ಯಕ್ಸಂಬಾ: ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ದೂಧಗಂಗಾ ನದಿಗೆ ಪ್ರವಾಹ ಬಂದೆರಗಿ ಸದಲಗಾ-ಬೋರಗಾಂವ ಮಾರ್ಗದ ಸೇತುವೆಯ ಪಶ್ಚಿಮ ಕಡೆಯ ಭಾಗದ ರಸ್ತೆ ಕೊಚ್ಚಿ ಹೋಗಿದ್ದು ದುರಸ್ತಿ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸದಲಗಾ-ಬೋರಗಾಂವ ಸೇತುವೆ 3-4 ದಿನಗಳ ಕಾಲ ಮುಳುಗಡೆಯಾಗಿತ್ತು. ಸಂಚಾರಕ್ಕೆ ಮುಕ್ತವಾದನಂತರ ರಸ್ತೆ ಕೊಚ್ಚಿ ಹೋಗಿರುವುದು ಗೊತ್ತಾಗಿದ್ದು, ಸಂಚರಿಸಲು ಅನಾನುಕೂಲ ವಾಗಿದ್ದು, ಸದಲಗಾ-ಬೋರಗಾಂವ ಸೇತುವೆ ಉಭಯ ರಾಜ್ಯಗಳ ಸಂಪರ್ಕಕೊಂಡಿ ಆಗಿದ್ದರಿಂದ ಶೀಘ್ರವೇ ದುರಸ್ತಿ ಕೈಗೊಳ್ಳಬೇಕೆಂದು ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಮಹಾದಿಂದ 1,15,390 ಕ್ಯೂಸೆಕ್ ನೀರು: ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಹಾಗೂ ಗಡಿ ಭಾಗದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಮಳೆಯ ಪ್ರಮಾಣ ಸಂಪೂರ್ಣವಾಗಿ ಕಡಿಮೆಯಾಗಿ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟ ಇಳಿಕೆಯಾಗಿದ್ದು, 5 ಬ್ಯಾರೇಜಗಳು ಜಲಾವೃತ ಸ್ಥಿತಿಯಲ್ಲಿವೆ.
ಮಂಗಳವಾರ ಸುಳಕುಡ ಬ್ಯಾರೇಜ್ ಮುಖಾಂತರ 24,640 ಮತ್ತು ರಾಜಾಪುರ ಬ್ಯಾರೇಜ್ ಮುಖಾಂತರ 90,750 ಕ್ಯೂಸೆಕ್ ಹೀಗೆ ಒಟ್ಟು 1,15,390 ಕ್ಯೂಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು, ನಿನ್ನೆಗಿಂತ 31,707 ಕ್ಯೂಸೆಕ್ ನೀರು ಕಡಿಮೆ ಹರಿದು ಬರುತ್ತಿರುವುದರಿಂದ ನದಿಗಳ ನೀರಿನ ಮಟ್ಟ 3 ರಿಂದ 4 ಅಡಿಯಷ್ಟು ಇಳಿಕೆಯಾಗಿದೆ.
ವೇದಗಂಗಾ ನದಿಯ ಭೋಜವಾಡಿ-ಶಿವಾಪುರವಾಡಿ, ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಹಾಗೂ ಕೃಷ್ಣಾ ನದಿಯ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಜಲಾವೃತ ಸ್ಥಿತಿಯಲ್ಲಿವೆ.