ಧಾರವಾಡ: ಧರ್ಮಸ್ಥಳದ ಮೇಲೆ ಮಾಡಿದ ಆಪಾದನೆ ಸುಳ್ಳು ಎಂಬುದು ಸಾಬೀತಾಗುತ್ತಿದ್ದಂತೆ ನಮ್ಮ ಎಲ್ಲ ಭಕ್ತರಿಗೆ ಸಮಾಧಾನವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಧರ್ಮಸ್ಥಳದಲ್ಲಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಕ್ಷೇತ್ರದ ಬಗ್ಗೆ ಮಾಡಿದ ಆಪಾದನೆ ಸುಳ್ಳು ಎಂಬುದು ಸಾಬೀತಾಗುತ್ತಿದ್ದಂತೆಯೇ ಎಲ್ಲ ಭಕ್ತರಿಗೆ ಸಂತಸವಾಗಿದೆ ಎಂದರು.
ಕ್ಷೇತ್ರದ ಮೇಲೆ ಅನುಮಾನ ಪಟ್ಟವರು ಕಡಿಮೆ ಇದ್ದರು. ಲಕ್ಷಾಂತರ ಭಕ್ತರು ಧರ್ಮಸ್ಥಳ ಮಂಜುನಾಥೇಶ್ವರನನ್ನು ಆರಾಧ್ಯ ದೈವ ಎಂದೇ ಪರಿಗಣಿಸುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಮಂಜುನಾಥನ ದರ್ಶನ ಪಡೆಯುತ್ತಾರೆ. ಎಸ್‌ಐಟಿ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಪರೀತ ಮಳೆಯಿಂದಾಗಿ ಹಲವೆಡೆ ಮುಂಗಾರು ಬೆಳೆಹಾನಿಯಾಗಿದೆ. ರೈತರು ಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರಕಾರ ರೈತರ ಬೆಂಬಲಕ್ಕಿದ್ದು, ತ್ವರಿತ ಗತಿಯಲ್ಲಿ ಅಗತ್ಯ ಪರಿಹಾರ ಕೊಡಿಸಲು ವಿಶೇಷ ಪ್ರಯತ್ನ ಮಾಡಲಾಗುವುದು ಎಂದು ಅಭಿಪ್ರಾಯಪಟ್ಟರು.