ಆಧಾರ್, ಮತದಾರನ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಇದ್ದ ಮಾತ್ರಕ್ಕೆ ಭಾರತೀಯ ಪೌರತ್ವ ಸಿಗೋಲ್ಲ ಎಂದು ಬಾಂಬೆ ಹೈಕೋರ್ಟ್ ಮತ್ತು ಬಿಹಾರದಲ್ಲಿ ಚುನಾವಣೆ ಆಯೋಗ ನಡೆಸಿದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿರುವುದು ಮುಂದಿನ ಚುನಾವಣೆಗಳ ಮೇಲೆ ಪರಿಣಾಮ ಬೀರಲಿವೆ.
ಪಾಕಿಸ್ತಾನ, ಬಾಂಗ್ಲಾ ಮತ್ತು ಮ್ಯಾನ್ಮಾರ್‌ನಿಂದ ರೋಹಿಂಗ್ಯ ಸಾಮೂಹಿಕವಾಗಿ ವಲಸೆ ಬಂದು ದೇಶದ ಹಲವು ರಾಜ್ಯಗಳಲ್ಲಿ ವಾಸವಾಗಿದ್ದಾರೆ. ಅವರು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಪಡೆದುಕೊಂಡಿದ್ದಾರೆ. ಅವರು ಈಗ ಮುಂಬರುವ ಚುನಾವಣೆಗಳಲ್ಲಿ ಮತದಾನದಲ್ಲಿ ಭಾಗವಹಿಸಿ ಫಲಿತಾಂಶವನ್ನೇ ಬದಲಿಸಬಹುದು ಎಂದು ಆತಂಕ ಎಲ್ಲ ಕಡೆ ಮೂಡಿದೆ. ನ್ಯಾಯಾಲಯ ಈ ವಿಷಯದಲ್ಲಿ ಸ್ಪಷ್ಟ ನಿರ್ದೇಶನಗಳನ್ನು ನೀಡಿ ಪೌರತ್ವ ಕಾಯ್ದೆಯಂತೆ ಭಾರತೀಯ ನಾಗರೀಕತ್ವ ಪಡೆದವರು ಮಾತ್ರ ಅರ್ಹರು ಎಂಬುದನ್ನು ಸ್ಪಷ್ಟಪಡಿಸಿದೆ.
ಮುಂಬೈನಲ್ಲಿ ಬಾಂಗ್ಲಾ ನಿವಾಸಿಯೊಬ್ಬರು ಆಧಾರ್ ಇರುವುದರಿಂದ ನಾನು ದೇಶದ ನಿವಾಸಿ ಎಂದು ವಾದಿಸಿದ್ದರು. ಮುಂಬೈ ಹೈಕೋರ್ಟ್ ಇದನ್ನು ಒಪ್ಪಿಲ್ಲ. ಅದೇ ರೀತಿ ಬಿಹಾರದಲ್ಲಿ ಕೇಂದ್ರ ಚುನಾವಣೆ ಆಯೋಗ ವಿಶೇಷ ಮತದಾರರ ಪರಿಷ್ಕರಣೆ ಮಾಡಿ 68 ಲಕ್ಷ ಜನರ ಮತದಾನದ ಹಕ್ಕನ್ನು ರದ್ದು ಪಡಿಸಿದೆ ಎಂದು ಪ್ರತಿಪಕ್ಷಗಳು ಆರೋಪಿದರೂ ಸುಪ್ರೀಂ ಕೋರ್ಟ್ ಚುನಾವಣೆ ಆಯೋಗದ ಅಧಿಕಾರವನ್ನು ಮೊಟಕುಗೊಳಿಸಲು ಹೋಗಿಲ್ಲ.
ಹೀಗಾಗಿ ಹೊರ ದೇಶಗಳಿಂದ ಬಂದಿರುವವರಿಗೆ ಮತದಾನದ ಹಕ್ಕು ಸಿಗುವುದಿಲ್ಲ ಎಂಬುದು ಸ್ಪಷ್ಟ. ಬಹುತೇಕ ವಲಸೆಗಾರರು ಅನಧಿಕೃತವಾಗಿ ಬಂದು ಇಲ್ಲಿ ಹಲವು ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಕಾನೂನು ಪ್ರಕಾರ ಇವರೆಲ್ಲರನ್ನೂ ಅವರವರ ದೇಶಗಳಿಗೆ ರವಾನಿಸಬೇಕು. ಆದರೆ ಈ ಕೆಲಸ ಅತ್ಯಂತ ದುಸ್ತರ. ಗಡಿಗೆ ಕರೆದುಕೊಂಡು ಹೋಗಿ ಅವರನ್ನು ಆಯಾದೇಶದ ದೂತಾವಾಸಕ್ಕೆ ತಿಳಿಸಿ ಕಳುಹಿಸಿಕೊಡಬೇಕು. ಅವರನ್ನು ಸಾಮೂಹಿಕವಾಗಿ ಕಳುಹಿಸಲು ಬರುವುದಿಲ್ಲ.
ಈಗ ಬೆಂಗಳೂರಿನಲ್ಲಿರುವ ವಲಸೆಗಾರರನ್ನು ಹಿಂದಕ್ಕೆ ಕಳುಹಿಸುವುದು ಎಂದರೆ ಕಷ್ಟದ ಕೆಲಸ. ಈಗ ಅವರ ಸಂಖ್ಯೆ ಅಧಿಕಗೊಂಡಿದ್ದು ಇವರು ಕೆಲವು ಮತಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಗಮನಾರ್ಹ. ಕಾಯ್ದೆ ಪ್ರಕಾರ ಇವರಿಗೆ ಮತದಾನದ ಹಕ್ಕಿಲ್ಲ. ಆದರೆ ಕೆಲವು ರಾಜಕೀಯ ಪಕ್ಷಗಳು ಇವರನ್ನು ವೋಟ್ ಬ್ಯಾಂಕ್ ರೀತಿ ಬಳಸಿಕೊಳ್ಳಲು ಯತ್ನಿಸುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ.
ನ್ಯಾಯಾಲಯದ ತೀರ್ಪುಗಳು ಈಗ ಚುನಾವಣೆ ಆಯೋಗ ಕ್ರಮಕೈಗೊಳ್ಳಲು ಸಹಕಾರಿಯಾಗಿದೆ. ಅವರು ವಲಸೆಗಾರರಾಗಿ ಇರಬಹುದು. ಆದರೆ ಮತ ಚಲಾಯಿಸುವ ಹಕ್ಕು ಪಡೆಯಲು ಅವಕಾಶವಿಲ್ಲ ಎಂಬುದು ಈಗ ಸ್ಪಷ್ಟಗೊಂಡಿದೆ. ದೇಶದ ಪ್ರಮುಖ ನಗರಗಳಲ್ಲಿ ಇವರು ಸುಲಭವಾಗಿ ಬಂದು ಸೇರಿಕೊಳ್ಳುವುದಕ್ಕೆ ಅವಕಾಶವಿದೆ. ಆಧಾರ್ ಮತ್ತು ಮತದಾರರ ಗುರುತಿನ ಚೀಟಿ ಪಡೆಯುವುದು ಕಷ್ಟದ ಕೆಲಸವೇನಲ್ಲ.
ಹಣ ಕೊಟ್ಟರೆ ಎಲ್ಲವೂ ಸಿಗುತ್ತದೆ. ಪ್ಯಾನ್ ಕಾರ್ಡ್ ಕೂಡ ಈಗ ಸುಲಭವಾಗಿ ಲಭ್ಯ. ಕೆಲವರು ತಮ್ಮ ಹೆಸರನ್ನೇ ಬದಲಿಸಿಕೊಂಡು ಇಲ್ಲಿಯ ಜನರೊಂದಿಗೆ ಬೆರೆತುಹೋಗಿದ್ದಾರೆ. ಅವರನ್ನು ಗುರುತಿಸುವುದೇ ಕಷ್ಟವಾಗಿದೆ. ಅವರು ಯಾವುದಾದರೂ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗವಹಿಸಿದಾಗ ಮಾತ್ರ ಸಿಕ್ಕಿ ಬೀಳುತ್ತಾರೆ. ಆಗ ಪೊಲೀಸರು ಅವರ ಜನ್ಮ ಜಾಲಾಡಿ ಎಲ್ಲ ವಿವರವನ್ನು ಬಹಿರಂಗಪಡಿಸುತ್ತಾರೆ. ಹೀಗಾಗಿ ವಿದೇಶಿಯರು ಸ್ಥಳೀಯರ ಹಾಗೆ ಬದುಕಲು ನಮ್ಮಲ್ಲಿ ಮುಕ್ತ ವಾತಾವರಣವಿದೆ.
ಅದರಲ್ಲೂ ನಗರದ ವಾಸಿಗಳು ಯಾರನ್ನೂ ಪ್ರಶ್ನಿಸಲು ಹೋಗುವುದಿಲ್ಲ. ಅದರಲ್ಲೂ ಬೇರೆ ದೇಶಗಳಿಂದ ಬಂದಿರುವ ಮಹಿಳೆಯರು ಬಹುತೇಕ ಬಡಾವಣೆಗಳಲ್ಲಿ ಮನೆಕೆಲಸ ಕೈಗೊಳ್ಳುತ್ತಿದ್ದಾರೆ. ಈಗ ಸ್ಥಳೀಯರು ಈ ಕೆಲಸ ಕೈಗೊಳ್ಳುತ್ತಿಲ್ಲ. ಕೆಲವರು ಕನ್ನಡ ಮಾತನಾಡುವುದನ್ನೂ ಕಲಿತಿದ್ದಾರೆ. ಹೀಗಾಗಿ ಅವರು ಪ್ರತ್ಯೇಕವಾಗಿ ಇರುವುದಿಲ್ಲ. ಸ್ಥಳೀಯರೊಂದಿಗೆ ಬೆರೆತುಹೋಗುವುದರಿಂದ ಗುರುತಿಸುವುದು ಕಷ್ಟ. ದಾಖಲೆಗಳು ಮಾತ್ರ ಅವರು ಭಾರತೀಯ ಪೌರತ್ವ ಹೊಂದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಮತದಾರರ ಪಟ್ಟಿಯಲ್ಲಿ ಕೆಲವು ಕಡೆ ಇವರ ಹೆಸರುಗಳು ಸೇರ್ಪಡೆಗೊಂಡಿದೆ. ಇವರ ಪೌರತ್ವ ದಾಖಲೆ ಪರಿಶೀಲಿಸಿದಾಗ ಮಾತ್ರ ನಿಜವಾದ ಬಣ್ಣ ಬಯಲಾಗುತ್ತದೆ. ಚುನಾವಣೆ ಆಯೋಗ ಈ ವಲಸಿಗರನ್ನು ಮತದಾರರ ಪಟ್ಟಿಯಿಂದ ದೂರವಿಡುವ ಕೆಲಸವನ್ನು ಕೈಗೊಂಡಿದೆ. ಆಯೋಗಕ್ಕೆ ಕಾಯ್ದೆಯ ಬಲ ಇದೆ. ಈಗ ನ್ಯಾಯಾಲಯ ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ. ಚುನಾವಣೆ ಸಮೀಪಿಸುತ್ತಿರುವಾಗ ಮತದಾರರ ಪಟ್ಟಿ ಪರಿಷ್ಕರಣೆ ಸರಿಯಲ್ಲ ಎಂಬುದು ಪ್ರತಿಪಕ್ಷಗಳ ತಕರಾರು. ಆಯೋಗ ಮತದಾರರ ಪಟ್ಟಿಪರಿಷ್ಕರಣೆ ಕಾರ್ಯವನ್ನು ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದು.
ಮತದಾರರು ತಮ್ಮ ಹೆಸರನ್ನು ಸೇರ್ಪಡೆ ಮಾಡಲು ಪ್ರತಿ ವರ್ಷ ಜನವರಿಯಲ್ಲಿ ಅವಕಾಶವಿದೆ. 18 ವರ್ಷ ತಲುಪಿದ ಹೊಸ ಮತದಾರರು ತಮ್ಮ ಹೆಸರು ನೋಂದಾಯಿಸಲು ಮುಕ್ತ ಅವಕಾಶ ಇದೆ. ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ ಯಾರಾದರೂ ಆಕ್ಷೇಪಣೆ ಸಲ್ಲಿಸಲು ಬಯಸಿದರೆ ಅದಕ್ಕೂ ಆಯೋಗ ಅವಕಾಶ ನೀಡುತ್ತದೆ. ನಿಯಮ ಅತ್ಯಂತ ಕಟ್ಟುನಿಟ್ಟಾಗಿದ್ದು, ಚುನಾವಣೆ ಪ್ರಕ್ರಿಯೆಗಳಲ್ಲಿ ಏನಾದರೂ ತಪ್ಪುಗಳಾದರೆ ಶಿಕ್ಷಿಸಲು ನ್ಯಾಯಾಲಯಗಳಿಗೆ ಮುಕ್ತ ಅವಕಾಶವಿದೆ.