ನಮ್ಮ ನಾಡಿನ ಬ್ಯಾಂಕುಗಳಿಗಾದ ಗತಿಯೇ ನಂದಿನಿಗೂ ಆಗಲಿದೆ: ಸಿದ್ದರಾಮಯ್ಯ ಎಚ್ಚರಿಕೆ

ಸಿದ್ದು

ಕರ್ನಾಟಕ ಹಾಲು ಮಹಾ ಮಂಡಳವು ಗುಜರಾತ್ ಅಮುಲ್ ಜೊತೆಗೂಡಬೇಕೆಂಬ ಬಯಕೆಯನ್ನು ಗೃಹ ಸಚಿವ ಅಮಿತ್ ಶಾ ಅವರು ವ್ಯಕ್ತಪಡಿಸಿದ್ದಾರೆ. ಕನ್ನಡಿಗರು ಈಗಲೇ ಎಚ್ಚೆತ್ತುಕೊಂಡು, ವಿರೋಧ ತೋರ್ಪಡಿಸದಿದ್ದರೆ ನಮ್ಮ ನಾಡಿನ ಬ್ಯಾಂಕುಗಳಿಗಾದ ಗತಿಯೇ ನಂದಿನಿಗೂ ಆಗಲಿದೆ.
ನಮ್ಮ ರಾಜ್ಯದ ಹಾಲು ಉತ್ಪಾದಕ ರೈತರು ಸುಮಾರು 20,000 ಕೋಟಿ ರೂಪಾಯಿಗಳ ವರೆಗೆ ಹಾಲಿನ ವಹಿವಾಟು ಮಾಡುತ್ತಾರೆ. ಇವರ ಬದುಕು ನಿಂತಿರುವುದು ಹೈನುಗಾರಿಕೆಯ ಮೇಲೆ. ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚಿನಿಂದ ಹಿಡಿದು, ಅಕ್ಕಿ, ಬೇಳೆ, ಬಟ್ಟೆ- ಬರೆ ಮುಂತಾದವುಗಳೆಲ್ಲ ಹಾಲಿನಿಂದಲೆ ಬರಬೇಕು.
ಇಂಥ ಚಿನ್ನದ ಮೊಟ್ಟೆ ಇಡುವ ಕೋಳಿಯ ಮೇಲೆ ಈಗ ಗುಜರಾತ್ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ. ಅವರ ಕಣ್ಣು ಬಿದ್ದ ಕಡೆ, ಅವರು ಕಾಲು ಇಟ್ಟ ಕಡೆ ಎಲ್ಲವೂ ಸರ್ವನಾಶವಾಗುತ್ತದೆ. ಇವರಿಗಾಗಿಯೆ ಹಗಲಿರುಳು ದುಡಿಯುತ್ತಿರುವ ಅಮಿತ್ ಶಾ, ನರೇಂದ್ರ ಮೋದಿ ಮುಂತಾದವರೆಲ್ಲರು ಥರ ಥರದ ಸುಳ್ಳುಗಳನ್ನು ಸಿದ್ಧಪಡಿಸಿಕೊಂಡು ಕನ್ನಡಿಗರ ತಲೆಗೆ ತುಂಬುತ್ತಾರೆ.
ನಮ್ಮನ್ನು ದೋಚಲು ಬಿಜೆಪಿಯವರು ಸಿದ್ಧಪಡಿಸಿಕೊಂಡಿರುವ ಸುಳ್ಳಿನ ಸರಮಾಲೆಯಲ್ಲಿ ಹಿಂದೂ-ಮುಸ್ಲಿಂ ದ್ವೇಷ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಎಂಬ ಕಡ್ಡಾಯವಾದ ಮೂರು ಅಂಶಗಳು ಇರುತ್ತವೆ. ಹಾಗಾಗಿ ಜನರು ಎಚ್ಚರ ವಹಿಸಬೇಕು ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡಿದ್ದಾರೆ.