ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಸಮಾಧಿಯನ್ನು ಇತ್ತೀಚೆಗೆ ನೆಲಸಮಗೊಳಿಸಿದ ಬೆನ್ನಲ್ಲೇ ರಾಜ್ಯಾದ್ಯಂತ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ನಟ ಸುದೀಪ್ ವಿಷ್ಣು ಸ್ಮಾರಕಕ್ಕಾಗಿಯೇ ಕೆಂಗೇರಿ ಬಳಿ ಜಾಗ ಖರೀದಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಸುದೀಪ್. ಇತ್ತೀಚೆಗೆ ದಾದಾ ಸಮಾಧಿ ಧ್ವಂಸ ವಿಚಾರ ತಿಳಿದು ಭಾವುಕರಾಗಿದ್ದರು. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ, ಅವರ ಮನವೊಲಿಸಿ, ಅವರಿಗೆ ಸಾಹಸಸಿಂಹ ಸ್ಮಾರಕ ಇದ್ದ ಜಾಗವನ್ನಾದರೂ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ ಎಂದು ಸುದೀಪ್ ಟ್ವೀಟ್ ಮಾಡಿದ್ದರು. ಈಗ ಕೆಂಗೇರಿ ಬಳಿಕ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸುದೀಪ್ ಭೂಮಿ ಖರೀದಿಸಿದ್ದಾರೆ ಎಂದಿದ್ದಾರೆ.
ಸುದೀಪ್ ಅಭಿಮಾನ್ ಸ್ಟುಡಿಯೋದಿಂದ ಕೊಂಚ ದೂರದಲ್ಲೇ ಇರುವ ಕೆಂಗೇರಿ ಬಳಿ ಅರ್ಧ ಎಕರೆ ಜಾಗ ಖರೀದಿಸಿದ್ದಾರೆ. ಸೆಪ್ಟೆಂಬರ್ 2ರಂದು ನಟ ಸುದೀಪ್ ಜನ್ಮದಿನ. ಆ ದಿನದಂದೇ ವಿಷ್ಣು ಸ್ಮಾರಕದ ರೂಪುರೇಷೆ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಲಿದೆ. ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಹುಟ್ಟುಹಬ್ಬದ ದಿನವೇ ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದಾಗಿ ಮಾಹಿತಿ ಲಭ್ಯವಾಗಿದೆ.
2009ರಲ್ಲಿ ವಿಷ್ಣುವರ್ಧನ್ ನಿಧನರಾಗಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿತ್ತು. ಅಲ್ಲೇ ಸಮಾಧಿ ನಿರ್ಮಿಸಿ ಸಣ್ಣ ಗೋಪುರ ನಿರ್ಮಿಸಲಾಗಿತ್ತು. ಅಲ್ಲೇ ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನಿಸಲಾಗಿತ್ತು. ಆದರೆ ಅದು ಸಾಧ್ಯವಾಗದೇ ಇದ್ದಾಗ ವಿಷ್ಣು ಕುಟುಂಬಸ್ಥರ ಆಸೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಯಿತು.
ಎಷ್ಟೇ ಪ್ರಯತ್ನಿಸಿದರೂ ಅಲ್ಲಿ ಸ್ಮಾರಕ ನಿರ್ಮಿಸುವ ಅಭಿಮಾನಿಗಳ ಕನಸು ಈಡೇರಲೇ ಇಲ್ಲ. ಇತ್ತೀಚೆಗೆ ದಿಢೀರನೆ ಬಾಲಕೃಷ್ಣ ಕುಟುಂಬದವರು ಸಮಾಧಿಯನ್ನು ಧ್ವಂಸ ಮಾಡಿದ್ದರು. ಆದರೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಅಲ್ಲೇ ಸಮಾಧಿ ನಿರ್ಮಾಣ ಆಗಬೇಕು ಎಂದು ಪಟ್ಟು ಹಿಡಿದಿದ್ದರು ಎಂದು ತಿಳಿಸಿದರು.
ಮೈಸೂರಿನಲ್ಲಿ ವಿಷ್ಣು ಸ್ಮಾರಕ: ಈಗಾಗಲೇ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ ಅವರ ಸ್ಮಾರಕ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 2.75 ಎಕರೆ ಪ್ರದೇಶದಲ್ಲಿ ಮ್ಯೂಸಿಯಂ, ವಿಷ್ಣು ಪುತ್ಥಳಿ, ಚಿತ್ರರಂಗದಲ್ಲಿ ಅವರ ಹೆಜ್ಜೆಗುರುತು, ಅಪರೂಪದ ಚಿತ್ರಗಳು ಸೇರಿದಂತೆ ಆಡಿಟೋರಿಯಂ, ಎರಡು ಕ್ಲಾಸ್ ರೂಮ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಮಾರಕ ನಿರ್ಮಾಣಕ್ಕೆ ಬಿ.ಎಸ್. ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು.
ಕಣ್ಣೀರು ಹಾಕಿದ್ದ ನಿರ್ದೇಶಕ ರವಿ ಶ್ರೀವತ್ಸ: ವಿಷ್ಣು ಸಮಾಧಿ ಸ್ಥಳದಿಂದಲೇ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ನಿರ್ದೇಶಕ ರವಿ ಶ್ರೀವತ್ಸ, “ನನಗೆ ಅನ್ನ ಕೊಟ್ಟಂತಹ, ನನಗೆ ಸೂರು ಕೊಟ್ಟಂತಹ, ನಮಗೆ ಹೆಸರು ತಂದುಕೊಟ್ಟಂತಹ ದೇವರ ಗುಡಿಯನ್ನು ಇಂದು ನೆಲಸಮ ಮಾಡಿದ್ದಾರೆ. ಇದು ನನ್ನ ಯಜಮಾನರು ಮಲಗಿದ್ದಂತಹ ಜಾಗ. ಅಲ್ಲೊಂದು ಪುಟ್ಟ ಗುಡಿ ಇತ್ತು. ಸಣ್ಣ ಗೋಪುರ ಇತ್ತು. ಆ ಗೋಪುರವನ್ನು ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ. ನಮ್ಮ ಯಜಮಾನರನ್ನು ನೋಡಲು ಬಂದರೆ ಗೇಟ್ ಕೂಡ ತೆಗೆಯುತ್ತಿಲ್ಲ. ಒಳಗಡೆ ಪೊಲೀಸರು ಸರ್ಪಗಾವಲು ಹಾಕಿಕೊಂಡು ಕೂತ್ತಿದ್ದಾರೆ. ಬ್ಯಾರಿಕೇಡ್ ಹಾಕಿದ್ದಾರೆ. ಸಮಾಧಿಯನ್ನೂ ಕಾಪಾಡಿಕೊಳ್ಳಲಾಗದ ಪರಿಸ್ಥಿತಿಗೆ ನಾವು ಬಂದಿದ್ದೇವೆ” ಎಂದು ಕಣ್ಣೀರು ಹಾಕಿದ್ದರು.
“ಇಂದು ನಮ್ಮ ಸಮಾಜ ನಮ್ಮನ್ನು ಅನಾಥರನ್ನಾಗಿ ಮಾಡಿದೆ. ಇಂದು ನಾವು ನಿಜವಾಗಿಯೂ ನಮ್ಮ ಯಜಮಾನನ್ನು ಕಳೆದುಕೊಂಡಿದ್ದೇವೆ. ನೆಮ್ಮದಿಯಾಗಿ ಮಲಗಿದ್ದ ನಮ್ಮ ಯಜಮಾನನ ಜಾಗ ತೆರವು ಮಾಡಲಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಎಲ್ಲಿದ್ದೀರ? ಬನ್ನಿ ಸ್ವಾಮಿ ಇಲ್ಲಿ ಏನಾಗಿದೆ ಅಂತಾ ನೋಡುವಿರಂತೆ” ಎಂದು ಕಿಡಿಕಾರಿದ್ದರು.