ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಭಿಮಾನಿಗಳ ಪಾಲಿನ ನಟ ರಾಕ್ಷಸ, ಕನ್ನಡ ನಟ ಡಾಲಿ ಧನಂಜಯ ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಗುರುವಾರ ಪೋಸ್ಟ್ ಹಾಕಿದ್ದಾರೆ.
ಈ ಪೋಸ್ಟ್ ನನ್ನ ಪ್ರೀತಿಯ ಅಭಿಮಾನಿಗಳೇ ಎಂದು ಪ್ರಾರಂಭವಾಗುತ್ತದೆ. August 23, ಪ್ರತಿ ವರ್ಷ ನನ್ನ birthday ಅಂದ್ರೆ ಅದು ನನ್ನ ಹಬ್ಬಕ್ಕಿಂತ ಹೆಚ್ಚು ನಿಮ್ಮ ಹಬ್ಬ. ನಿಮ್ಮಪ್ರೀತಿ, ನಿಮ್ಮ ಎನರ್ಜಿ, ನಿಮ್ಮ ಸಂಭ್ರಮ – ಅದೇ ನನ್ನ ಶಕ್ತಿ.
ಆದ್ರೆ ಈ ಸಲ ನಾನು ಕೆಲಸದ ನಿಮಿತ್ತ ಹೊರಗಡೆ ಹೋಗುತ್ತಿದ್ದೇನೆ. ಈ ಸಂಭ್ರಮಾಚರಣೆಗೆ ನಿಮ್ಮಜೊತೆ ಇರಲಾಗದಿದ್ದರೂ, ನಿಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನೊಡನೆ ಇರುತ್ತದೆ ಎನ್ನುವ ದೃಢ ನಂಬಿಕೆಯಿದೆ.
ಮುಂದಿನ ಸಲ ಇನ್ನೂ ಡಬ್ಬಲ್ ಎನರ್ಜಿ, ಡಬ್ಬಲ್ ಸಂಭ್ರಮ, ಜೊತೆಗೆ ಆಚರಿಸೋಣ. Love you all
ಪ್ರೀತಿಯಿಂದ,
ಡಾಲಿ
ಎಂದು ಪೋಸ್ಟ್ ಅಂತ್ಯವಾಗಿದೆ.
ಡಾಲಿ ಧನಂಜಯ ನಟನೆಯ ಹಲವು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ. ಕೆಲವು ಅಂತಿಮ ಹಂತದಲ್ಲಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ.
‘ಕವಲುದಾರಿ’, ‘ಸಪ್ತಸಾಗರದಾಚೆ ಎಲ್ಲೋ’ ನಿರ್ದೇಶನ ಮಾಡಿದ್ದ ಹೇಮಂತ್ ಎಂ. ರಾವ್ ಡಾಲಿ ಧನಂಜಯಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಇಬ್ಬರ ಕಾಂಬಿನೇಶನ್‌ನ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಎಂದು ನಾಮಕರಣ ಮಾಡಲಾಗಿದೆ. ಜೂನ್ 27ರಂದು ಈ ಚಿತ್ರವನ್ನು ಘೋಷಣೆ ಮಾಡಲಾಗಿದೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
2025ರ ಫೆಬ್ರವರಿಯಲ್ಲಿ ಡಾಲಿ ಧನಂಜಯ ಡಾ.ಧನ್ಯತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನಲ್ಲಿ ಅದ್ದೂರಿಯಾಗಿ ವಿವಾಹ ನಡೆದಿತ್ತು. ವಿವಾಹದ ಬಳಿಕ ಡಾಲಿ ಧನಂಜಯ ಮೊದಲ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
ಡಾಲಿ ಧನಂಜಯ ಲಿಡ್ಕರ್ ಉತ್ಪನ್ನಗಳಿಗೆ ರಾಯಭಾರಿಯಾಗಿದ್ದಾರೆ. ಉಚಿತವಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಡಾಲಿ ಧನಂಜಯ ಎದುರಲ್ಲೇ ಘೋಷಣೆ ಮಾಡಿದ್ದರು.
ಲಿಡ್ಕರ್ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಕಾಯಕ ವರ್ಗದ ಕುಶಲಕರ್ಮಿಗಳ ಅದ್ಭುತ ಕಲಾಕೃತಿಗಳನ್ನು ರಾಜ್ಯದ ಜನರಿಗೆ ವ್ಯಾಪಕವಾಗಿ ತಲುಪಿಸುವ ಕಾರ್ಯ ಮಾಡುತ್ತಿರುವ ಲಿಡ್ಕರ್ ನಿಗಮಕ್ಕೆ ಭೇಟಿ ನೀಡಿದ್ದರು.