ಧರ್ಮಸ್ಥಳ ಪ್ರಕರಣ: ಹೊಸ ಜಾಗದಲ್ಲೂ ಪತ್ತೆಯಾಗದ ಅಸ್ಥಿಪಂಜರ

0
76

ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ) ಇಂದು ಕೂಡಾ 13ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿಲ್ಲ. ಬದಲಿಗೆ ದೂರುದಾರ ಸೂಚಿಸಿದ ಹೊಸ ಸ್ಥಳ ಬೋಳಿಯಾರ್ ಕಾಡಿನಲ್ಲಿ ಶೋಧ ನಡೆಸಿದ್ದು ಆಸ್ಥಿಪಂಜರದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.

ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಸಮೀಪಕ್ಕೆ ಸಾಕ್ಷಿ ದೂರುದಾರನೊಂದಿಗೆ ಎಸ್‌ಐಟಿ ತಂಡ 1:15 ರಿಂದ ಸಂಜೆ 5:30 ರ ವರೆಗೆ ಮಿನಿ ಜೆಸಿಬಿ ಮತ್ತು ಕಾರ್ಮಿಕ ಜೊತೆ ಸೇರಿ ಕಾರ್ಯಾಚರಣೆ ನಡೆಸಿದಾಗ ಯಾವುದೇ ಅಸ್ಥಿಪಂಜರ ಅವಶೇಷಗಳು ಪತ್ತೆಯಾಗಿಲ್ಲ. ಕಾರ್ಯಾಚರಣೆಯನ್ನು ಅಂತ್ಯ ಮಾಡಿ ಅಧಿಕಾರಿಗಳು ದೂರುದಾರನ ಜೊತೆ ವಾಪಸ್ ಮರಳಿದ್ದಾರೆ. ದೂರುದಾರ ತಿಳಿಸಿದಂತೆ ಕಲ್ಲೇರಿಯ 500 ಮೀಟರ್ ದೂರದಲ್ಲಿ ಶಾಲಾ ಸಮವಸ್ತ್ರದಲ್ಲಿ ಬ್ಯಾಗ್ ಇದ್ದ ಬಾಲಕಿಯನ್ನು ಹೂತು ಹಾಕಿದ ಪ್ರಕರಣದ ಜಾಗದಲ್ಲಿಯೇ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದೆ.

ಇವರೆಗೆ ಸಾಕ್ಷಿ ದೂರುದಾರ ತೋರಿಸಿದ್ದ 13 ಜಾಗ ಮತ್ತು ನಂತರ ತೋರಿಸಿದ್ದ ಎರಡು ಜಾಗಗಳ ಪೈಕಿ 14 ಸ್ಥಳದಲ್ಲಿ ಕಾಡಿನೊಳಗೆ ಶೋಧ ನಡೆಸಲಾಗಿದೆ. ನೇತ್ರಾವತಿ ನದಿ ಪಕ್ಕದ ಕಾಡಿನಲ್ಲಿ ತೋರಿಸಿದ್ದ 6ನೇ ಸ್ಥಳದ ನೆಲದಡಿ ಮೃತದೇಹದ ಅವಶೇಷ ಪತ್ತೆಯಾಗಿತ್ತು. ಅಲ್ಲದೇ ಗುರುತು ಮಾಡದ ಮತ್ತೊಂದು ಸ್ಥಳದಲ್ಲಿ ಮೃತದೇಹದ ತಲೆಬುರುಡೆ, ಬೆನ್ನುಮೂಳೆ ಸೇರಿದಂತೆ ಕೆಲ ಮೂಳೆಗಳು ನೆಲದ ಮೇಲೆಯೇ ದೊರೆತಿದ್ದವು. ಉಳಿದ 12 ಸ್ಥಳಗಳಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.

ಭದ್ರತೆಗೆ ಮನವಿ: ಸಾಕ್ಷಿದಾರನಾಗಿ ಬಂದಿರುವ ದೂರುದಾರನೊಬ್ಬ ಗನ್‌ಮ್ಯಾನ್ ಭದ್ರತೆಯನ್ನು ಕೇಳಿದ್ದಾನೆ ಎನ್ನಲಾಗುತ್ತಿದೆ. ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದ ಅಹಿತಕರ ಘಟೆಯ ಬಳಿಕ ದೂರುದಾರನಿಂದ ಈ ವಿಶೇಷ ಮನವಿ ಬಂದಿದೆ. ನನ್ನ ಮೇಲೂ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಗನ್‌ಮ್ಯಾನ್ ನೀಡಬೇಕೆಂದು ಎಸ್‌ಐಟಿಗೆ ಮನವಿ ಮಾಡಿದ್ದಾನೆ.

ಎಸ್‌ಐಟಿ ಕಚೇರಿಗೆ ದೂರುದಾರ: ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ಬೊಳಿಯಾರ್ ಗೋಂಕ್ರತಾರ್ ಪ್ರದೇಶದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆಸುತ್ತಿರುವ ಮಧ್ಯೆಯೇ ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಟಿ. ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ. ಬೆಳ್ತಂಗಡಿ ಇಚಿಲಂಪಾಡಿ ನಿವಾಸಿ ಜಯಂತ್ ಎಂಬವರು ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಘಟನೆಗೆ ಸಂಬಂಧಿಸಿದಂತೆ ಈ ಹಿಂದೆ ತಾನು ಯುವತಿಯ ಮೃತದೇಹ ನೋಡಿರುವುದಾಗಿ ದೂರು ದಾಖಲಿಸಿದ್ದರು.
ದೂರಿನ ಹಿನ್ನೆಲೆ ಜಯಂತ್ ಟಿ. ಅವರನ್ನು ಕಚೇರಿಗೆ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದು, ಅಧಿಕಾರಿಗಳು ಮಾಹಿತಿ ಕಲೆಹಾಕುವ ಸಾಧ್ಯತೆಯಿದೆ. ಜಯಂತ್ ಟಿ. ಅವರು ಎಸ್‌ಐಟಿ ಬೆಳ್ತಂಗಡಿ ಅವರ ಸಲಹೆಯಂತೆ ಆ. 4ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಅನಾಮಿಕ ದೂರುದಾರ ಗುರುತಿಸಿದ 12 ಸ್ಥಳದಲ್ಲಿ ಈಗಾಗಲೇ ಶೋಧ ನಡೆದಿದ್ದು, 13ನೇ ಸ್ಥಳದ ಶೋಧ ಇಂದು ನಡೆಯಲಿದೆ ಎನ್ನಲಾಗಿತ್ತು. ಆದರೆ ಇಂದು ಯಾವುದೇ ಶೋಧ ಕಾರ್ಯಾಚರಣೆ ನಡೆದಿಲ್ಲ.

Previous articleಧಾರವಾಡ: ಕುಂದಗೋಳದ ಮಹಿಳಾ ಸಂಘಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗರಿ
Next articleKSRTC: ಮುಷ್ಕರದಲ್ಲಿ ಭಾಗಿಯಾಗಿದ್ದ ಸಾರಿಗೆ ಸಿಬ್ಬಂದಿಗೆ ನೋಟಿಸ್

LEAVE A REPLY

Please enter your comment!
Please enter your name here