ದಕ್ಷಿಣ ಕನ್ನಡ: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆ ಮುಂದುವರೆದಿದ್ದು, ಕಾರ್ಯಾಚರಭೆ ವೇಳೆ ಗಂಡಸಿನ ಆಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಎಸ್‌ಐಟಿ ಅಧಿಕಾರಿಗಳು ಅನಾಮಿಕ ದೂರುದಾರನ ಜೊತೆ ನೇತ್ರಾವತಿ ಸ್ನಾನ ಘಟ್ಟದ ಬಳಿ ಹೆದ್ದಾರಿ ಪಕ್ಕದ ಕಾಡಿನೊಳಗೆ ತೆರಳಿ ಶೋಧ ಕಾರ್ಯ ನಡೆಸಿದರು. ಸಾಕ್ಷಿ ದೂರುದಾರ ಮೃತದೇಹಗಳನ್ನು ಹೂತಿರುವುದಾಗಿ ಹೇಳಿ ಧರ್ಮಸ್ಥಳದಲ್ಲಿ ಒಟ್ಟು 13 ಜಾಗಗಳನ್ನು ತೋರಿಸಿದ್ದ. ಆತ ತೋರಿಸಿರುವ 10 ಜಾಗಗಳನ್ನು ಇದುವರೆಗೆ ಸರದಿ ಪ್ರಕಾರ ಅಗೆಯಲಾಗಿದೆ. ಅದರ ಅನ್ವಯ ದೂರುದಾರ ತೋರಿಸಿರುವ 11ನೇ ಜಾಗವನ್ನು ಇಂದು ಅಗೆಯಬೇಕಿತ್ತು. ಅಧಿಕಾರಿಗಳ ತಂಡವು 11 ನೇ ಜಾಗದ ಬಳಿಯಿಂದಲೇ ಕಾಡಿನ ಒಳಗೆ ಪ್ರವೇಶಿಸಿದೆಯಾದರೂ ಆ ಜಾಗವನ್ನು ಅಗೆದಿಲ್ಲ.
ಸಾಕ್ಷಿ ದೂರುದಾರನನ್ನೂ ಕಾಡಿನ ಒಳಗೆ ಕರೆದೊಯ್ದು ಕಾರ್ಯಾಚರಣೆ ನಡೆಸಿದ ವೇಳೆ ಅರಣ್ಯ ಪ್ರದೇಶದ ಭೂಮಿಯ ಮೇಲ್ಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಗಂಡಸಿನ ಅಸ್ಥಿಪಂಜರದ ಅವಶೇಷಗಳು ಬಿದ್ದಿರುವುದು ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿದ ಹಗ್ಗ ಗಂಡಸಿನ ಬಟ್ಟೆಗಳು ಪತ್ತೆಯಾಗಿದ್ದು ಅದನ್ನು ಮಹಜರು ನಡೆಸಿ ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ.
ಸಾಕ್ಷಿದಾರ ವ್ಯಕ್ತಿ ಗುರುತಿಸಿದ ಆರನೇ ಸ್ಥಳದಲ್ಲೂ ಪುರುಷ ಆಸ್ಥಿಪಂಜರದ ತಲೆ ಬುರುಡೆಯ ಎರಡು ಭಾಗಗಳು ಸೇರಿದಂತೆ 12 ಅವಶೇಷಗಳು ಪತ್ತೆಯಾಗಿತ್ತು. ಇಂದಿನ ಶೋಧ ಕಾರ್ಯಕ್ಕೆ ಸುಮಾರು 20 ಕಾರ್ಮಿಕರನ್ನು ಬಳಸಲಾಗುತ್ತಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ , ಎಸ್‌ಐಟಿಯ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಸ್ಥಳದಲ್ಲಿದ್ದರು.
40-50 ವರ್ಷ ಹಳೆಯದು:
ಆರನೇ ಜಾಗದಲ್ಲಿ ದೊರೆತ ಕಳೇಬರದ ಅವಶೇಷಗಳು ಸುಮಾರು 40ರಿಂದ 50 ವರ್ಷ ಹಳೆಯದು ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಎಸ್‌ಐಟಿ ತಂಡವು ಈ ಕುರಿತಂತೆ ದೃಢ ಪಡಿಸಿಲ್ಲ.
ಎಸ್‌ಐಟಿಗೆ ದೂರು:
ಧರ್ಮಸ್ಥಳದಲ್ಲಿ ಅಪ್ರಾಪ್ತ ಬಾಲಕಿಯ ಶವ ಹೂತು ಹಾಕಲಾಗಿದೆ ಎಂದು ಸಮಾಜ ಸೇವಕ ಜಯನ್ ಟಿ. ಆರೋಪಿಸಿದ್ದು, ಈ ಸಂಬಂಧ ಎಸ್‌ಐಟಿಗೆ ದೂರು ಅರ್ಜಿ ಸಲ್ಲಿಸಿದ್ದಾರೆ. ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಬಂದ ಜಯನ್ ಅವರಿಗೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಎಸ್‌ಐಟಿ ಸೂಚನೆ ನೀಡಿದೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಾಗಿರುವುದರಿಂದ ಅಲ್ಲಿಯೇ ಮೊದಲು ಕೇಸ್ ಕೊಡುವಂತೆ ಸೂಚನೆ ನೀಡಿದ ಹಿನ್ನೆಲೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಅರ್ಜಿಯಲ್ಲಿ ಪ್ರಕರಣದ ವಿವರ ನೀಡಲಾಗಿದೆ.
ಎಸ್‌ಐಟಿ ತಂಡ ಇಂದಿನ ಕಾರ್ಯಾಚರಣೆ ಪೂರ್ಣಗೊಳಿಸಿ ಹಿಂತಿರುಗಿದೆ. ಸ್ಥಳದಿಂದ ದೊರೆತಿರುವ ಕಳೆಬರಗಳ ಅವಶೇಷಗಳನ್ನು ಸೀಲ್ ಮಾಡಿ ಹೊರತರಲಾಗಿದೆ. ಮೂರು ಬಕೆಟ್‌ಗಳನ್ನು ಸೀಲ್ ಮಾಡಿ ಹೊರತಂದಿದ್ದು ಮತ್ತೊಂದು ಸೀಲ್ ಮಾಡಿದ ಉದ್ದದ ಪ್ಯಾಕ್ ಅನ್ನು ಹೊರತರಲಾಗಿದೆ