ಹುಬ್ಬಳ್ಳಿ: ನಮ್ಮ ಅರಿಶಿಣ ಕುಂಕುಮದ ಬಗ್ಗೆ ತಾತ್ಸಾರ ಮನೋಭಾವ ಉಳ್ಳ ನೀವು ದಸರಾವನ್ನು ಹೇಗೆ ಉದ್ಘಾಟಿಸುತ್ತೀರಿ? ಎಂದು ಮಾಜಿ ಸಂಸದ ಪ್ರತಾಪ ಸಿಂಹ ಅವರು ಈ ಬಾರಿ ದಸರಾ ಉದ್ಘಾಟಿಸಲಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡವನ್ನು ಭುವನೇಶ್ವರಿ ಮಾಡಿ ಮುಸ್ಲಿಮರನ್ನು ಕನ್ನಡದಿಂದ ಹೊರಗೆ ಇಟ್ಟಿದ್ದಾರೆ ಎಂದು ಹೇಳುವ ಬಾನು ಮುಷ್ತಾಕ್ ದಸರಾವನ್ನು ಹೇಗೆ ಉದ್ಘಾಟಿಸುತ್ತಾರೆ ಎಂದು ಮತ್ತೊಂದು ಪ್ರಶ್ನೆಯನ್ನು ಎತ್ತಿದ್ದಾರೆ.
ಬಾನು ಮುಷ್ತಾಕ್ ಅವರೂ ಸೇರಿದಂತೆ ಮುಸ್ಲಿಂ ಮಹಿಳೆಯರು ಆರಾಧಿಸುವ ಅಲ್ಲಾ ದೇವರೇ ಅವರನ್ನು ಮಸೀದಿ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಇನ್ನು ಚಾಮುಂಡಿದೇವಿ ಬಾನು ಮುಷ್ತಾಕ್ ಅವರನ್ನು ಕರೆಸಿಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದರು.
ಹಿಂದುಗಳಿಗೆ ಇದೇ ಜನ್ಮ ಭೂಮಿ, ಇದೇ ಪವಿತ್ರ ಭೂಮಿ. ಆದರೆ, ಮುಸಲ್ಮಾನರಿಗೆ ಇದು ಜನ್ಮಭೂಮಿ ಮೆಕ್ಕಾ ಪವಿತ್ರ ಭೂಮಿ, ಕ್ರಿಶ್ಚಿಯನ್ನರಿಗೆ ಬೆಥ್ಲೆಹಿಮ್ ಪವಿತ್ರ ಭೂಮಿ ಎಂದು ಹೇಳಿದರು.
ಇಫ್ತಿಯಾರ ಕೂಟದಲ್ಲಿ ಪಾಲ್ಗೊಳ್ಳುವ ಹಿಂದುಗಳಿಗೆ ಟೋಪಿ ಹಾಕುವಂತೆ, ತಾವು ದಸರಾ ಉದ್ಘಾಟನೆಗೆ ಕುಂಕುಮ ಇಟ್ಟು, ಸೀರೆ ಉಟ್ಟು, ಮಲ್ಲಿಗೆ ಮುಡಿದು ದಸರಾ ಉದ್ಘಾಟಿಸಿ ಎಂದು ಸವಾಲೆಸೆದರು.
ಅಲ್ಪಸಂಖ್ಯಾತರನ್ನು ಒಗ್ಗೂಡಿಸಬೇಕು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ರಾಜಕೀಯದಿಂದ ಹಿಂದೆ ಸರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.