೇಹಿತನನ್ನು ಕಳೆದುಕೊಳ್ಳುವುದು ಮಾತ್ರವಲ್ಲದೆ, ತನ್ನ ಕೈಯಾರೆ ಚೀನಾಗೆ ಒಂದು ಅನಿರೀಕ್ಷಿತ ಗೆಲುವನ್ನು ಬಿಟ್ಟು ಕೊಡುತ್ತಿದೆ.