ಹಾಸನ: ಮಾವನೂರು ಪ್ರವಾಸೋದ್ಯಮ ತಾಣವಾಗಿಸಲು ಒತ್ತಾಯ

0
55

ಧನ್ಯಕುಮಾರ್

ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಳೇಕೋಟೆ ಹೋಬಳಿಯ ಪ್ರಕೃತಿ ಸೊಬಗಿನ ಹಸಿರಿನ ನಡುವೆ ಇರುವ ಮಾವನೂರು ಬೆಟ್ಟದ ಮಲ್ಲೇಶ್ವರಸ್ವಾಮಿ ದೇವಾಲಯ ಹಾಗೂ ವಿವಿಧ ಪ್ರೇಕ್ಷಣೀಯ ಸ್ಥಳಗಳು ಪ್ರಖ್ಯಾತಿ ಪಡೆದು ನಿಸರ್ಗ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಆದರೆ, ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ನಾಗರಿಕರಲ್ಲಿ ತೀವ್ರ ಬೇಸರ ಮೂಡಿಸಿದೆ. ಭಕ್ತಿ, ಧರ್ಮ, ಆಧ್ಯಾತ್ಮ, ವೈರಾಗ್ಯಗಳ ತಪೋನಿಧಿಯಾಗಿ, ಪುಣ್ಯ ಪುರುಷರ ಜನ್ಮಸ್ಥಾನ ಮತ್ತು ತತ್ವ ಪ್ರತಿಪಾದನಾ ಕ್ಷೇತ್ರವಾಗಿ ಸುವಿಖ್ಯಾತಿ ಪಡೆದ ಧರ್ಮಕ್ಷೇತ್ರದಲ್ಲಿ ವಶಿಷ್ಟ ಮಹಾಋಷಿಗಳಿಗೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಪ್ರತ್ಯಕ್ಷರಾಗಿ ಅನುಗ್ರಹಿಸಿದ ಬಗ್ಗೆ ಧರ್ಮಗ್ರಂಥದಲ್ಲಿ ಉಲ್ಲೇಖವಿದೆ.

ಹಳೇಕೋಟೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯ, ಮಾವಿನಕೆರೆ ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ಸುಂದರ ಕಲೆಯ ಬೀಡಾದ ಆನೆ ಕನ್ನಂಬಾಡಿ ದೇವಾಲಯ, ಯಳೇಶಪುರದ ಎಳ್ಳುಲಿಂಗೇಶ್ವರ ದೇವಾಲಯ, ಹರದನಹಳ್ಳಿಯ ಶ್ರೀ ದೇವೇಶ್ವರ ದೇವಾಲಯ, ಎಣ್ಣೆಹೊಳೆ ರಂಗನಾಥನ ಬೆಟ್ಟ, ಮಳೆಮಲ್ಲಪ್ಪನ ಬೆಟ್ಟ, ಸೀತೆಕಲ್ಲುಬೆಟ್ಟ, ಹಾಳೂರು ಮಾರಮ್ಮ ದೇವಾಲಯ, ಶ್ರೀ ಮಳಲಿ ಗಿಡ್ಡಮ್ಮ ಹಾಗೂ ವೀರ ಶಾಸನಗಳು ಐತಿಹಾಸಿಕ ಹಿನ್ನಲೆ ಹಾಗೂ ತಾಲೂಕಿನ ಹಿರಿಮೆಗೆ ಕೈಗನ್ನಡಿಯಂತಿದೆ.

ಜೊತೆಗೆ ಇತ್ತೀಚೆಗೆ ಅಭಿವೃದ್ಧಿಗೊಂಡಿರುವ ಶ್ರೀ ರಾಮದೇವರಕಟ್ಟೆ ಸುಂದರ ರಮಣೀಯ ಹಾಗೂ ಪ್ರೇಕ್ಷಣೀಯ ಸ್ಥಳವಾಗಿದೆ. ಈ ಎಲ್ಲಾ ಐತಿಹಾಸಿಕ ಹಿನ್ನಲೆಯ ದೇವಾಲಯಗಳು ಹಾಗೂ ಪ್ರೇಕ್ಷಣೀಯ ಸ್ಥಳಗಳು ನಿಸರ್ಗ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಅಗತ್ಯವಿರುವ ಮೂಲಸೌಲಭ್ಯಗಳನ್ನು ಕಲ್ಪಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವುದು ಅತ್ಯಗತ್ಯವಾಗಿದೆ. ಪ್ರವಾಸಿತಾಣಗಳ ವೃದ್ಧಿಯಿಂದ ಸಂಸ್ಕೃತಿ, ಪರಂಪರೆ ಮತ್ತು ಐತಿಹಾಸಿಕ ತಾಣಗಳನ್ನು ಸಂರಕ್ಷಿಸುವ ಜತೆಗೆ ಪ್ರವಾಸೋದ್ಯಮವು ಸ್ಥಳೀಯ ಆರ್ಥಿಕತೆಗೆ ಆದಾಯವನ್ನು ತರುತ್ತದೆ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವ್ಯವಹಾರಗಳನ್ನು ಉತ್ತೇಜಿಸುತ್ತದೆ.

ತಾಲೂಕಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆ, ತುರ್ತು ಸೇವೆಗಳ ಲಭ್ಯತೆ, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಫಲಕಗಳು, ಮಾರ್ಗದರ್ಶನ ಕೇಂದ್ರಗಳಿಂದ ಕೂಡಿದ ಅಭಿವೃದ್ಧಿ ಹಾಗೂ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದಾಗ ಮಾತ್ರ ಪ್ರವಾಸೋದ್ಯಮವು ಯಶಸ್ವಿ ಉದ್ದಿಮೆಯಾಗಿ ರೂಪುಗೊಳ್ಳಲು ಸಾಧ್ಯ.

Previous articleSEMICON India 2025: ಸೆಪ್ಟೆಂಬರ್‌ನಲ್ಲಿ ನಾಲ್ಕನೇ ಆವೃತ್ತಿ ಉದ್ಘಾಟನೆ
Next articleರಿಪ್ಪನ್ ಸ್ವಾಮಿ: ಬ್ಯಾಡಿ ಅವತಾರದಲಿ ವಿಜಯ ರಾಘವೇಂದ್ರ

LEAVE A REPLY

Please enter your comment!
Please enter your name here