ನವದೆಹಲಿ: ಭಾರತವನ್ನು ಕೇವಲ ಸೆಮಿಕಂಡಕ್ಟರ್ ತಯಾರಿಕಾ ಕೇಂದ್ರವಾಗಿಯೇ ಅಲ್ಲದೆ, ಪ್ರತಿಭಾ ಕೇಂದ್ರವಾಗಿಯೂ ವಿಶ್ವದಲ್ಲಿ ಗುರುತಿಸಬೇಕು. ಜಾಗತಿಕ ಕಂಪನಿಗಳು ಭಾರತದಿಂದಲೇ ಕೌಶಲ್ಯವಂತ ವೃತ್ತಿಪರರನ್ನು ನೇಮಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಲ್ಲಿ ಎಲೆಕ್ಟ್ರಾನಿಕ್ಸ್ ಪೂರೈಕೆ ಸರಪಳಿಯನ್ನು ನಿರ್ಮಿಸುವತ್ತ ಭಾರತದ ಪ್ರಮುಖ ಹೆಜ್ಜೆಯಾಗಿದೆ. ಗುಜರಾತ್‌ನ ಸನದ್‌ನಲ್ಲಿ ಸಿಜಿ ಸೆಮಿಯ ಪೈಲಟ್ ಲೈನ್‌ನಿಂದ ಮೊದಲ ಮೇಡ್ ಇನ್ ಇಂಡಿಯಾ ಚಿಪ್ ಹೊರಬರುವ ನಿರೀಕ್ಷೆಯಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಮೊದಲ ಚಿಪ್ ಅನ್ನು ರಾಷ್ಟ್ರಕ್ಕೆ ಅರ್ಪಿಸುತ್ತಾರೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದುರು.
2030ರ ವೇಳೆಗೆ ಪ್ರಪಂಚವು ಒಂದು ಮಿಲಿಯನ್ ಸೆಮಿಕಂಡಕ್ಟರ್ ವೃತ್ತಿಪರರ ಕೊರತೆಯನ್ನು ಎದುರಿಸಲಿದೆ ಎಂಬ ಅಂದಾಜಿನ ನಡುವೆ, ಭಾರತವು ಈ ಅಂತರದ ಗಮನಾರ್ಹ ಭಾಗವನ್ನು ತುಂಬುವ ದೊಡ್ಡ ಅವಕಾಶವನ್ನು ಹೊಂದಿದೆ ಎಂದಿದ್ದಾರೆ. ಸೆಮಿಕಂಡಕ್ಟರ್ ಕ್ಷೇತ್ರವು ಜಾಗತಿಕ ಆರ್ಥಿಕತೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಮುಂದಿನ ವರ್ಷಗಳಲ್ಲಿ ಇದರ ಬೇಡಿಕೆ ದ್ವಿಗುಣಗೊಳ್ಳಲಿದೆ ಎಂದರು.
“ಇಂದಿನ ಜಗತ್ತಿನಲ್ಲಿ ಸ್ಮಾರ್ಟ್‌ಫೋನ್‌ನಿಂದ ಹಿಡಿದು ವಾಹನಗಳು, ಆರೋಗ್ಯ ಸಾಧನಗಳಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೂ ಸೆಮಿಕಂಡಕ್ಟರ್‌ಗಳ ಬಳಕೆ ವ್ಯಾಪಕವಾಗಿದೆ. 2030ರ ವೇಳೆಗೆ ಸುಮಾರು 10 ಲಕ್ಷ ವೃತ್ತಿಪರರ ಕೊರತೆ ಉಂಟಾಗಲಿದೆ. ಭಾರತಕ್ಕೆ ಬಲವಾದ ಪ್ರತಿಭಾ ನೆಲೆಯನ್ನು ರೂಪಿಸುವ ಮೂಲಕ ಈ ಕೊರತೆಯನ್ನು ತುಂಬುವ ಅಪಾರ ಅವಕಾಶವಿದೆ,” ಎಂದು ವೈಷ್ಣವ್ ಹೇಳಿದರು.