ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ವಿಪಕ್ಷಗಳ ಸುಳ್ಳುಗಳಿಗೆ ತಕ್ಕ ಉತ್ತರ ಕೊಡಿ; ಸಿಎಂ

1
60

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಮುಂದಿನ 7 ದಿನಗಳ ಕಾಲ ಸಚಿವರು ಹಾಗೂ ಶಾಸಕರು ಸರ್ಕಾರದ ಸಾಧನೆಗಳನ್ನು ಸಮರ್ಥವಾಗಿ ಮಂಡಿಸುವುದರ ಜೊತೆಗೆ ವಿಪಕ್ಷಗಳ ಸುಳ್ಳು ಆರೋಪಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸಜ್ಜಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು ಹೇಳಿದ್ದಾರೆ. ಇಂದಿನ ಸಭೆಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಗೈರಾಗಿದ್ದುದು ಗಮನಾರ್ಹವಾಗಿತ್ತು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಅಧಿವೇಶನದಲ್ಲಿ ಸರ್ಕಾರದ ಸಾಧನೆಯನ್ನು ಸಮರ್ಥವಾಗಿ ಮಂಡಿಸಬೇಕಿದೆ. ಗ್ಯಾರಂಟಿ ಯೋಜನೆಗಳ ಯಶಸ್ಸಿ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಅಂಕಿಸಂಖ್ಯೆ ಸಮೇತ ಆಡಳಿತಪಕ್ಷದ ಎಲ್ಲ ಸಚಿವರು ಹಾಗೂ ಶಾಸಕರು ಎರಡೂ ಸದನಗಳಲ್ಲಿ ಮಾತನಾಡಬೇಕು. ಯಾರಲ್ಲೂ ಯಾವುದೇ ಹಿಂಜರಿಕೆ ಬೇಕಿಲ್ಲ ಎಂದರು. ವಿರೋಧ ಪಕ್ಷಗಳ ಆಧಾರ ರಹಿತ ಆರೋಪಗಳು ಹಾಗೂ ಸುಳ್ಳುಗಳನ್ನು ದಾಖಲೆಗಳೊಂದಿಗೆ ಸಮರ್ಥವಾಗಿ ಪ್ರಸ್ತಾಪಿಸಿ ಪ್ರತ್ಯುತ್ತರ ನೀಡುವಂತೆ ವಿವರಿಸಿದರು. ಆರ್‌ಸಿಬಿ ಕಾಲ್ತುಳಿತ ದುರಂತದ ಬಗ್ಗೆ ಸ್ಪಷ್ಟ ಚಿತ್ರಣ ನೀಡಿದ ಸಿಎಂ, ಸಂಜೆ 5:30ರ ವರೆಗೂ ನನಗೆ ಸಾವಿನ ಬಗ್ಗೆ ಮಾಹಿತಿ ಇರಲಿಲ್ಲ ಎಂದರು.

ವಿಪಕ್ಷಗಳಿಗೆ ತಿರುಗೇಟು ನೀಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿವೆ. ಸಚಿವರು, ಶಾಸಕರು ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕು. ಪಕ್ಷದ ಹೈಕಮಾಂಡ್ ಯಾವುದೇ ಅಶಿಸ್ತಿನ ನಡವಳಿಕೆ ಸಹಿಸುವುದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಎಲ್ಲರೂ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವುದು ಹಾಗೂ ಮಾತನಾಡುವುದು ಅಗತ್ಯ ಎಂದು ಸೂಕ್ಷ್ಮವಾಗಿ ಸಲಹೆ ನೀಡಿದರು. ಸದನದಲ್ಲಿ ವಿಪಕ್ಷಗಳ ಟೀಕೆಗೆ ಸಮರ್ಥವಾಗಿ ಒಗ್ಗಟ್ಟಾಗಿ ಉತ್ತರಿಸುವ ಕುರಿತೂ ಸಲಹೆ ನೀಡಿದರು. ವಿಧಾನ ಪರಿಷತ್ ಸದಸ್ಯರುಗಳು ತಮಗೂ ಸಿಎಂ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಿದರು.

ಶಾಸಕ ಬಿ.ಆರ್. ಪಾಟೀಲ್ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನಡುವೆ ಯಾವುದೇ ಭಿನ್ನಾಭಿಪ್ರಾಯಕ್ಕೆ ಆಸ್ಪದವಾಗಬಾರದು. ಹಾಗಾಗಿ ಮುಖ್ಯಮಂತ್ರಿಗಳು ಕನಿಷ್ಠ ಎರಡು ತಿಂಗಳಿಗೆ ಒಮ್ಮೆ ಜಿಲ್ಲಾವಾರು ಸಚಿವ-ಶಾಸಕರ ಸಭೆ ನಡೆಸಿ ಸಮಸ್ಯೆಗಳನ್ನು ಆಲಿಸಿದರೆ ಎಲ್ಲವೂ ಬಗೆಹರಿಯಲಿದೆ ಎಂದು ಸಭೆಗೆ ಸಲಹೆ ನೀಡಿದರು.

ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಕೆ ಪಾಟೀಲ್, ಡಾ.ಜಿ. ಪರಮೇಶ್ವರ್, ಕೆ.ಎಚ್ ಮುನಿಯಪ್ಪ, ಇಂಧನ ಸಚಿವ ಕೆ ಜೆ ಜಾರ್ಜ್, ಆರ್. ವಿ ದೇಶಪಾಂಡೆ, ಎನ್ ಎಸ್ ಬೋಸರಾಜ್, ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಮ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.

Previous articleಬಳ್ಳಾರಿ: ಎಟಿಎಂನಲ್ಲಿ ದರೋಡೆಗೆ ಯತ್ನ, ಲೈವ್‌ನಲ್ಲೇ ಕಳ್ಳನ ಸೆರೆ
Next articleಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದ ವಿಶೇಷತೆಗಳು

1 COMMENT

  1. ಸಿದ್ದರಾಮಯ್ಯ, ನಿಮ್ಮ ಸುಳ್ಳುಗಳಿಗೆ ವಿರೋಧ ಪಕ್ಷಗಳ ಟೀಕೆಗಳನ್ನು ಹೇಗೆ ನಿಭಾಯಿಸುತ್ತೀರಿ.

LEAVE A REPLY

Please enter your comment!
Please enter your name here