ಹುಬ್ಬಳ್ಳಿ: ಜೂನ್‌ನಿಂದ ಶುರುವಾಗಿರುವ ಮಳೆ ಇವತ್ತಿನವರೆಗೂ ನಿರಂತರವಾಗಿ ಧಾರವಾಡ ಜಿಲ್ಲೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಇಷ್ಟು ದಿನಗಳ ಕಾಲ ಮಳೆ-ಬಿಸಿಲಿನ ನಿಯಮ ಕಾಪಾಡಿಕೊಂಡಿದ್ದು, ಈಗ ಕಳೆದ ಎರಡ್ಮೂರು ದಿನಗಳಿಂದ ತೀವ್ರ ಮೋಡ ಮುಸುಕಿದ ವಾತಾವರಣ, ತಂಪು ಗಾಳಿ ಹಾಗೂ ಜಿಟಿಜಿಟಿ ಮಳೆಯಾಗುತ್ತಿದ್ದು, ಧಾರವಾಡದಲ್ಲಿ ಪೂರ್ಣ ಮಲೆನಾಡಿನ ಮಳೆ ಪರಿಸರ ಸೃಷ್ಟಿಯಾಗಿದೆ.
ಮಾರುಕಟ್ಟೆಗಳೆಲ್ಲವೂ ರಾಡಿ. ರಸ್ತೆಗಳು ಸಹ ಕೆಸರು. ತಂಡಿಯ ಹೊಡೆತಕ್ಕೆ ಎಲ್ಲರೂ ರೇನ್‌ಕೋಟ್ ಅಥವಾ ಬೆಚ್ಚನೆಯ ಜಾಕೆಟ್, ಪಾದಚಾರಿಗಳು ಕಡ್ಡಾಯವಾಗಿ ಕೈಯಲ್ಲಿ ಛತ್ರಿ ಹಿಡಿದುಕೊಂಡೇ ಅಡ್ಡಾಡುವ ಪರಿಸ್ಥಿತಿ ಈ ವಾತಾವರಣ ತಂದಿಟ್ಟಿದೆ. ಇನ್ನು, ವಾತಾವರಣದ ಬದಲಾವಣೆಯಿಂದಾಗಿ ನೆಗಡಿ, ಕೆಮ್ಮು, ಜ್ವರ ಅಂತಹ ರೋಗಗಳು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿದ್ದು ತೀವ್ರ ಚಳಿಗಾಳಿ, ಮಳೆಗೆ ಅವಳಿ ನಗರದ ಜನ ಅಕ್ಷರಶಃ ಮೆತ್ತಗಾಗಿದ್ದಾರೆ.
ಕಳೆದೆರಡು ದಿನಗಳಿಂದ ರಾತಿ ಪೂರ್ತಿ ಮಳೆಯಾಗುತ್ತಿದೆ. ಧಾರವಾಡದ ವಾತಾವರಣ ಪೂರ್ತಿ ಬದಲಾಗಿದ್ದು, ಮಲೆನಾಡಂತಾಗಿದೆ. ಅತೀವ ಥಂಡಿ ವಾತಾವರಣ ನಿರ್ಮಾಣವಾಗಿದೆ. ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ವಿವಿಧ ಕೆಲಸ ಕಾರ್ಯಕ್ಕೆ ಸರ್ಕಾರಿ ಕಚೇರಿಗಳಿಗೆ ಹಾಗೂ ಸಂತೆಗೆ ಹೋಗಬೇಕೆನ್ನುವರು ಮಳೆ ಉಪಟಳದಿಂದ ಬೇಸತ್ತು ಕೆಲವರು ಮನೆಯಲ್ಲೇ ಉಳಿತುಕೊಳ್ಳುವಂತಾಗಿದೆ. ಕೆಲವರು ಅನಿವಾರ್ಯ ಕೆಲಸ ದಿಂದ ಮಳೆ ಲೆಕ್ಕಿಸದೇ ಛತ್ರಿ, ಜರ್ಕಿನ್, ರೇನ್ಕೋಟ್ ಹಾಕಿಕೊಂಡು ಜನರು ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದ ಮಂಗಳವಾರ ನಗರದ ರಸ್ತೆಗಳಲ್ಲಿ ವಾಹನಗಳು ನಿಧಾನವಾಗಿ ಸಂಚರಿಸುತ್ತಿದ್ದವು. ರಾಣಿ ಚೆನ್ನಮ್ಮ ವೃತ್ತ, ಮಹಾನಗರ ಪಾಲಿಕೆ ಎದುರು, ಸಿಬಿಟಿ ಸುತ್ತಮುತ್ತ, ಹೊಸುರ ಕ್ರಾಸ್, ವಿದ್ಯಾನಗರ ರಸ್ತೆ, ಇಂಡಿಪಂಪ್, ಬನ್ನಿಗಿಡ, ರೈಲ್ವೆ ನಿಲ್ದಾಣದ ಎದುರು ಸೇರಿದಂತೆ ವಿವಿಧೆಡೆ ಮಳೆಯಿಂದ ಸಂಚಾರ ದಟ್ಟಣೆ ಸಮಸ್ಯೆ ನಿರ್ಮಾಣವಾಗಿತ್ತು.
ವಿವಿಧ ಕೆಲಸಕ್ಕಾಗಿ ಗ್ರಾಮೀಣ ಭಾಗದಿಂದ ಬರುವ ಜನರು ಮಳೆಯ ನೆನೆದುಕೊಂಡು ಓಡಾಡುವುದು ಕಂಡುಬಂತು. ಎಲ್ಲಿನೋಡಿದರೂ ಮಳೆ ನೀರು ಕಾಣಿಸುತ್ತಿದೆ. ಮಳೆ ಕಾರಣದಿಂದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಜನತಾ ಬಜಾರ ಹಾಗೂ ದುರ್ಗದಬೈಲ್‌ಗಳಲ್ಲಿ ಬೆರಳೆಣಿಕೆ ವ್ಯಾಪಾರಿಗಳು ಮಾತ್ರ ಛತ್ರಿ ಆಸರೆಯಲ್ಲಿ ಹೂವು, ಹಣ್ಣು ಮಾರಾಟದಲ್ಲಿ ತೊಡಗಿರುವುದು ಕಂಡುಬಂತು.
ವಾಡಿಕೆಗಿಂತ ಹೆಚ್ಚಿನ ಮಳೆ: ಹವಾಮಾನ ಇಲಾಖೆ ಅಂಕಿ-ಅಂಶಗಳ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 2.9 ಮಿಮೀ ವಾಡಿಕೆ ಮಳೆ ಪೈಕಿ 12 ಮಿಮೀ ಆಗಿದೆ. ಧಾರವಾಡದಲ್ಲಿ 2.3 ಮಿಮೀ ಪೈಕಿ 12.3 ಮಿಮೀ, ಹುಬ್ಬಳ್ಳಿಯಲ್ಲಿ 2.6 ಪೈಕಿ 9 ಮಿಮೀ, ಕಲಘಟಗಿಯಲ್ಲಿ 24.4. ಮಿಮೀ, ಕುಂದಗೋಳದಲ್ಲಿ 11.7 ಮಿಮೀ, ನವಲಗುಂದದಲ್ಲಿ 5.3 ಮಿಮೀ, ಹುಬ್ಬಳ್ಳಿ ನಗರದಲ್ಲಿ 5.2 ಮಿಮೀ, ಅಳ್ನಾವರದಲ್ಲಿ 26.2 ಹಾಗೂ ಅಣ್ಣಿಗೇರಿಯಲ್ಲಿ 5.2 ಮಿಮೀ ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯ ಎಲ್ಲ ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚಾಗಿಯೇ ಮಳೆಯಾಗಿದೆ. ಮಳೆ ಜತೆಗೆ ಶೀತ ಗಾಳಿ ಜನರನ್ನು ಮೆತ್ತಗಾಗಿಸಿದೆ.
ಮಳೆಗೆ ಹುಬ್ಬಳ್ಳಿಯಲ್ಲಿ 11 ಮನೆ ಕುಸಿತ: ಹುಬ್ಬಳ್ಳಿಯಲ್ಲಿ ಸತತ ಮಳೆಯಿಂದ ಮಹಾನಗರ ವ್ಯಾಪ್ತಿಯ ವಿವಿಧ ಬಡಾವಣೆ ಗಳಲ್ಲಿ ಒಟ್ಟು 11 ಮನೆಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹುಬ್ಬಳ್ಳಿ ತಹಸೀಲ್ದಾರ್ ಮಹೇಶ ಗಸ್ತೆ ತಿಳಿಸಿದ್ದಾರೆ.
ಹಳೇ ಹುಬ್ಬಳ್ಳಿ ಭಾಗದಲ್ಲಿ 7 ಮನೆಗಳು, ಗೋಕುಲ ಎಂಟಿಎಸ್ ಕಾಲನಿಯಲ್ಲಿ 2 ಹಾಗೂ ಗಾಮನಗಟ್ಟಿ, ಕೇಶ್ವಾಪುರದಲ್ಲಿ ತಲಾ ಒಂದು ಕಡೆ ಮನೆಗಳು ಬಿದ್ದಿವೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಮಣ್ಣಿನ ಮನೆಗಳಲ್ಲಿ ವಾಸವಾಗಿರುವವರು ಮುನ್ನೆಚ್ಚರಿಕೆ ವಹಿಸಬೇಕು. ಮನೆ ಬೀಳುವಂತಹ ಸ್ಥಿತಿಯಲ್ಲಿದ್ದರೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ.