ಮಹಾಂತಯ್ಯ ಹಿರೇಮಠ
ಬಾಗಲಕೋಟೆ: ಕುಳಗೇರಿಯ ಗೋವನಕೊಪ್ಪ ಸರಕಾರಿ ಪ್ರೌಢ ಶಾಲೆ ಕಟ್ಟಡ ಶಿಥಿಲಗೊಂಡಿದ್ದು ಸದ್ಯ ಜಿಟಿ ಜಿಟಿ ಮಳೆಗೆ ಸೋರತೊಡಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಶಿಕ್ಷಕರು ಕಟ್ಟಡ ಯಾವಾಗ ಬೀಳುವುದೋ ಎಂಬ ಭಯದಲ್ಲಿ ಇದ್ದಾರೆ.
ಭಯಭೀತರಾದ ಶಿಕ್ಷಕರು-ಅಧಿಕಾರಿಗಳು ವಿದ್ಯಾರ್ಥಿಗಳನ್ನ ಗ್ರಾಮದ ಬ್ರಹ್ಮಾನಂದರ ದೇವಸ್ಥಾನಕ್ಕೆ ಸ್ಥಳಾಂತರಿಸಿ ಪಾಠ ಪ್ರವಚನ ಆರಂಭಿಸಿದ್ದಾರೆ. ಬೆಳಕಿನ ವ್ಯವಸ್ಥೆ ಇಲ್ಲದೆ ಕತ್ತಲು ಕವಿದ ದೇವಸ್ಥಾನದಲ್ಲಿ ವಿದ್ಯಾರ್ಥಿಗಳು ಓದುವುದೇ ಪರಾಕಷ್ಟವಾದೆ. ನಮಗೆ ಶಾಶ್ವತ ಪರಿಹಾರ ಕೊಡಿ ಎಂದು ವಿದ್ಯಾರ್ಥಿಗಳು ಗೋಗರೆಯುತ್ತಿದ್ದಾರೆ.
ಈ ಸರ್ಕಾರಿ ಶಾಲೆಯ ಕಟ್ಟಡಗಳು ಶಿಥಿಲಗೊಂಡು ಹಲವು ವರ್ಷಗಳೇ ಕಳೆದಿವೆ. ಸದ್ಯ ಶಾಲೆಯ ಮೇಲ್ಛಾವಣಿಯ ಸಿಮೆಂಟ್ ಉದುರಿ ಕಬ್ಬಿಣದ ಸಲಾಕೆಗಳು ಕಾಣುತ್ತಿದ್ದು ಭಯದಲ್ಲೆ ಪಾಠ ಬೋಧನೆ ಮುಂದುವರೆಸಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪಟ್ಲೂರ ಮುಂಜಾಗೃತ ಕ್ರಮವಾಗಿ ಗ್ರಾಮಸ್ಥರ ಸಹಕಾರದಿಂದ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಮಕ್ಕಳ ಪಾಠ ಬೋಧನೆಗೆ ಈ ದೇವಸ್ಥಾನದಲ್ಲಿ ಸರಿಯಾದ ಸ್ಥಳ ಇಲ್ಲದಂತಾಗಿದೆ. ಇಕ್ಕಾಟ್ಟಾದ ಸ್ಥಳದಲ್ಲೇ ಹೇಗೋ ಕಲಿಕೆ ಶುರು ಮಾಡಿದ್ದಾರೆ.
ಈಚೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಈ ಶಾಲೆಗೆ ಭೇಟಿ ನೀಡಿದ್ದಾರೆ ಶಾಲೆಯ ಕಟ್ಟಡ ಪರಿಶೀಲನೆ ಮಾಡಿದ್ದಾರೆ. ಶಾಶ್ವತ ಪರಿಹಾರ ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ಇಂದು ಶಿಕ್ಷಣ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಭೇಟಿ ಕೊಟ್ಟಿದ್ದಾರೆ.
ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಶಿಥಿಲಗೊಂಡ ಶಾಲೆಯ ಕಟ್ಟಡ ಸಂಪೂರ್ಣ ಕೆಡವಿ ನೂತನ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.