Rahul Gandhi In Bangalore: ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ರಾಹುಲ್ ರಣಕಹಳೆ

0
168

ಬೆಂಗಳೂರು: “ಮತದಾನ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ದೇಶದ ವಿವಿಧ ಸಂಸ್ಥೆಗಳ ದುರ್ಬಳಕೆಯಿಂದ ಸಂವಿಧಾನ ಮುಗಿಸುವ ಕೆಲಸ ನಡೆಯುತ್ತಿದೆ” ಎಂದು ಮತ ಕಳ್ಳತನದ ವಿರುದ್ಧ ಕಾಂಗ್ರೆಸ್​ ನಾಯಕ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಆರೋಪಿಸಿದರು.

ಶುಕ್ರವಾರ ಬೆಂಗಳೂರು ನಗರದ ಫ್ರೀಡಂ ಪಾರ್ಕ್​​ನಲ್ಲಿ ಮತ ಕಳ್ಳತನದ ವಿರುದ್ಧ ಕಾಂಗ್ರೆಸ್ ಪಕ್ಷದ ಬೃಹತ್ ಪ್ರತಿಭಟನೆ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಚುನಾವಣಾ ಆಯೋಗಕ್ಕೆ ದಾಖಲೆಗಳನ್ನು ಕೇಳಿದರು. “ನಾವು ಚುನಾವಣೆ ಆಯೋಗದ ಬಳಿ ಮತದಾರರ ಪಟ್ಟಿಯ ಸಾಫ್ಟ್ ಕಾಪಿ ಕೇಳಿದರೂ ಕೊಡಲಿಲ್ಲ. ಮತದಾನದ ವಿಡಿಯೋ ಸಾಕ್ಷಿ ಕೇಳಿದರೂ ಕೊಡಲಿಲ್ಲ” ಎಂದು ದೂರಿದರು.

“ಮತದಾನ ನಡೆದ 45 ದಿನದ ಬಳಿಕ ಮತದಾನದ ವಿಡಿಯೋ ಸಾಕ್ಷಿಯನ್ನು ನಾಶ ಮಾಡಿದರು. ಕರ್ನಾಟಕದಲ್ಲಿ ಬಿಜೆಪಿ 16 ಸ್ಥಾನ ಹಾಗೂ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಪಕ್ಷ 15-16 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯನ್ನು ಹೊಂದಿತ್ತು. ಕೆಲವು ಕ್ಷೇತ್ರದ ಸೋಲು ಅಚ್ಚರಿಯನ್ನು ತಂದಿದೆ” ಎಂದರು.

ಹೊಸ ಮತದಾರರು, ಬಿಜೆಪಿ: ರಾಹುಲ್ ಗಾಂಧಿ ಮಾತನಾಡಿ, “ನಮ್ಮ ಸಮೀಕ್ಷೆಯ ಪ್ರಕಾರ ಗೆಲುವು ಸಾಧಿಸಬೇಕಾದ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸೋತೆವು. ಆ ಪೈಕಿ ಬೆಂಗಳೂರು ಸೆಂಟ್ರಲ್ ಕ್ಷೇತ್ರಕ್ಕೆ ಸೇರುವ ಮಹದೇವಪುರದಲ್ಲಿ ತನಿಖೆ ನಡೆಸಿದಾಗ ಕಾಂಗ್ರೆಸ್ 1,15,586 ಮತಗಳನ್ನು ಪಡೆದರೆ, ಬಿಜೆಪಿ 2,29,632 ಮತಗಳನ್ನು ಪಡೆದುಕೊಂಡಿದೆ. ಮತಗಳ ಅಂತರ 1,14,046” ಎಂದು ಹೇಳಿದರು.

“ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂವಿಧಾನದ ಮೇಲೆ ಆಕ್ರಮಣ ಮಾಡಿದ್ದಾರೆ. ಸಣ್ಣಪುಟ್ಟ ಪಕ್ಷಗಳನ್ನು ಸಂಹಾರ ಮಾಡಿ ಅಧಿಕಾರ ಗಳಿಸಿದ್ದಾರೆ. ಚುನಾವಣೆಯಲ್ಲಿ ನಾವು ಸಂವಿಧಾನ ರಕ್ಷಣೆ ಮಾಡಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.

“ಒಬ್ಬರಿಗೆ ಒಂದು ಮತ ಎಂಬುದು ಈ ಪುಸ್ತಕದ ಮೂಲಭೂತ ಅಡಿಪಾಯ. ಮತದಾನ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ದೇಶದ ವಿವಿಧ ಸಂಸ್ಥೆಗಳ ದುರ್ಬಳಕೆಯಿಂದ ಸಂವಿಧಾನ ಮುಗಿಸುವ ಕೆಲಸ ನಡೆಯುತ್ತಿದೆ” ಎಂದು ಗಂಭೀರ ಆರೋಪ ಮಾಡಿದರು.

“ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲರ ಮನಸ್ಸಿನಲ್ಲಿ ಸಂದೇಹ ಹುಟ್ಟಿತ್ತು. ಬಿಜೆಪಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ನಮಗೆ ಇದರಿಂದ ಗೊತ್ತಾಗಿದ್ದು ಹೊಸದಾಗಿ 1 ಕೋಟಿ ಮತದಾರರು ಮತದಾನ ಮಾಡಿದ್ದಾರೆ. ಆದರೆ ಲೋಕಸಭೆಯಲ್ಲಿ ಮತದಾನ ಮಾಡದ ಹೊಸ ಮತದಾರರು ವಿಧಾನಸಭೆಯಲ್ಲಿ ಮತಹಾಕಿದ್ದು ಆಶ್ಚರ್ಯಕರವಾಗಿದೆ” ಎಂದರು.

“ಕ್ಷೇತ್ರದಲ್ಲಿ ಎಲ್ಲಿ ಎಲ್ಲಿ ಹೊಸ ಮತದಾರರು ಸೇರಿದ್ದಾರೋ ಅಲ್ಲಿ ಬಿಜೆಪಿ ಜಯಗಳಿಸಿತ್ತು. ನಮ್ಮ ಮತಗಳ ಸಂಖ್ಯೆ ಕಡಿಮೆಯಾಗಿರಲಿಲ್ಲ. ನಮಗೆ ವಿಧಾನಸಭೆಯಲ್ಲಿ ಸಿಕ್ಕಷ್ಟೇ ಮತ ಲೋಕಸಭೆಯಲ್ಲಿ ಸಿಕ್ಕಿತ್ತು. ಆದರೆ ಹೊಸದಾಗಿ ಬಂದ ಎಲ್ಲಾ ಮತದಾರರೂ ಬಿಜೆಪಿ ವೋಟು ಹಾಕಿದ್ದರು. ಇದರಿಂದಲೇ ನಮಗೆ ಚುನಾವಣಾ ಅಕ್ರಮ ನಡೆಯುತ್ತಿರುವುದು ಸ್ಪಷ್ಟವಾಗಿತ್ತು. ಆದದ್ದರಿಂದಲೇ ನಾವು ಚುನಾವಣಾ ಆಯೋಗದ ಬಳಿ ಮತದಾರರ ಪಟ್ಟಿಯ ಸಾಫ್ಟ್ ಕಾಪಿ ಕೇಳಿದೆವು, ಅವರು ಕೊಡಲಿಲ್ಲ, ವಿಡಿಯೋ ಸಾಕ್ಷಿ ಕೇಳಿದರೂ ಕೊಡಲಿಲ್ಲ” ಎಂದು ದೂರಿದರು.

“ಮತದಾನ ನಡೆದ 45 ದಿನದ ಬಳಿಕ ಮತದಾನದ ವಿಡಿಯೋ ಸಾಕ್ಷಿಯನ್ನು ನಾಶ ಮಾಡಿದರು. ನಾವು ಒಂದು ಲೋಕಸಭಾ ಕ್ಷೇತ್ರದಿಂದ ನಮ್ಮ ವಿಶ್ಲೇಷಣೆ ಪ್ರಾರಂಭಿಸಿದೆವು. ಬೆಂಗಳೂರು ಕೇಂದ್ರದ ಮಹದೇವಪುರ ಕ್ಷೇತ್ರವನ್ನು ಗಮನಿಸಿದಾಗ ಚುನಾವಣಾ ಆಯೋಗ ಮತ್ತು ಬಿಜೆಪಿ ಎರಡೂ ಸೇರಿಕೊಂಡು ಅಕ್ರಮ ನಡೆಸಿರುವುದನ್ನು ನಾವು ಸಾಬೀತು ಪಡೆಸಿದ್ದೇವೆ” ಎಂದು ರಾಹುಲ್ ಗಾಂಧಿ ತಿಳಿಸಿದರು.

Previous article‘ಕನಕವತಿ’ಯಾಗಿ ಕಂಗೊಳಿಸಿ ಅಭಿಮಾನಿಗಳ ಕಣ್ಮನ ಸೆಳೆದ ರುಕ್ಮಿಣಿ ವಸಂತ
Next articleಚುನಾವಣಾ ಆಯೋಗ ಬಿಜೆಪಿಯ ಬ್ರ್ಯಾಂಚ್‌ ಆಫೀಸ್‌

LEAVE A REPLY

Please enter your comment!
Please enter your name here