ದಾಂಡೇಲಿ: ಕಾರವಾರದ ಕಾಳಿ ಸೇತುವೆ ಕುಸಿತದ ನೆನಪು ಇನ್ನೂ ಮಾಸುವ ಮುನ್ನವೇ ದಾಂಡೇಲಿಯ ಕಾಳಿ ಸೇತುವೆ ಶಿಥಿಲಗೊಂಡಿದ್ದು, ಸೇತುವೆಯ ಒಂದೊಂದೇ ಭಾಗ ಕುಸಿಯತೊಡಗಿದೆ. ಕುಳಗಿ ರಸ್ತೆಯಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಆರಂಭಿಕ ಆಧಾರ ಸ್ಥಂಭದ ಎಡಪಾಶ್ವದ ರಕ್ಷಣಾ ಗೋಡೆ ಸಂಪೂರ್ಣವಾಗಿ ಕಾಳಿಯ ನೀರಿನ ಪಾಲಾಗಿದ್ದು, ಭೂಕುಸಿತಗೊಂಡಿದೆ.
ಸೇತುವೆ ಅಪಾಯದ ಸ್ಥಿತಿಯಲ್ಲಿದೆ. 70ರ ದಶಕದಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಕಾಳಿ ಜಲವಿದ್ಯುತ್ ಯೋಜನೆ ಪ್ರಾರಂಭಗೊಂಡಾಗ ಅಂಬಿಕಾನಗರ ನಾಗಝರಿ ಪವರ್ ಹೌಸ್ ನಿರ್ಮಾಣ ಕಾಮಗಾರಿಗಾಗಿ ಬೃಹತ್ ಯಂತ್ರೋಪಕರಣಗಳನ್ನು ಸಾಗಿಸಲು ಈ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದೆ. ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸೇತುವೆಯ ರಕ್ಷಣಾ ಗೋಡೆಗಳು ಕುಸಿದು ಬೀಳುತ್ತಿದೆ. ಸೇತುವೆಯ ಮೇಲೆ ದೊಡ್ಡ, ದೊಡ್ಡ ಹೊಂಡಗಳು ಬಿದ್ದಿದ್ದು, ಆಪಘಾತಕ್ಕೆ ಕಾರಣವಾಗುತ್ತಿದೆ. ಸೇತುವೆಯ ಎರಡು ಬದಿಯ ಫಿಲ್ಲರ್ ಗೋಡೆಗಳ ಮೇಲೆ ನೆಲ್ಲಿಕಾಯಿ, ಪೇರಲ ಮತ್ತು ವಿವಿಧ ಜಾತಿಯ ಗಿಡ ಮರಗಳು ಕಾಂಕ್ರಿಟ್ ಗೋಡೆಯ ಮೇಲೆ ಬೆಳೆದು ನಿಂತಿದೆ. ನೀರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮೊಸಳೆಗಳಿವೆ. ಮೊಸಳೆ ವೀಕ್ಷಣಾ ಕೇಂದ್ರವಾಗಿ ಸೇತುವೆ ಮಾರ್ಪಟ್ಟಿದೆ.
ಈ ಸೇತುವೆಯನ್ನು ನಿರ್ವಹಣೆ ಮಾಡಬೇಕಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆಯ ಸಮೀಪದ ಪ್ರವಾಸಿ ಮಂದಿರ ಮತ್ತು ಕ್ವಾಟರ್ಸ್ ನಲ್ಲೆ ಇದ್ದಾರೆ. ಅಲ್ಲಿಂದ ಸೇತುವೆ ದುರ್ಬಲಗೊಂಡಿರುವುದನ್ನು ಪ್ರತಿನಿತ್ಯ ನೋಡಿದರೂ ಪರಿಶೀಲಿಸುವ ಗೋಜಿಗೆ ಹೋಗದಿರುವದು ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ನಗರದ ಸಂಪರ್ಕ ಕೊಂಡಿಯಾಗಿರುವ ಏಕೈಕ ಸೇತುವೆಯ ದುರಸ್ತಿಗೆ ಮುಂದಾಗಬೇಕಿದೆ. ಇದು ಸಾರ್ವಜನಿಕರ ಒತ್ತಾಸೆ ಕೂಡ.