KSRTC: ಮುಷ್ಕರದಲ್ಲಿ ಭಾಗಿಯಾಗಿದ್ದ ಸಾರಿಗೆ ಸಿಬ್ಬಂದಿಗೆ ನೋಟಿಸ್

0
77

ಹುಬ್ಬಳ್ಳಿ: ಸಾರಿಗೆ ನೌಕರರ ವಿವಿಧ ಬೇಡಿಕೆಗೆ ಆಗ್ರಹಿಸಿ ಆಗಸ್ಟ್ 5 ರಂದು ಕರೆ ನೀಡಿದ್ದ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ನೋಟಿಸ್ ನೀಡಲಾಗಿದೆ.

ಕರ್ತವ್ಯಕ್ಕೆ ಗೈರಾಗಿದ್ದರಿಂದ, ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದ್ದು, ಕರ್ತವ್ಯ ಲೋಪದ ಹೆಸರಿನಲ್ಲಿ ಆ. 5 ರಂದು ಕರ್ತವ್ಯಕ್ಕೆ ಗೈರಾದ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.

ಕರ್ತವ್ಯ ನೂನ್ಯತೆ ಹಿನ್ನೆಲೆಯಲ್ಲಿ ನಿಮ್ಮ ಮೇಲೆ ಏಕೆ ಸೂಕ್ತ ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 24 ತಾಸಿನಲ್ಲಿ ಉತ್ತರ ನೀಡುವಂತೆ ಸೂಚಿಸಲಾಗಿದೆ. ಬೆಂಗಳೂರು ವಿಭಾಗದಲ್ಲಿ ನೋಟಿಸ್‌ಗೆ ಉತ್ತರ ನೀಡದಿದ್ದಲ್ಲಿ ನಿಮ್ಮಿಂದ ಸ್ವರಕ್ಷಣಾ ಹೇಳಿಕೆ ನೀಡಿಲ್ಲವೆಂದು ಭಾವಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ.

ಕರ್ನಾಟಕ ಸಾರಿಗೆ ನಿಗಮಗಳ ಶೇ. 70 ರಷ್ಟು ಬಸ್‌ಗಳು ಆ. 5 ರಂದು ಕಾರ್ಯ ನಿರ್ವಹಿಸಿಲ್ಲ. ಹೀಗಾಗಿ ಆರು ಜಿಲ್ಲೆ ವ್ಯಾಪ್ತಿಯ 9 ವಿಭಾಗಗಳಲ್ಲಿ 2887 ಚಾಲಕರು ಹಾಗೂ ನಿರ್ವಾಹಕರು, 420 ತಾಂತ್ರಿಕ ಸಿಬ್ಬಂದಿ ಹಾಗೂ 78 ಆಡಳಿತ ಸಿಬ್ಬಂದಿ ಸೇರಿ 3 ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಈ ಕುರಿತು ಮಾತನಾಡಿ, “ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ನಿತ್ಯ ಸುಮಾರು 4900 ಅನುಸೂಚಿಗಳು ಕಾರ್ಯನಿರ್ವಹಿಸುತ್ತವೆ. ಆ. 5 ರಂದು ಮುಷ್ಕರ ಕಾರಣಕ್ಕೆ ನೌಕರರು ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲು ಆರಂಭಿಸಲಾಗಿದೆ. 3,314 ಜನ ಕೆಲಸಕ್ಕೆ ಬಂದಿಲ್ಲ. ಅವರಿಗೆಲ್ಲರಿಗೂ ನೋಟಿಸ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಹೈಕೋರ್ಟ್ ಸಾರಿಗೆ ಮುಷ್ಕರ ನಡೆಸದಂತೆ ನಿರ್ದೇಶನ ನೀಡಿದ್ದರೂ ಹಲವಾರು ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ಬೆಳಗ್ಗೆ ಹಾಜರಾಗದೇ ಮಧ್ಯಾಹ್ನದ ಬಳಿಕ ಹಾಜರಾಗಲು ಕಾರಣ ಏನು? ಎಂಬ ಬಗ್ಗೆ ವಿವರಣೆ ಕೇಳಿ ನೋಟಿಸ್​ ನೀಡಲಾಗಿದೆ. ಯಾರಿಗೂ ತಿಳಿಸದೇ ರಜೆಯೂ ಹಾಕದೇ ಏಕಾಏಕಿ ಕೆಲಸದಿಂದ ದೂರ ಉಳಿದಿರುವುದರಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಆಗಿದೆ. ನ್ಯಾಯಾಲಯದ ಆದೇಶ ಧಿಕ್ಕರಿಸಿ ಮುಷ್ಕರದಲ್ಲಿ ಭಾಗಿಯಾಗುವ ಮೂಲಕ ನೀವು ಸಂಸ್ಥೆಗೆ ವಿರುದ್ಧವಾಗಿ ವರ್ತಿಸಿದ್ದೀರಿ ಅಲ್ಲದೇ ನಿಗಮದ ಶಿಸ್ತು ಕ್ರಮ, ನಡೆತೆ ಉಲ್ಲಂಘಿಸಲಾಗಿದೆ ಎಂದು ನೋಟಿಸ್‌ನಲ್ಲಿ ಕೇಳಲಾಗಿದೆ.

ಹೈಕೋರ್ಟ್​ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ ಮುಷ್ಕರ ನಡೆಸಬೇಡಿ ಎಂದು ನಿರ್ದೇಶನ ನೀಡಿತ್ತು ಆದರೂ ಕೆಲ ಸಿಬ್ಬಂದಿ ಕೆಲಸಕ್ಕೆ ಹಾಜರು ಆಗಿರಲಿಲ್ಲ. ನ್ಯಾಯಾಲಯದ ಎರಡನೇ ಬಾರಿಯ ವಿಚಾರಣೆ ವೇಳೆ ಮುಷ್ಕರದಲ್ಲಿ ಭಾಗಿಯಾದರೆ ಬಂಧಿಸಿ ಎಂದು ಹೇಳಿತು. ಆಗ ಕೆಲ ಸಿಬ್ಬಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಹೀಗೆ ತಡವಾಗಿ ಹಾಜರಾದ ಸಿಬ್ಬಂದಿಗೆ ತಡವಾಗಿದ್ದಕ್ಕೆ ಕಾರಣವನ್ನು ಕೇಳಲಾಗಿದೆ. ಅಲ್ಲದೇ ಎರಡನೇ ಬಾರಿ ಕೋರ್ಟ್‌ ಹೇಳಿದ ಮೇಲೆಯೂ ಕರ್ತವ್ಯಕ್ಕೆ ಹಾಜರಾಗದೇ ಇರುವ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ​

Previous articleಧರ್ಮಸ್ಥಳ ಪ್ರಕರಣ: ಹೊಸ ಜಾಗದಲ್ಲೂ ಪತ್ತೆಯಾಗದ ಅಸ್ಥಿಪಂಜರ
Next articleತುತ್ತು ಊಟಕ್ಕೂ ಪರದಾಡಿ ಕೊನೆಗೆ ಆತ್ಮಹತ್ಯೆ ಶರಣಾದ ಮಹಿಳೆ

LEAVE A REPLY

Please enter your comment!
Please enter your name here