ನವದೆಹಲಿ: ಭಾರತದ ಸರಕುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. 50ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಭಾರತದ ಅಂಚೆ ಸೇವೆಯನ್ನು ಆಗಸ್ಟ್ 25ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಂಚೆ ಇಲಾಖೆ ಶನಿವಾರ ಘೋಷಿಸಿದೆ.
ಪತ್ರಗಳು, ದಾಖಲೆಗಳು ಹಾಗೂ 100 ಡಾಲರ್ ಒಳಗಿನ ವಸ್ತುಗಳನ್ನು ಹೊರತುಪಡಿಸಿ ಅಮೆರಿಕಕ್ಕೆ ಕಳುಹಿಸುವ ಎಲ್ಲಾ ರೀತಿಯ ಸರಕುಗಳನ್ನು ಅಗಸ್ಟ್ 25ರಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಂಚೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಜುಲೈ 30ರಂದು ಅಮೆರಿಕ ಸರ್ಕಾರ ಹೊರಡಿಸಿದ ಕಾರ್ಯನಿರ್ವಾಹಕ ಆದೇಶದನುಸಾರ 800 ಡಾಲರ್ ಮೊತ್ತದವರೆಗಿನ ಸರಕುಗಳಿಗೆ ನೀಡುತ್ತಿದ್ದ ಸುಂಕ ವಿನಾಯಿತಿಯನ್ನು ಅಗಸ್ಟ್ 29ರಿಂದ ಹಿಂಪಡೆಯಲಾಗುವುದು ಎಂದು ಅಮೆರಿಕ ಘೋಷಿಸಿದೆ. ಇದರ ಪರಿಣಾಮವಾಗಿ ಅಮೆರಿಕಕ್ಕೆ ಕಳುಹಿಸಲಾಗುವ ಎಲ್ಲಾ ರೀತಿಯ ಅಂಚೆ ಸೇವೆ ವಸ್ತುಗಳು ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯ ಪ್ರಕಾರ ಸುಂಕದ ಚೌಕಟ್ಟಿಗೆ ಬರುತ್ತದೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಅಮೆರಿಕಕ್ಕೆ ಕಳುಹಿಸುವ ವಸ್ತುಗಳನ್ನು ಬುಕ್ ಮಾಡಿದ ಗ್ರಾಹಕರು ಮರುಪಾವತಿಗೆ ಅರ್ಹ ರಾಗಿರುತ್ತಾರೆ. ಅಂಚೆ ಇಲಾಖೆಯು ಈ ಅಡಚಣೆಗೆ ವಿಷಾದ ವ್ಯಕ್ತಪಡಿಸಿದ್ದು ಸಮಸ್ಯೆ ಬಗೆಹರಿಸಲು ಹಾಗೂ ಸಾಧ್ಯವಾದಷ್ಟು ಬೇಗ ಸೇವೆ ಪುನಃಸ್ಥಾಪಿಸಲು ಪಾಲುದಾರ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದ ಲ್ಲಿದ್ದೇವೆ ಎಂದು ಇಲಾಖೆ ತಿಳಿಸಿದೆ.
ಏಕಾಏಕಿ ಬಂದ್ ಏಕೆ?: ಅಮೆರಿಕದ ಟ್ರಂಪ್ ಆಡಳಿತ ಯುಎಸ್ ಕಸ್ಟಮ್ಸ್ ನಿಯಮಗಳಲ್ಲಿ ಭಾರಿ ಬದಲಾವಣೆ ಮಾಡಿದೆ. ಇದು ಈ ತಿಂಗಳ ಅಂತ್ಯದಲ್ಲಿ ಜಾರಿಗೆ ಬರಲಿದೆ. ಈ ನಿಯಮದನ್ವಯ 800 ಡಾಲರ್‌ವರೆಗಿನ ಸರಕುಗಳಿಗೆ ಸುಂಕ-ಮುಕ್ತ ಡಿ ಮಿನಿಮಿಸ್ ವಿನಾಯಿತಿಯನ್ನು ಹಿಂತೆಗೆದುಕೊಳ್ಳಲಾಗುತ್ತಿದೆ. ಹಾಗಾಗಿ ಭಾರತ ಈ ತೀರ್ಮಾನ ಕೈಗೊಂಡಿದ್ದು 100 ಡಾಲರ್ ಮೌಲ್ಯದ ವಸ್ತುಗಳು ಮಾತ್ರ ರವಾನೆ ಆಗಲಿವೆ ಮತ್ತು ಅನ್ಯ ಎಲ್ಲಾ ಸರಕುಗಳ ರವಾನೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ.
ಅಮೆರಿಕ ಜತೆ ವ್ಯಾಪಾರ ಮಾತುಕತೆಗಳು ಇನ್ನೂ ನಡೆಯುತ್ತಿವೆ: ಭಾರತ ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ಕುರಿತ ಮಾತುಕತೆ ಇನ್ನೂ ನಡೆಯುತ್ತಿದೆ. ಕೆಲ ವಿಷಯಗಳಲ್ಲಿ ಭಾರತ ತನ್ನ ಹಿತಾಸಕ್ತಿಯನ್ನು ನೋಡಿಕೊಳ್ಳಲೇಬೇಕಾಗುತ್ತದೆ. ಹಾಗಾಗಿ ಈ ವಿಷಯದಲ್ಲಿ ಇನ್ನೂ ಯಾವ ನಿರ್ಧಾರಕ್ಕೂ ಬಂದಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಹೇಳಿದ್ದಾರೆ.