ಡಿಜೆ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾ

0
42

ಬೆಂಗಳೂರು: ಗೌರಿ-ಗಣೇಶ ಹಬ್ಬ, ಈದ್ ಮಿಲಾದ್ ಮೆರವಣಿಗೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಡಿಜೆ ಹಾಗೂ ಸೌಂಡ್ ಸಿಸ್ಟಂ ಬಳಕೆ ನಿರ್ಬಂಧಿಸಿ ಬೆಂಗಳೂರು ಪೊಲೀಸರು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಲಾದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಆಗಸ್ಟ್‌ 14 ರಂದು ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ, ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘಟನೆ ಪದಾಧಿಕಾರಿಯಾದ ಚಾಮರಾಜಪೇಟೆಯ ಶಂಕರ್, ರಿಟ್ ಅರ್ಜಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶನಿವಾರ ಈ ಅರ್ಜಿ ವಿಚಾರಣೆ ನಡೆಸಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸೌಂಡ್ ಸಿಸ್ಟಂ ಮತ್ತು ಡಿಜೆ ನಿರ್ಬಂಧಿಸಿ ಬೆಂಗಳೂರು ಪೊಲೀಸರು ಹೊರಡಿಸಿರುವ ಸುತ್ತೋಲೆಯಲ್ಲಿ ಯಾವುದೇ ಲೋಪಗಳಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

ವಸತಿ ಪ್ರದೇಶದಲ್ಲಿ ಶಬ್ದದ ಮಟ್ಟ ಹಗಲಿನ ವೇಳೆ 55 ಡೆಸಿಬಲ್ ಮತ್ತು ರಾತ್ರಿ ವೇಳೆ 45 ಡೆಸಿಬಲ್ ಮಟ್ಟಕ್ಕೆ ನಿರ್ಬಂಧಿಸಲಾಗಿದೆ. ಆದ್ದರಿಂದ, ಸಾರ್ವಜನಿಕ ಡಿಜೆ ಮತ್ತು ಸೌಂಡ್ ಸಿಸ್ಟಂ ಬಳಕೆಯನ್ನು ಒಪ್ಪಿಕೊಳ್ಳುವುದು ಈ ನ್ಯಾಯಾಲಯಕ್ಕೆ ಕಷ್ಟ ಎಂದು ನ್ಯಾಯಪೀಠ ತಿಳಿಸಿತು.

ಶಬ್ದ ಮಾಲಿನ್ಯ ನಿಯಮಗಳು 2000ಕ್ಕೆ ಅನುಗುಣವಾಗಿ ಮಾರ್ಗದರ್ಶಿ ಸೂತ್ರ ಹೆಣೆಯುವುದನ್ನು ಬಿಟ್ಟು ಈ ರೀತಿ ವ್ಯಾಪಕ ಕಾರ್ಯಾದೇಶ ಹೊರಡಿಸಿರುವುದು ಸಾಂವಿಧಾನಿಕವಾಗಿ ಕೊಡಮಾಡಿರುವ ನಮ್ಮ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಸೌಂಡ್ ಸಿಸ್ಟಂ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದೆ. ಆದರೆ, ಬಳಕೆಯನ್ನು ನಿರ್ಬಂಧಿಸುವುದು ಸಮಂಜಸ ಕ್ರಮವಲ್ಲ ಎಂದು ಅರ್ಜಿದಾರರು ಸುತ್ತೋಲೆಯನ್ನು ಆಕ್ಷೇಪಿಸಿದ್ದರು.

Previous article`ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್ ರಿಲೀಸ್: ʻದಿ ಡೆವಿಲ್’ ಬಿಡುಗಡೆಗೆ ಡೇಟ್‌ ಫಿಕ್ಸ್
Next articleಧಾರವಾಡ: ಆಪಾದನೆ ಸುಳ್ಳಾಗುತ್ತಿದ್ದಂತೆ ಧರ್ಮಸ್ಥಳ ಭಕ್ತರಿಗೆ ಸಂತಸ

LEAVE A REPLY

Please enter your comment!
Please enter your name here