ನವದೆಹಲಿ: ಭಾರತ 100 ಗೀಗಾ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯದ ಮೈಲಿಗಲ್ಲು ಸಾಧಿಸಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿರುವ ಭಾರತ ಒಟ್ಟು 100 ಗೀಗಾ ವ್ಯಾಟ್ ಸೌರ ಮಾಡ್ಯುಲ್ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಅವರು ಪೋಸ್ಟ್ ಅನ್ನು ಮರು ಪೋಸ್ಟ್ ಮಾಡಿರುವ ಅವರು, “ಇದು ಸ್ವಾವಲಂಬನೆಯತ್ತ ಮತ್ತೊಂದು ಮೈಲಿಗಲ್ಲು! ಇದು ಭಾರತದ ಉತ್ಪಾದನಾ ಸಾಮರ್ಥ್ಯಗಳ ಯಶಸ್ಸನ್ನು ಮತ್ತು ಶುದ್ಧ ಇಂಧನವನ್ನು ಜನಪ್ರಿಯಗೊಳಿಸುವ ನಮ್ಮ ಪ್ರಯತ್ನಗಳನ್ನು ಚಿತ್ರಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
2014ರಲ್ಲಿ ಕೇವಲ 2.3 ಗೀಗಾ ಇದ್ದ ದೇಶದ ಸೌರ ಶಕ್ತಿ ಉತ್ಪಾದನೆ 2025ರ ವೇಳೆಗೆ ಬರೋಬ್ಬರಿ 100 ಗೀಗಾ ವ್ಯಾಟ್ ತಲುಪಿದೆ. ಹೆಚ್ಚಿನ ದಕ್ಷತೆಯ ಸೌರ ಶಕ್ತಿ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯಂತಹ ಉಪಕ್ರಮಗಳೊಂದಿಗೆ ಭಾರತ ದೃಢವಾದ ಹೆಜ್ಜೆ ಇರಿಸಿದೆ. ಸ್ವಾವಲಂಬಿ ಸೌರ ಉತ್ಪಾದನಾ ಪರಿಸರ ವ್ಯವಸ್ಥೆ ನಿರ್ಮಿಸುತ್ತಿದೆ ಎಂದು ಮೋದಿ ದೇಶದ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಅಲ್ಲದೇ ಈ ಸಾಧನೆ ಕುರಿತಂತೆ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಈ ಸಾಧನೆ ಆತ್ಮನಿರ್ಭರ ಭಾರತ ಮತ್ತು 2030ರ ವೇಳೆಗೆ 500 ಗೀಗಾ ಪರಿಸರ ಸ್ನೇಹಿ ಇಂಧನ ಸಾಮರ್ಥ್ಯದ ಗುರಿಯತ್ತ ಭಾರತವನ್ನು ಕೊಂಡೊಯ್ಯುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸ್ವಾವಲಂಬಿ ಸೌರ ಉತ್ಪಾದನಾ ಪರಿಸರ ವ್ಯವಸ್ಥೆ ನಮ್ಮ ಹಾದಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ಇದು ಭಾರತದ ಇಂಧನ ಸ್ವಾವಲಂಬನೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ. ಕೇಂದ್ರ ಸರ್ಕಾರ ಸೌರ ಶಕ್ತಿ ಉತ್ಪಾದನೆಯಲ್ಲಿ ಜಾಗತಿಕವಾಗಿ ಪ್ರಮುಖ ರಾಷ್ಟ್ರವಾಗಿದೆ. ಕೇಂದ್ರ ಸರ್ಕಾರ ಕೈಗೊಂಡ ಪಿಎಲ್‌ಐ ಯೋಜನೆ ಇದನ್ನು ಸಾಕಾರಗೊಳಿಸಿದೆ ಎಂದು ಪ್ರಗತಿಯ ಅಂಶಗಳನ್ನು ವಿವರಿಸಿದ್ದಾರೆ.
ನಾಲ್ಕೇ ವರ್ಷದಲ್ಲಿ 12 ಪಟ್ಟು ವೃದ್ಧಿ
2030ರ ವೇಳೆಗೆ 500 ಗೀಗಾ ಪರಿಸರಸ್ನೇಹಿ ಇಂಧನ ಸಾಮರ್ಥ್ಯ ಸಾಧಿಸುವ ಬದ್ಧತೆಯನ್ನು ಬಲಪಡಿಸುವ ಜತೆಗೆ ಜಾಗತಿಕ ಡಿಕಾರ್ಬೊನೈಜೇಶನ್ ಪ್ರಯತ್ನಗಳಿಗೆ ಭಾರತ ಅರ್ಥಪೂರ್ಣ ಕೊಡುಗೆ ನೀಡುತ್ತದೆ ಎಂದಿದ್ದಾರೆ.
2021ರ ಆರಂಭದಲ್ಲಿ ಸುಮಾರು 8.2 ಗೀಗಾ ಸೌರ ಪ್ಯಾನಲ್ ಮಾಡ್ಯುಲ್ ಆಗಿದ್ದುದು, ಕೇವಲ ನಾಲ್ಕೇ ವರ್ಷಗಳಲ್ಲಿ ಹನ್ನೆರಡು ಪಟ್ಟು ಹೆಚ್ಚು ಬೆಳೆದು 100 ಗೀಗಾ ಗಡಿ ದಾಟಿದೆ.
2021ರಲ್ಲಿ ಇದ್ದ 21 ಘಟಕಗಳ ಸಂಖ್ಯೆ ಪ್ರಸ್ತುತ 123ಕ್ಕೆ ಏರಿದೆ. ತಯಾರಕರ ಸಂಖ್ಯೆ ಸಹ ಅಧಿಕವಾಗಿದೆ ಎಂದು ಹೇಳಿದ್ದಾರೆ.