ಮಾಲತೇಶ ಹೂಲಿಹಳ್ಳಿ
ಧಾರವಾಡ: ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗವು ರಾಷ್ಟ್ರಧ್ವಜ ಮತ್ತು ಖಾದಿ ಬಟ್ಟೆಗಳ ತಯಾರಿಕೆಗೆ ಪ್ರಸಿದ್ಧವಾಗಿದೆ. ಇದು ದೇಶದಲ್ಲಿ ಅಧಿಕೃತವಾಗಿ ರಾಷ್ಟ್ರಧ್ವಜವನ್ನು ತಯಾರಿಸುವ ಏಕೈಕ ಸಂಸ್ಥೆಯಾಗಿದೆ. ದೇಶಾದ್ಯಂತ ಖಾದಿ ರಾಷ್ಟ್ರಧ್ವಜವನ್ನು ತಯಾರಿಸಿ ತಲುಪಿಸುವ ದೇಶದ ಏಕೈಕ ಕೇಂದ್ರ ಹುಬ್ಬಳ್ಳಿಯ ಬೆಂಗೇರಿ.
ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿಯಿಂದ ಪಾಲಿಸ್ಟರ್ ಧ್ವಜ ಮಾರಾಟಕ್ಕೆ ಅನುಮತಿ ಸಿಕ್ಕಿದ್ದು ಖಾದಿ ರಾಷ್ಟ್ರಧ್ವಜಕ್ಕೆ ಬೇಡಿಕೆ ಕುಸಿದಿದೆ. ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರಧ್ವಜ ತಯಾರಿ ಮಾಡಬೇಕಾದ ನೇಕಾರರು ಬ್ಯಾಗ್ ತಯಾರಿಕೆ ಮಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದ್ದು ದೇಶ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.
ದೇಶದ ಮೂಲೆ ಮೂಲೆಗೂ ರಾಷ್ಟ್ರಧ್ವಜ ಪೂರೈ ಸುವ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಈಗ ರಾಷ್ಟ್ರಧ್ವಜದ ಬದಲು ಖಾದಿ ಬ್ಯಾಗ್ ತಯಾ ರಿಕೆ ನಡೆಯುತ್ತಿದೆ. ರಾಷ್ಟ್ರಧ್ವಜ ಮಾರಾಟದಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಮಹಿಳೆಯರು ಬ್ಯಾಗ್ ಸಿದ್ಧಪಡಿಸುವ ಕಾರ್ಯಕ್ಕೆ ಮೊರೆ ಹೋಗಿದ್ದಾರೆ.
ರಾಷ್ಟ್ರಧ್ವಜ ಸಂಹಿತೆ ತಿದ್ದು ಪಡಿ ಜಾರಿಯಾದ ಪರಿಣಾಮ ಖಾದಿ ಧ್ವಜ ಮಾರಾಟ ಕುಸಿತಕ್ಕೆ ಕಾರಣವಾಗಿದೆ. ಆ.6ರವರೆಗೆ ಕೇವಲ 50 ಲಕ್ಷ ರೂ. ಮೌಲ್ಯದ ರಾಷ್ಟ್ರಧ್ವಜ ಮಾರಾಟವಾಗಿದೆ. ಕಳೆದ ಏಪ್ರಿಲ್‌ನಿಂದ ರಾಷ್ಟ್ರಧ್ವಜ ತಯಾರು ಮಾಡುವುದನ್ನು ಖಾದಿ ಗ್ರಾಮೋದ್ಯೋಗ ನಿಲ್ಲಿಸಿದ್ದು, ಕಾರ್ಮಿಕರಿಗೆ ಕೆಲಸ ಕೊಡುವ ಸಲುವಾಗಿ `ಖಾದಿ ಬ್ಯಾಗ್’ ತಯಾರಿಕೆ ಕೆಲಸ ನೀಡಲಾಗಿದೆ.
2022ರಲ್ಲಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ದಾಖಲೆ ಪ್ರಮಾಣದಲ್ಲಿ ರಾಷ್ಟ್ರಧ್ವಜ ಮಾರಾಟವಾಗಿತ್ತು. ಅಂದು 4.28 ಕೋಟಿಗೂ ಅಧಿಕ ವಹಿವಾಟು ನಡೆದಿತ್ತು. ಕೇಂದ್ರ ಸರ್ಕಾರವು ‘ಧ್ವಜ ಸಂಹಿತೆ-2002’ಕ್ಕೆ ತಿದ್ದುಪಡಿ ತಂದು, ಪಾಲಿಸ್ಟರ್ ತ್ರಿವರ್ಣ ಧ್ವಜಗಳ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ 2023-24 ಹಾಗೂ 2024-25ರಲ್ಲಿ ಖಾದಿ ಧ್ವಜಗಳ ಬೇಡಿಕೆ ಕುಸಿದಿದೆ.
ಈ ವರ್ಷ 2 ಕೋಟಿ ದಾಟಬೇಕಾಗಿದ್ದ ಮಾರಾಟ ಕೇವಲ 50 ಲಕ್ಷದಷ್ಟಾಗಿದೆ. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ಸಂಧರ್ಭದಲ್ಲಿ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ರಾಷ್ಟ್ರಧ್ವಜ ತಯಾರು ಮಾಡಲು, ಮಾರಲು ಪುರಸೊತ್ತು ಸಿಗುತ್ತಿರಲಿಲ್ಲ. ಆದರೆ, ಈಗ ಕಳೆದ ಜನವರಿಯ ಗಣರಾಜ್ಯೋತ್ಸವಕ್ಕೆ ತಯಾರು ಮಾಡಿದ 2 ಕೋಟಿ ಮೌಲ್ಯದ ರಾಷ್ಟ್ರಧ್ವಜಗಳು ಹಾಗೇ ಉಳಿದಿವೆ.
ತಿಂಗಳ ವೇತನಬಾಕಿ: ರಾಷ್ಟ್ರಧ್ವಜ ಮಾರಾಟವಾಗದೇ ಸ್ಟಾಕ್ ಉಳಿದಿರುವುದರಿಂದ ಇಲ್ಲಿ ರಾಷ್ಟ್ರಧ್ವಜ ತಯಾರು ಮಾಡುವ ಕೆಲಸದಲ್ಲಿ ತೊಡಗಿರುವ ಮಹಿಳಾ ಕಾರ್ಮಿಕರಿಗೆ ಕೆಲಸವಿಲ್ಲದಾಗಿದೆ. ಹೀಗಾಗಿ, ಅನಿವಾರ್ಯವಾಗಿ ಸಂಸ್ಥೆ ಅವರಿಗೆ ಖಾದಿ ಬ್ಯಾಗ್ ತಯಾರಿಸುವ ಕೆಲಸ ಕೊಟ್ಟಿದೆ. ಇದರ ಮಾರಾಟ ಕೂಡ ಅಷ್ಟಕಷ್ಟೇ ಎನ್ನುವಂತಾಗಿದ್ದು, ಖಾದಿ ಗ್ರಾಮೋದ್ಯೋಗದ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.
ಕೇಂದ್ರದಲ್ಲಿ 35 ರಿಂದ 40 ಮಹಿಳೆಯರು ಮಾತ್ರ ಧ್ವಜ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದ್ದು, ಉಳಿದ ಕಾರ್ಯದಲ್ಲಿ 400 ಕಾರ್ಮಿಕರು ತೊಡಗಿದ್ದಾರೆ. ಅವರಿಗೆ ಒಂದು ತಿಂಗಳ ವೇತನ ನೀಡುವುದು ಬಾಕಿ ಇದೆ ಎಂದು ಸಂಸ್ಥೆಯವರು ಅಳಲು ತೋಡಿಕೊಂಡಿದ್ದಾರೆ.
ಸಂಹಿತೆ ತಿದ್ದುಪಡಿ ವಾಪಸ್ ಪಡೆಯಲಿ: ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಈ ಕುರಿತಂತೆ ಮಾತನಾಡಿ ಪ್ರತಿವರ್ಷ ಕೋಟಿಗಟ್ಟಲೆ ವಹಿವಾಟು ನಡೆಯುತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಈವರೆಗೆ ಶೇ. 25 ರಷ್ಟು ಮಾತ್ರ ವಹಿವಾಟು ನಡೆದಿದೆ.
ಜೂನ್ ಹಾಗೂ ಜುಲೈನಲ್ಲಿ ಜಮ್ಮು ಕಾಶ್ಮೀರ, ಛತ್ತೀಸಗಢ, ಕೋಲ್ಕತ್ತಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಹೆಚ್ಚಿನ ಬೇಡಿಕೆ ಬರುತಿತ್ತು. ಆದರೆ, ಈ ಬಾರಿ ಬೇಡಿಕೆ ತೀವ್ರ ಕುಸಿದಿದೆ. ಹೀಗಾಗಿ, ರಾಷ್ಟ್ರಧ್ವಜ ಸಂಹಿತೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು ಎಂದಿದ್ದಾರೆ.