ಅಂಕ ಗಳಿಕೆಯೇ ಯಶಸ್ಸಿನ ಮಾನದಂಡವಲ್ಲ

0
98

ಬೆಂಗಳೂರು: ಮಕ್ಕಳು ಅಂಕಗಳ ಓಟದಲ್ಲಿ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಪ್ರತಿಭೆ ಗುರುತಿಸುವಲ್ಲಿ ಶಿಕ್ಷಣ ವ್ಯವಸ್ಥೆ ವಿಫಲವಾಗಿದೆಯೇ? ಎಂದು ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷರು ಮತ್ತು ಕರ್ನಾಟಕ ಸರ್ಕಾರದ ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಪ್ರಶ್ನಿಸಿದ್ದಾರೆ.

ನಗರದ ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಿನ್ನೆ ಶನಿವಾರ ನಡೆದ ಶಿಕ್ಷಕರ ಮನೋ ಕ್ಷೇಮ-ಕೌಶಲ್ಯ ವೃದ್ಧಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಕೆಲವೊಮ್ಮೆ ಪೋಷಕರು ಮತ್ತು ಸಮಾಜ ಮಕ್ಕಳ ಮೇಲೆ ಅತಿಯಾದ ನಿರೀಕ್ಷೆಗಳನ್ನು ಇಡುತ್ತಾರೆ. 90% ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸುವುದೇ ಯಶಸ್ಸಿನ ಮಾನದಂಡ ಎಂಬ ತಪ್ಪು ಕಲ್ಪನೆ ಇದೆ. ಇದರಿಂದ ಮಕ್ಕಳು ಅಂಕಗಳ ಓಟದಲ್ಲಿ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಾರೆ.

ಪ್ರಾಯೋಗಿಕ ಜ್ಞಾನ, ಜೀವನ ಕೌಶಲ್ಯಗಳು ಮತ್ತು ಸೃಜನಶೀಲ ಚಿಂತನೆಗಳಿಗೆ ಒತ್ತು ನೀಡುವುದೇ ನಿಜವಾದ ಶಿಕ್ಷಣ ಎಂದು ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಕಗಳು ಮುಖ್ಯವಾಗಬಹುದು, ಆದರೆ ಅದು ಒಬ್ಬ ವ್ಯಕ್ತಿಯ ಸಂಪೂರ್ಣ ಭವಿಷ್ಯವನ್ನು ನಿರ್ಧರಿಸುವುದಿಲ್ಲ.

ಪ್ರತಿ ಮಗುವಿನಲ್ಲಿಯೂ ಒಂದಲ್ಲ ಒಂದು ವಿಶೇಷ ಪ್ರತಿಭೆ ಅಡಗಿರುತ್ತದೆ. ಆದರೆ, ಈ ಪ್ರತಿಭೆಯನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡುವಲ್ಲಿ ಸಮಾಜ ಮತ್ತು ಶಿಕ್ಷಣ ವ್ಯವಸ್ಥೆ ವಿಫಲವಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ ಎಂದರು. ಭಗವದ್ಗೀತೆಯು ಮನಃಶಾಸ್ತ್ರವನ್ನು ಅತ್ಯಂತ ಸರಿಯಾದ ರೀತಿಯಲ್ಲಿ ಪ್ರತಿಪಾದಿಸುವ ಒಂದು ಶ್ರೇಷ್ಠ ಗ್ರಂಥವಾಗಿದೆ.

ಇಬ್ಬರು ಸಮಾನವಾದ ಪ್ರಯತ್ನ ಪಟ್ಟರೂ, ಒಬ್ಬರಿಗೆ ಮಾತ್ರ ಯಶಸ್ಸು ಲಭಿಸಬಹುದು. ಆದರೆ, ನಮ್ಮ ಪ್ರಯತ್ನ ಎಂದಿಗೂ ವ್ಯರ್ಥವಾಗುವುದಿಲ್ಲ. ಪ್ರಯತ್ನ ಮಾತ್ರ ಪಡು, ಪ್ರತಿಫಲವನ್ನು ದೇವರಿಗೆ ಬಿಡು ಎಂಬುದು ಭಗವದ್ಗೀತೆಯ ಮೂಲ ಸಂದೇಶ. ಇದನ್ನು ಅರಿತಾಗ, ಫಲಿತಾಂಶದ ಬಗ್ಗೆ ಅತಿಯಾದ ಆತಂಕ ಕಡಿಮೆಯಾಗುತ್ತದೆ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಚೆನ್ನಾಗಿ ಓದುವ ಮಕ್ಕಳಿಗೆ ಮಾತ್ರ ಪ್ರಾಶಸ್ಯ ನೀಡಿ, ಇತರ ಮಕ್ಕಳನ್ನು ಕಡೆಗಣಿಸುವುದು ಅವರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬ ಮಗುವಿನಲ್ಲಿಯೂ ವಿಭಿನ್ನ ಪ್ರತಿಭೆ ಮತ್ತು ಸಾಮರ್ಥ್ಯವಿರುತ್ತದೆ. ಅಂಕಗಳ ಆಧಾರದಲ್ಲಿ ಮಕ್ಕಳನ್ನು ಬೇರ್ಪಡಿಸುವುದು ಅವರ ಆತ್ಮ ವಿಶ್ವಾಸವನ್ನು ಕುಗ್ಗಿಸುತ್ತದೆ. ಆದ್ದರಿಂದ, ಎಲ್ಲಾ ಮಕ್ಕಳಿಗೂ ಸಮಾನ ಅವಕಾಶ ಮತ್ತು ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ಆಗುತ್ತದೆ ಎಂದು ತಿಳಿಸಿದರು.

ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುವಂತಹ ವಾತಾವರಣವನ್ನು ಶಾಲೆ ಮತ್ತು ಮನೆಗಳು ನಿರ್ಮಿಸಬೇಕು. ಸರಿಯಾದ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ಮಾನಸಿಕ ಬೆಂಬಲ ಸಿಕ್ಕಿದಾಗ ಮಕ್ಕಳು ಯಾವುದೇ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ. ಇದು ಯಶಸ್ವಿ ಸಮಾಜದ ನಿರ್ಮಾಣಕ್ಕೆ ದಾರಿ ಆಗುತ್ತದೆ ಎಂದು ಹೇಳಿದರು.

Previous articleಏಷ್ಯಾದ ಅತಿ ಉದ್ದದ ಸರಕು ರೈಲು ಭಾರತದಲ್ಲಿ: ವಿವರಗಳು
Next articleವಿಶ್ವ ಗುರು ಪರಂಪರೆಗೆ ವಿದೇಶಿ ದಾಳಿಗಳೇ ಕೊಳ್ಳಿ

LEAVE A REPLY

Please enter your comment!
Please enter your name here