ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ವಾಯುಮಾಲಿನ್ಯ ತಗ್ಗಿಸಿದಲ್ಲಿ ಭಾರತೀಯರ ಸರಾಸರಿ ಆಯುಷ್ಯ 3.5 ವರ್ಷಗಳಷ್ಟು ಹೆಚ್ಚಳವಾಗಲಿದೆ ಎಂದು ಷಿಕಾಗೋ ವಿವಿಯ ಎನೆರ್ಜಿ ಪಾಲಿಸಿ ಇನ್‌ಸ್ಟಿಟ್ಯೂಟ್ ವರದಿಯೊಂದರಲ್ಲಿ ಹೇಳಿದೆ. ಅದೇ ಸಮಯದಲ್ಲಿ 2022ಕ್ಕೆ ಹೋಲಿಸಿದಲ್ಲಿ 2023ರಲ್ಲಿ ಮಾಲಿನ್ಯಕಾರಕ
ಪಿಎಂ 2.5 ಕಣಗಳು ಹೆಚ್ಚಿವೆ ಎಂದೂ ತಿಳಿಸಿದೆ.
ಮಾಲಿನ್ಯಕಾರಕ ಕಣಗಳು: ಕಾಳ್ಗಿಚ್ಚು, ಕೈಗಾರಿಕಾ ಪ್ರಕ್ರಿಯೆಗಳಲ್ಲಿ ಗಾಳಿಯಲ್ಲಿ ಅತಿ ಸಣ್ಣ ಕಣಗಳು ಸೇರಿಕೊಂಡು ಮಾಲಿನ್ಯ ಉಂಟುಮಾಡುತ್ತದೆ. ಈ ಕಣಗಳ ಗಾತ್ರ 2.5 ಮೈಕ್ರೋಮೀಟರ್ ಕಡಿಮೆ ವ್ಯಾಸ ಇದ್ದಲ್ಲಿ ಅವನ್ನು ಪಿಎಂ 2.5 ಎಂದು ಕರೆಯಲಾಗುತ್ತದೆ. ಕಣಗಳ ವ್ಯಾಸ 10 ಮೈಕ್ರೋಮೀಟರ್ ಇದ್ದಲ್ಲಿ ಅವನ್ನು ಪಿಎಂ 10 ಎಂದು ಕರೆಯಲಾಗುತ್ತದೆ. ಇವು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸಿ, ಶ್ವಾಸಕೋಶದಿಂದ ರಕ್ತನಾಳವನ್ನು ಸೇರಿಕೊಳ್ಳುತ್ತವೆ. ಇದರಿಂದ ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್ ಹಾಗೂ ಇನ್ನಿತರ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತವೆ.
ಉತ್ತರ ಭಾರತದಲ್ಲಿ ಹೆಚ್ಚು ಮಾಲಿನ್ಯ: ಉತ್ತರ ಭಾರತದ ಬಯಲು ಪ್ರದೇಶ ಅತ್ಯಂತ ಹೆಚ್ಚು ವಾಯುಮಾಲಿನ್ಯಕರ ಪ್ರದೇಶವಾಗಿದೆ. ಇದರಲ್ಲಿ ನೊಯಿಡಾ, ಗಾಜಿಯಾಬಾದ್, ಪಟನಾ ಬೆಗುಸರೈ, ಮುಜಪ್ಫರ್ ನಗರ, ಫರೀದಾಬಾದ್, ನೊಯಿಡಾ ಮುಂತಾದ ಪ್ರದೇಶಗಳು ಸೇರಿವೆ. ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ದೇಶದ ಶೇ. 39.9ರಷ್ಟು ಜನ ವಾಸಿಸುತ್ತಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲೂ ಭಾರೀ ವಾಯುಮಾಲಿನ್ಯ ಇದೆ.
44.5 ಕೋಟಿ ಜನರ ಜೀವಿತಾವಧಿ ಹೆಚ್ಚಳ: ಸ್ವಚ್ಛ ಗಾಳಿ ಯೋಜನೆಯನ್ನು ಕೇಂದ್ರ ಸರ್ಕಾರ 2019ರಲ್ಲಿ ಹಾಕಿಕೊಂಡಿದೆ. ಅದರಂತೆ 2017ನ್ನು ಮಾನದಂಡವನ್ನಾಗಿರಿಸಿಕೊಂಡು, 2024ರ ಹೊತ್ತಿಗೆ 20-30 ಪರ್ಸೆಂಟ್ ಮಾಲಿನ್ಯಕಾರಕ ಕಣಗಳನ್ನು ತಗ್ಗಿಸುವುದು ಇದರ ಗುರಿ. 2022ರಲ್ಲಿ ಈ ಗುರಿಯನ್ನು ಪರಿಷ್ಕರಿಸಿ 2026ರ ಹೊತ್ತಿಗೆ 40 ಪರ್ಸೆಂಟ್ ತಗ್ಗಿಸಲು ಗುರಿ ಹಾಕಿಕೊಳ್ಳಲಾಗಿದೆ. ಈ ಗುರಿ ಸಾಧಿಸಿದಲ್ಲಿ ಭಾರತೀಯರ ಜೀವಿತಾವಧಿ 2 ವರ್ಷಗಳಷ್ಟು ಹೆಚ್ಚುತ್ತದೆ. ಗುರಿ ಸಾಧಿಸದ ನಗರಗಳಲ್ಲಿ ಸರಾಸರಿ 10.7 ಪರ್ಸೆಂಟ್‌ನಷ್ಟು ತಗ್ಗಿದೆ.
5 ಮೈಕ್ರೋ ಗ್ರಾಂ: 2021ರ ವಿಶ್ವಸಂಸ್ಥೆ ಮಾರ್ಗಸೂಚಿಯಂತೆ ಒಂದು ಕ್ಯುಬಿಕ್ ಮೀಟರ್ ಪ್ರದೇಶದ ಗಾಳಿಯಲ್ಲಿ ಇರಬೇಕಾದ ಮಾಲಿನ್ಯಕಾರಕ ಪಿಎಂ 2.5 ಕಣಗಳ ಪ್ರಮಾಣ.
15 ಮೈಕ್ರೋ ಗ್ರಾಂ: ವಿಶ್ವಸಂಸ್ಥೆ ಮಾರ್ಗಸೂಚಿಯಂತೆ ಒಂದು ಕ್ಯುಬಿಕ್ ಮೀಟರ್ ಪ್ರದೇಶದ ಗಾಳಿಯಲ್ಲಿ ಇರಬಹುದಾದ ಪಿಎಂ 10 ಮಾಲಿನ್ಯಕಾರಕ ಕಣಗಳ ಪ್ರಮಾಣ.
40 ಮೈಕ್ರೋ ಗ್ರಾಂ: ಭಾರತ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ತನ್ನದೇ ಆದ ಮಿತಿಯನ್ನು ಹಾಕಿಕೊಂಡಿದ್ದು, ಅದರಂತೆ ಒಂದು ಕ್ಯುಬಿಕ್ ಮೀಟರ್‌ನಲ್ಲಿ ಪಿಎಂ 2.5 ಕಣಗಳು ಇರಬಹುದು.
1.5 ವರ್ಷ: ಭಾರತ ಹಾಕಿಕೊಂಡ ಮಿತಿಯನ್ನು ಸಾಧಿಸಲು ಯಶಸ್ವಿಯಾದಲ್ಲಿ ಭಾರತೀಯರ ಸರಾಸರಿ ಆಯುಷ್ಯದಲ್ಲಿ ಆಗುವ ಹೆಚ್ಚಳ.
                























