ಮೈಸೂರು ದಸರಾ 2025: ಬೂಕರ್ ಪುರಸ್ಕೃತ ಬಾನು‌ ಮುಷ್ತಾಕ್‌ರಿಂದ ದಸರಾ ಉದ್ಘಾಟನೆ

0
78

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಆಚರಣೆಗೆ ಈಗಾಗಲೇ ಸಿದ್ಧತೆಗಳು ಭರದಿಂದ ನಡೆದಿವೆ. ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಮೊದಲ ತಂಡ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಈಗಾಗಲೇ ಮೈಸೂರು ನಗರಕ್ಕೆ ಆಗಮಿಸಿವೆ. ಈ ಬಾರಿ ಒಟ್ಟು 11 ದಿನಗಳ ಕಾಲ ದಸರಾ ಮಹೋತ್ಸವ ನಡೆಯಲಿದೆ.

ದಸರಾ ಹಬ್ಬ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2ರ ವರೆಗೆ ಒಟ್ಟು 11 ದಿನಗಳ ಕಾಲ ನಡೆಯಲಿದೆ. ಈ ಬಾರಿಯ ಮೈಸೂರು ದಸರಾ ಮಹೋತ್ಸವಕ್ಕೆ ಉದ್ಘಾಟಕರಾಗಿ ಯಾರನ್ನು ಆಹ್ವಾನಿಸಬಹುದು ಎಂಬ ಪ್ರಶ್ನೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ್ದಾರೆ.

“ಈ ಬಾರಿ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರು ಉದ್ಘಾಟಿಸಲಿದ್ದು, ಜಿಲ್ಲಾಡಳಿತದ ವತಿಯಿಂದ ಬಾನು ಮುಷ್ತಾಕ್ ಅವರನ್ನು ಗೌರವದಿಂದ ಆಹ್ವಾನಿಸಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಾನು ಮುಷ್ತಾಕ್ ಅವರ ಕೃತಿ ಎದೆಯ ಹಣತೆಗೆ ಬುಕರ್ ಪ್ರಶಸ್ತಿ ದೊರೆತಿದ್ದು, ಕರ್ನಾಟಕದ ಲೇಖಕಿಗೆ ಈ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ರೈತ ಸಂಘ, ಕನ್ನಡ ಚಳವಳಿಯ ಜೊತೆಗೆ ಹೋರಾಟದ ಹಿನ್ನೆಲೆಯುಳ್ಳ ಬಾನು ಮುಷ್ತಾಕ್, ಪ್ರಗತಿಪರ ಚಿಂತಕರೂ ಆಗಿದ್ದಾರೆ” ಎಂದರು. “ಈ ಬಾರಿ ಶಾಸ್ತ್ರದ ಪ್ರಕಾರ ಹನ್ನೊಂದು ದಿನ ದಸರಾ ನಡೆಯಲಿದೆ. ಅಕ್ಟೋಬರ್ 2 ರಂದು ವಿಜಯದಶಮಿ” ಎಂದರು.

“ಈ ಬಾರಿಯ ದಸರಾ ಮಹೋತ್ಸವವನ್ನು ಕಾಂಗ್ರೆಸ್ ಪಕ್ಷದ ವರಿಷ್ಠರಾದ ಸೋನಿಯಾಂಧಿಯವರು ಉದ್ಘಾಟಿಸಲಿದ್ದಾರೆ ಎಂಬ ಕಾಲ್ಪನಿಕ ಸುದ್ದಿಯನ್ನು ಕೆಲ ಮಾಧ್ಯಮಗಳು ವರದಿ ಮಾಡಿವೆ. ಇದು ಸತ್ಯಕ್ಕೆ ದೂರವಾದದ್ದು. ಆ ರೀತಿಯ ಉದ್ದೇಶವಾಗಲೀ, ಪ್ರಸ್ತಾವನೆಯಾಗಲಿ ಸರ್ಕಾರದ ಮುಂದೆ ಇಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ರಕ್ಷಣಾ ಸಚಿವರಿಗೆ ಪತ್ರ: ಮೈಸೂರು ದಸರಾ ಸಂದರ್ಭದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಅನುಮತಿ ದೊರೆತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ಸಿಂಗ್ ಅವರು ದಸರಾ ವೀಕ್ಷಣಗೆ ಆಗಮಿಸಬೇಕೆಂದು ಪತ್ರ ಬರೆದಿದ್ದೇನೆ ಎಂದರು.

ಆ. 29ರಂದು ಪಾದಯಾತ್ರೆಯಲ್ಲಿ ಭಾಗಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಬಿಹಾರದಲ್ಲಿ ಮತ ಕಳ್ಳತನ ನಡೆದಿರುವುದನ್ನು ವಿರೋಧಿಸಿ 16 ದಿನಗಳ ಪಾದಯಾತ್ರೆಯನ್ನು ಕೈಗೊಂಡಿದ್ದು, ಈ ತಿಂಗಳ 29ರಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದರು.

30 ದಿನಗಳ ಕಾಲ ಜೈಲು ಶಿಕ್ಷೆಗೊಳಗಾದ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳನ್ನು ವಜಾ ಮಾಡುವ ಲೋಕಸಭೆಯಲ್ಲಿ ಮಂಡಿಸಿದ ಮಸೂದೆ ಬಗ್ಗೆ ಮಾತನಾಡಿ, ಮಸೂದೆಯನ್ನು ಸದನ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಎಂದರು.

Previous articleಆದಾಯ ತೆರಿಗೆ: ಮಧ್ಯಮ ವರ್ಗದಲ್ಲೇ ಅಚ್ಚರಿಯ ಅಸಮಾನತೆ
Next articleNamma Metro: ಹೆಚ್ಚಿದ ಪ್ರಯಾಣಿಕರ ದಟ್ಟಣೆ ಆರ್.ವಿ.ರಸ್ತೆ ನಿಲ್ದಾಣಕ್ಕೆ ಬ್ಯಾರಿಕೇಡ್

LEAVE A REPLY

Please enter your comment!
Please enter your name here