ರಾಜ್ಯ ಸರ್ಕಾರ ವೆಚ್ಚ ಮಾಡುವ ಪ್ರತಿ ಪೈಸೆಗೂ ಲೆಕ್ಕ ಕೇಳುವುದು ಸಿಎಜಿ ಕರ್ತವ್ಯ. ಅದು ಶಾಸನಬದ್ಧವಾಗಿ ರಚಿತಗೊಂಡಿರುವ ಸಂಸ್ಥೆ. ಅದರ ವರದಿಯನ್ನು ಸರ್ಕಾರ ಪರಿಗಣಿಸಿ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಸಲ್ಲಿಸಬೇಕು. ಇಲ್ಲದಿದ್ದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ವಿಶ್ವಾಸಾರ್ಹತೆ ಇಳಿಮುಖಗೊಳ್ಳುತ್ತದೆ. ಬಜೆಟ್ ಮಂಡನೆ ಅದಕ್ಕೆ ತಕ್ಕಂತೆ ಪ್ರತಿ ಯೋಜನೆಗೂ ಹಣ ವಿತರಣೆ, ಅದರ ಲೆಕ್ಕ ಪರಿಶೀಲನೆ. ಪ್ರತಿ ಬಾರಿ ನಡೆಯುವ ಕೆಲಸ. ಇದು ಒಂದು ಸರಣಿ. ಅದು ಪೂರ್ಣಗೊಳ್ಳಬೇಕು.
ಕೈಗೊಂಡ ಕ್ರಮದ ವರದಿ ಸಲ್ಲಿಕೆಯಾಗದಿದ್ದಲ್ಲಿ ಸ್ಪೀಕರ್ ಮಧ್ಯಪ್ರವೇಶಿಸಿ ವರದಿ ಸಲಿಸುವಂತೆ ಸೂಚನೆ ನೀಡಬಹುದು. ಸಿಎಜಿ ವರದಿ ಮಂಡನೆ ಮಾತ್ರ ಕಡ್ಡಾಯ. ಅದರ ಅನುಷ್ಠಾನ ಆಯಾ ರಾಜ್ಯಗಳಿಗೆ ಬಿಟ್ಟ ವಿಷಯ. ಸಿಎಜಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಲು ಬರುವುದಿಲ್ಲ. ರಾಜ್ಯ ಸರ್ಕಾರ ನೀಡುವ ಅಂಕಿಅಂಶಗಳನ್ನು ಆಧರಿಸಿ ಸಿಎಜಿ ವರದಿ ನೀಡುವುದರಿಂದ, ಅದು ಸರಿಯಿಲ್ಲ ಎಂದು ಹೇಳುವುದು ಸೂಕ್ತವಲ್ಲ.
ಸಿಎಜಿ ವರದಿಯ ಮೇಲೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ತನ್ನ ಅಭಿಪ್ರಾಯವನ್ನು ನೀಡುತ್ತದೆ. ನೀತಿ ಆಯೋಗ ಯೋಜನೆಗಳನ್ನು ರೂಪಿಸುವಾಗ ಸಿಎಜಿ ವರದಿಯನ್ನು ಪರಿಗಣಿಸುವುದು ವಾಡಿಕೆ. ಹೀಗಾಗಿ ಸಿಎಜಿ ವರದಿಗೆ ತನ್ನದೇ ಆದ ಮಹತ್ವ ಇದ್ದೇ ಇದೆ. ರಾಜ್ಯದಲ್ಲಿ 5 ಉಚಿತ ಗ್ಯಾರಂಟಿ ಯೋಜನೆ ಕೈಗೊಂಡಿದ್ದು ಸರ್ಕಾರದ ತೀರ್ಮಾನ. ಅದನ್ನು ಸಿಎಜಿ ಪ್ರಶ್ನಿಸಲು ಬರುವುದಿಲ್ಲ. ಆದರೆ ಅದಕ್ಕೆ ಮಾಡಿದ ವೆಚ್ಚದ ಲೆಕ್ಕ ಕೇಳುವುದಕ್ಕೆ ಅಧಿಕಾರವಿದೆ.
ಸರ್ಕಾರದ ಪ್ರತಿಯೊಂದು ವೆಚ್ಚಕ್ಕೂ ದಾಖಲೆ ಬೇಕು. ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಪರಿಪಾಲನೆ ಕಡ್ಡಾಯ. ಈ ಯೋಜನೆಗಳಿಂದ ಮೂಲಭೂತ ಸವಲತ್ತು ಕಲ್ಪಿಸುವ ಯೋಜನೆಗಳಿಗೆ 5229 ಕೋಟಿ ರೂ. ಕೊರತೆ ಉಂಟಾಗಿದೆ ಸಿಎಜಿ ತಿಳಿಸಿದೆ. ಇದಕ್ಕೆ ಸಮಜಾಯಿಷಿ ನೀಡುವುದು ಸರ್ಕಾರದ ಕರ್ತವ್ಯ.ರಾಜ್ಯ ಒಟ್ಟು ವೆಚ್ಚದಲ್ಲಿ ಶೇ. 15 ರಷ್ಟು ಹಣ ಈ ಗ್ಯಾರಂಟಿಗಳಿಗೆ ಹೋಗಿದೆ ಎಂದು ವರದಿ ತಿಳಿಸಿದೆ.
ಇದರಿಂದ 65522 ಕೋಟಿ ರೂ. ಆರ್ಥಿಕ ಕೊರತೆ ಉಂಟಾಗಿದೆ.ಸಾಲದ ಹೊರೆ 63 ಸಾವಿರ ಕೋಟಿರೂ. ಆಗಿದೆ ಎಂದು ಸಿಎಜಿ ತಿಳಿಸಿದೆ. ಇದಕ್ಕೆ ವಿವರಣೆ ಕೊಡಬೇಕೇ ಹೊರತು ಸಿಎಜಿ ವರದಿಯೇ ಸರಿಯಲ್ಲ ಎಂದು ಹೇಳುವುದು ಸರಿಯಲ್ಲ. ಸಿಎಜಿ ತನ್ನ ವರದಿ ಕೊಡುವುದೇ ರಾಜ್ಯ ಸರ್ಕಾರ ಕೊಡುವ ಅಂಕಿಅಂಶಗಳಿಂದ. ಇದರಲ್ಲಿ ರಾಜಕೀಯ ನುಸುಳುವುದಿಲ್ಲ. ಕಾಶ್ಮೀರದಿಂದ ಹಿಡಿದು ತಮಿಳುನಾಡುವರೆಗೆ ಎಲ್ಲ ರಾಜ್ಯಗಳ ಲೆಕ್ಕಪತ್ರ ಪರಿಶೀಲಿಸಿ ವರದಿ ನೀಡುವುದು ಸಿಎಜಿ ಕರ್ತವ್ಯ. ಇದನ್ನು ಒಪ್ಪಿಕೊಳ್ಳುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಷಯ.
ಆದರೆ ಸಂವಿಧಾನಬದ್ಧವಾಗಿ ಪ್ರತಿ ವರ್ಷ ವಿಧಾನಮಂಡಲದಲ್ಲಿ ಸಿಎಜಿ ವರದಿ ಮಂಡನೆ ಆಗಲೇಬೇಕು. ಅಂತಿಮವಾಗಿ ಸಿಎಜಿ ರಾಷ್ಟ್ರಪತಿಗಳಿಗೆ ವಿವರವಾದ ವರದಿ ನೀಡುತ್ತಾರೆ. ಹೀಗಿರುವಾಗ ಸಿಎಜಿ ವರದಿಗೆ ಬೆಲೆ ಇಲ್ಲ ಎಂಬಂತೆ ವರ್ತಿಸುವುದು ಸರಿಯಲ್ಲ. ಶಾಸನಸಭೆ ಮತ್ತು ಸಂಸತ್ತು ರಾಜಕೀಯ ನಿರ್ಣಯಗಳನ್ನು ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿದೆ. ಆದರೆ ಅದು ಸಂವಿಧಾನ ಬದ್ಧವಾಗಿದೆಯೇ ಇಲ್ಲವೆ ಎಂಬುದನ್ನು ನ್ಯಾಯಾಂಗ ನೋಡುತ್ತದೆ. ಅದನ್ನು ಜಾರಿಗೆ ತರುವುದು ಕಾರ್ಯಾಂಗದ ಕೆಲಸ.
ಈ ರೀತಿ ಅನುಷ್ಠಾನಕ್ಕೆ ಮಾಡುವ ವೆಚ್ಚಕ್ಕೆ ಲೆಕ್ಕ ಕೊಡಬೇಕು. ಸರ್ಕಾರ ಮಾಡಿರುವ ವೆಚ್ಚ ಕಾನೂನು ಬದ್ಧವಾಗಿದೆಯೇ ಇಲ್ಲವೆ ಎಂಬುದನ್ನು ಸಿಎಜಿ ತಿಳಿಸುತ್ತದೆ. ಪ್ರತಿ ರಾಜ್ಯದಲ್ಲೂ ಲೋಕಲ್ ಆಡಿಟ್ ಇಲಾಖೆ ಇದ್ದೇ ಇರುತ್ತದೆ. ಅದು ವಿವರವನ್ನು ಹಣಕಾಸು ಇಲಾಖೆಗೆ ಒಪ್ಪಿಸುತ್ತದೆ. ರಾಜ್ಯ ಮಾಡಿದ ವೆಚ್ಚದಿಂದ ಆಗಿರುವ ಪರಿಣಾಮವೇನು ಎಂಬುದನ್ನು ಸಿಎಜಿ ಪರಿಶೀಲಿಸಿ ವರದಿ ನೀಡುತ್ತದೆ. ಅದರ ಆಧಾರದ ಮೇಲೆ ರಾಜ್ಯ ಸರ್ಕಾರ ಮುಂದಿನ ಯೋಜನೆಗಳನ್ನು ರೂಪಿಸಬೇಕು.
ಸಾರ್ವಜನಿಕರ ಹಣವನ್ನು ಮನಬಂದಂತೆ ಬಳಸಲು ಬರುವುದಿಲ್ಲ. ಜನಪ್ರತಿನಿಧಿಗಳು ಜನರಿಗೆ ಆಯ್ಕೆಗೊಂಡಿದ್ದರೂ ಸರ್ಕಾರಿ ಹಣ ಬಳಸಬೇಕೆಂದರೆ ನಿಯಮ ಪಾಲಿಸಲೇಬೇಕು. ಹೀಗಾಗಿ ಸಿಎಜಿ ವರದಿಗೆ ಗೌರವ ಕೊಡುವುದು ಪ್ರತಿ ರಾಜ್ಯ ಸರ್ಕಾರದ ಕರ್ತವ್ಯವೂ ಹೌದು. ಆಡಳಿತದಲ್ಲಿರುವವರು ತಮ್ಮ ಜನಪ್ರಿಯತೆಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಬಹುದು. ಅದಕ್ಕೆ ಹಣಕಾಸು ಮೂಲ ಹುಡುಕಿಕೊಳ್ಳುವುದು ಮುಖ್ಯ. ಪ್ರತಿ ರಾಜ್ಯಕ್ಕೂ ಸಾಲ ಮಾಡುವ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಆರ್‌ಬಿಐ ಪ್ರಕಟಿಸುತ್ತದೆ.
ಅದರ ಮಿತಿಯಲ್ಲೇ ಸಾಲ ಮಾಡುವುದು ಅನಿವಾರ್ಯ. ಆರ್‌ಬಿಐ ಕೂಡ ಸಿಎಜಿ ವರದಿಯನ್ನು ಗಂಭೀರವಾಗಿ ಪರಿಗಣಿಸುತ್ತದೆ. ಸಿಎಜಿ, ಆರ್ಥಿಕ ಸಮೀಕ್ಷೆ ವರದಿ, ಹಣಕಾಸು ಆಯೋಗದ ವರದಿ, ಆರ್‌ಬಿಐ ವರದಿಗಳಿಗೆ ರಾಜಕೀಯ ಸೋಂಕು ಇರುವುದಿಲ್ಲ. ಅವುಗಳನ್ನು ಅಲ್ಲಗಳೆಯುವುದು ಯಾವ ಸರ್ಕಾರಕ್ಕೂ ಒಳಿತಲ್ಲ. ಈ ಎಲ್ಲ ಸಂಸ್ಥೆಗಳು ಆರ್ಥಿಕ ಶಿಸ್ತು ತರಲು ಸಹಕಾರಿ ಎಂಬುದನ್ನು ಮರೆಯುವ ಹಾಗಿಲ್ಲ.