ದಾವಣಗೆರೆ: ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಆಲೂರು ಗ್ರಾಮ ಪಂಚಾಯಿತಿ ವಿರುದ್ಧ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿನಿಯ ಮನವಿಗೆ ಕೊನೆಗೂ ತಾಲೂಕು ಪಂಚಾಯಿತಿ ಸ್ಪಂದಿಸಿದ್ದು, ಸರ್ಕಾರಕ್ಕೆ ವಿದ್ಯಾರ್ಥಿನಿಯ ಬೇಡಿಕೆ ಕುರಿತು ಪ್ರಸ್ತಾವನೆ ಸಲ್ಲಿಸಿದೆ.
ಕಳೆದ ಆ. 22 ರಂದು 6ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಗೆ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳಿದ್ದು ರಸ್ತೆ ದುರಸ್ತಿಗೊಳಿಸುವುದು ಸೇರಿ ನೀರಿನ ಘಟಕ, ಚರಂಡಿ ಹೂಳು ತೆಗೆಸುವಂತೆ ಗ್ರಾಮ ಪಂಚಾಯಿತಿಗೆ ಆಗ್ರಹಿಸಿದ್ದಳು. ಆ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿನಿಯ ಮನವೊಲಿಸಿದ್ದರು.
ವಿದ್ಯಾರ್ಥಿನಿ ಶಿಕ್ಷಣ ಪಡೆಯುತ್ತಿರುವ ಶ್ರೀ ದೇವರಾಜ ಅರಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಅನುದಾನಿತ ಶಾಲೆಯಾಗಿದ್ದು, ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಖಾಸಗಿ ಮಾಲೀಕರೇ ನಿರ್ಮಿಸಿಕೊಂಡಿದ್ದಾರೆ. ಆದ್ದರಿಂದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಶಾಲಾ ಆಡಳಿತ ಮಂಡಳಿಯೊಂದಿಗೆ ರಸ್ತೆ ದುರಸ್ತಿಗೆ ಸೂಚಿಸಲಾಗಿದೆ.
ಇನ್ನೂ ಆಲೂರು ಗ್ರಾಮದಲ್ಲಿ 4,500 ಜನಸಂಖ್ಯೆ ಇರುವುದರಿಂದ ಈಗಾಗಲೇ 2 ಶುದ್ಧ ಕುಡಿಯುವ ನೀರಿನ ಘಟಕ ಇರುವುದರಿಂದ ಹೆಚ್ಚುವರಿಗೆ ಅವಕಾಶ ನೀಡಿಲ್ಲ. ಉಳಿದಂತೆ ಚರಂಡಿಯ ಹೂಳನ್ನು ತೆಗೆಸುವ ಕಾಮಗಾರಿ ಪೂರೈಸಲಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.