ನವದೆಹಲಿ: ಟಾಟಾ ಮೋಟಾರ್ಸ್ ಸಂಸ್ಥೆಗೆ ಸೇರಿದ ಜಾಗ್ವಾರ್ ಲ್ಯಾಂಡ್ ರೋವರ್ (JLR) ಹೊಸ ಸಿಇಒ ಆಗಿ ಭಾರತೀಯ ಮೂಲದ ಪಿ.ಬಿ.ಬಾಲಾಜಿ ನೇಮಕ ಮಾಡಲಾಗಿದೆ. ಅವರು ಜಿಎಲ್‌ಆರ್‌ನ ಉನ್ನತ ಸ್ಥಾನವನ್ನು ಅಲಂಕರಿಸುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಟಾಟಾ ಗ್ರೂಪ್‌ನ ಗ್ರೂಪ್ ಸಿಎಫ್‌ಒ ಆಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪಿ.ಬಿ. ಬಾಲಾಜಿ 2025ನೇ ನವೆಂಬರ್‌ನಿಂದ ಜಾರಿಗೆ ಬರುವಂತೆ ಜೆಎಲ್‌ಆರ್ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಸಂಸ್ಥೆಯಲ್ಲಿ ಆಡ್ರಿಯನ್ ಮಾರ್ಡೆಲ್ ಸೇವೆ ಸಲ್ಲಿಸುತ್ತಿದ್ದು ಕಳೆದ ಮೂರು ವರ್ಷಗಳ ಕಾಲ ಸಿಇಒ ಆಗಿ ಮತ್ತು 35 ವರ್ಷಗಳ ಕಾಲ ಕಂಪನಿಯಲ್ಲಿ ಸೇವೆ ಸಲ್ಲಿಸಿದ ನಂತರ ಜೆಎಲ್‌ಆರ್‌ನಿಂದ ನಿವೃತ್ತರಾಗುತ್ತಿದ್ದಾರೆ.
1995ರಲ್ಲಿ ಯೂನಿಲಿವರ್‌ನೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಬಾಲಾಜಿ ಅನುಭವಿ ಹಣಕಾಸು ತಜ್ಞರು. ಭಾರತ, ಸಿಂಗಾಪುರ, ಯುಕೆ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಾದ್ಯಂತ ಕಾರ್ಪೊರೇಟ್ ಹಣಕಾಸು ಮತ್ತು ಪೂರೈಕೆ ಸರಪಳಿಯಲ್ಲಿ ಹಿರಿಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
2017ರಲ್ಲಿ ಟಾಟಾ ಮೋಟಾರ್ಸ್‌ಗೆ ಸೇರುವ ಮೊದಲು, ಬಾಲಾಜಿ ಹಿಂದೂಸ್ತಾನ್ ಯೂನಿಲಿವರ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕೋಲ್ಕತ್ತಾದಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿ.
ಬಾಲಾಜಿ 2017 ರಲ್ಲಿ ಟಾಟಾ ಮೋಟಾರ್ಸ್‌ಗೆ ಗ್ರೂಪ್ ಸಿಎಫ್‌ಒ ಆಗಿ ಸೇರಿದರು ಆರ್ಥಿಕ ನೀತಿ, ಬಂಡವಾಳ ಹಂಚಿಕೆ ಕಾರ್ಯತಂತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನೇಮಕಾತಿಯು ಟಾಟಾ ಗ್ರೂಪ್‌ನೊಳಗೆ ಗಮನಾರ್ಹವಾದ ಸಿಎಫ್‌ಒ-ಟು-ಸಿಇಒ ಪರಿವರ್ತನೆಯನ್ನು ಸೂಚಿಸುತ್ತದೆ. ಬಾಲಾಜಿ ಟಾಟಾ ಮೋಟಾರ್ಸ್‌ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು ಜಾಗ್ವಾರ್ ಲ್ಯಾಂಡ್ ರೋವರ್ ಆಟೋಮೋಟಿವ್ ಪಿಎಲ್‌ಸಿ (ಯುಕೆ), ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್, ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಏರ್ ಇಂಡಿಯಾ ಸೇರಿದಂತೆ ಹಲವಾರು ಟಾಟಾ ಗ್ರೂಪ್ ಕಂಪನಿಗಳ ಮಂಡಳಿಗಳಲ್ಲಿದ್ದಾರೆ.
ಬಾಲಾಜಿ ಈ ಕುರಿತು ಮಾತನಾಡಿ, ಈ ಅದ್ಭುತ ಕಂಪನಿಯನ್ನು ಮುನ್ನಡೆಸುವುದು ನನ್ನ ಸೌಭಾಗ್ಯ. ಕಳೆದ 8 ವರ್ಷಗಳಲ್ಲಿ ನಾನು ಈ ಕಂಪನಿ ಮತ್ತು ಅದರ ನಿಸ್ಸಂದೇಹ ಜಾಗತಿಕ ಬ್ರ್ಯಾಂಡ್‌ಗಳನ್ನು ತಿಳಿದುಕೊಂಡು ಬೆಳೆದಿದ್ದೇನೆ. ತಂಡವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲು ನಾನು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಆಡ್ರಿಯನ್ ಅಪಾರ ಕೊಡುಗೆಗಳಿಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.