ಮಲಪ್ರಭಾ ನದಿಗೆ 12 ಸಾವಿರ ಕ್ಯೂಸೆಕ್ ನೀರು: ಪ್ರವಾಹಕ್ಕೆ ಬಹುತೇಕ ಬೆಳೆಗಳು ಜಲಾವೃತ

0
82

ಮಹಾಂತಯ್ಯ ಹಿರೇಮಠ
ಬಾಗಲಕೋಟೆ(ಕುಳಗೇರಿ ಕ್ರಾಸ್):
ಬಾಗಲಕೋಟೆ ಜಿಲ್ಲೆಯ ಗಡಿ ಭಾಗ ಮಲಪ್ರಭಾ ನದಿಗೆ 12,794 ‌ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ರೈತರ ಬೆಳೆಗಳಾದ ಹೆಸರು, ಗೋವಿನಜೋಳ, ಸೂರ್ಯಕಾಂತಿ, ಕಬ್ಬು ಸೇರಿದಂತೆ ಈರುಳ್ಳಿ, ಪೇರಲ ಮುಂತಾದ ತೋಟಗಾರಿಕೆ ಬೆಳೆಗಳು ಬಹುತೇಕ ಜಲಾವೃತಗೊಂಡಿವೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕಿಡಾಗಿದ್ದಾರೆ.

ಕಳೆದ ವಾರ ಜಲಾಶಯದ ಒಳ ಹರಿವು ಕಡಿಮೆಯಾಗಿದ್ದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದರು. ಸದ್ಯ ಜಲಾನಯಣ ಪ್ರದೇಶದಲ್ಲಿ ಮತ್ತೆ ಮಳೆ ಹೆಚ್ಚಿದ್ದರಿಂದ 10 ಸಾವಿರ ಕ್ಯೊಸೆಕ್ ಅಧಿಕ ನೀರು ಸತತವಾಗಿ ಹರಿಯುತ್ತಿದೆ. ರೈತರ ಜಮಿನಿನಲ್ಲಿ ಪ್ರವಾಹದ ನೀರು ನಿಂತಿದ್ದು ಬಿಟ್ಟುಬಿಡದೆ ಜಿಟಿ ಜಿಟಿ ಮಳೆಯು ಸುರಿಯುತ್ತಿರುವುದರಿಂದ ರೈತರ ಬೆಳೆಗಳು ತಂಪೇರಿ ಕೊಳೆಯುವ ಸ್ಥಿತಿ ತಲುಪಿದೆ.

ತೋಟಗಾರಿಕೆ ಅಧಿಕಾರಿಗಳ ಬೇಜವಾಬ್ದಾರಿ: ಈ ಭಾಗದ ರೈತರಿಗೆ ತೋಟಗಾರಿಕೆ ಅಧಿಕಾರಿಗಳ ಮಾರ್ಗದರ್ಶನ ಬೇಕಿದೆ. ಇಲ್ಲಿ ಸಾಕಷ್ಟು ರೈತರು ತೋಟಗಾರಿಕೆ ಬೆಳೆಗಳನ್ನ ಬೆಳೆಯುತ್ತಾರೆ ಆದರೆ ಯಾವ ಅಧಿಕಾರಿಗಳು ಇವರಿಗೆ ಭೇಟಿ ಕೊಡುವುದಾಗಲಿ ಮಾರ್ಗದರ್ಶನ ಮಾಡುವುದಾಗಲಿ ಮಾಡುವುದಿಲ್ಲ ಎಂಬ ಆರೊಪ ಕೇಳಿಬರುತ್ತಿದೆ.

ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ನವಿಲುತೀರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಬಹುತೇಕ ಬೆಳೆಗಳಲ್ಲಿ ಪ್ರವಾಹದ ನೀರು ನಿಂತಿದ್ದು ರೈತರು ಚಿಂತೆಗೀಡಾಗಿದ್ದಾರೆ. ರಾಶಿಗೆ ಬಂದ ಕೆಲವು ಬೆಳೆಗಳನ್ನ ರಕ್ಷಿಸುವಲ್ಲಿ ರೈತರು ಹರಸಾಹಸ ಪಡುತ್ತಿದ್ದಾರೆ.

ಆರೋಪ: ಇನ್ನು ಹದಿನೈದು ದಿನ ಕಳೆದಿದ್ದರೆ ನಮ್ಮ ಬೆಳೆಗಳು ನಮ್ಮ ಕೈ ಸೇರುತ್ತಿದ್ದವು. ಸದ್ಯ ಬೆಳೆ ಕೈ ಸೇರುವ ಸಮಯದಲ್ಲೇ ಈ ರೀತಿ ಹೊಳಿ ನೀರು ಹೊಲ ಹೊಕ್ಕು ಪ್ರತಿ ವರ್ಷ ಹಾಳ ಮಾಡಿ ಹೊಕೈತಿ. ಏನ ಮಾಡೋಣ ಹೇಳಿ ನಮಗ್ಯಾರು ಅಧಿಕಾರಿಗಳು ಮುನ್ಸೂಚನೆ ಕೊಡೊದಿಲ್ಲ, ತೋಟಗಾರಿಕೆ ಅಧಿಕಾರಿಗಳಂತೂ ಬರೋದೇ ಇಲ್ಲ ನಮ್ಮ ಬೆಳಿ ಯಾರ ನೋಡುವಾರ? ಪರಿಹಾರ ಯಾರ ಕೊಡುವಾರ? ಈ ಸಲ ಬೆಳಿ ಅರ್ಧ ಕೈ ಸೇರತ್ತ ಇನ್ನರ್ಧ ನೀರು ಪಾಲಾಗತ್ತ ಎಂದು ಹಾಗನೂರ ರೈತ ಕಾಮಣ್ಣ ಧರಿಯಪ್ಪ ಹೆಬ್ಬಳ್ಳಿ ಸಂಯುಕ್ತ ಕರ್ನಾಟಕದ ಎದುರು ತಮ್ಮ ಅಳಲು ತೋಡಿಕೊಂಡರು.

ಸುತ್ತುವರೆದು ಸಂಚಾರ: ಸದ್ಯ 12,794 ಕ್ಯೂಸೆಕ್ ನೀರನ್ನ ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ಹಳೆ ಸೇತುವೆ ಮೇಲೆ ನೀರು ಹರಿಯಲು ಪ್ರಾರಂಭಿಸಿದ್ದು ಹೆದ್ದಾರಿ ಸಂಪರ್ಕ ಕಳೆದುಕೊಂಡಿದೆ. ಸದ್ಯ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಸುತ್ತುವರೆದು ಸಂಚಾರ ಮಾಡುತ್ತಿದ್ದಾರೆ.

ಹುಬ್ಬಳ್ಳಿ-ಸೊಲ್ಲಾಪೂರ ಸಂಪರ್ಕ ಕಲ್ಪಿಸುವ ಮಲಪ್ರಭಾ ನದಿಯ ಹಳೆ ಸೇತುವೆ ಮೇಲೆ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಿದ್ದು ಪರಿಣಾಮ ಸೇತುವೆ ಜಲಾವೃತಗೊಂಡಿದೆ. ಸದ್ಯ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಬಂದು ರಸ್ತೆ ಸಂಚಾರ ಸ್ಥಗಿತಗೊಳಿಸಿದ್ದು ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಮುಳ್ಳು-ಕಂಠಿ ಬೇಲಿ ಹಾಕಿದ್ದಾರೆ.

ಸಂಚಾರ ಸ್ಥಗಿತಗೊಂಡಿದ್ದರಿಂದ ಬಸ್ ಸೇರಿದಂತೆ ಬಹುತೇಕ ವಾಹನಗಳು ಹೊಸ ಸೇತುವೆ ಮೂಲಕ ಸಂಚರಿಸುತ್ತಿವೆ. ನದಿ ಪಾತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಹಲವು ಸೇತುವೆಗಳು ಈಗಾಗಲೇ ಜಲಾವೃತಗೊಂಡಿವೆ. ಸಂಪರ್ಕ ರಸ್ತೆ ಕಡಿತಗೊಂಡಿದ್ದರಿಂದ ಜನರಿಗೆ ಸುತ್ತುವರೆದು ನದಿ ದಾಟುವ ಪರಿಸ್ಥಿತಿ ಎದುರಾಗಿದೆ.

Previous articleಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ
Next articleʻಮತ ಕಳ್ಳತನ-ಅಭಿಯಾನʼ ಕಾಂಗ್ರೆಸ್‌ ನಾಟಕ

LEAVE A REPLY

Please enter your comment!
Please enter your name here