ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಮಂಗಳವಾರದ ಸಂಚಾರ ವ್ಯವಸ್ಥೆ ಬಗ್ಗೆ ಅಪ್‌ಡೇಟ್. 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 2 ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದನ್ನು ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಆಗಸ್ಟ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಇದಕ್ಕಾಗಿ ನಗರ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಸಂಚಾರಿ ಪೊಲೀಸರು ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ.
ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಆದ್ದರಿಂದ ಶೇಷಾದ್ರಿ ರಸ್ತೆ, ಫ್ರೀಡಂ ಪಾರ್ಕ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಸಂಚಾರಿ ಪೊಲೀಸರು ಹೇಳಿದ್ದಾರೆ.
ಈ ಕ್ಷಣದ ಅಪ್‌ಡೇಟ್: ಮಂಗಳವಾರ ನಡೆಯಬೇಕಿದ್ದ ರಾಹುಲ್ ಗಾಂಧಿ ನೇತೃತ್ವದ ಪ್ರತಿಭಟನೆಯನ್ನು ಆಗಸ್ಟ್ 8ಕ್ಕೆ ಮುಂದೂಡಿಕೆ ಮಾಡಲಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿಕೆ ನೀಡಿದ್ದಾರೆ.
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಶಿಬು ಸೊರೇನ್ ನಿಧನದ ಹಿನ್ನಲೆಯಲ್ಲಿ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ.
ಸಂಚಾರ ನಿರ್ಬಂಧ, ಪರ್ಯಾಯ ಮಾರ್ಗದ ವಿವರ
- ಶಾಂತಲಾ ಜಂಕ್ಷನ್ ಮತ್ತು ಖೋಡ್ ಸರ್ಕಲ್‌ನಿಂದ ಸರ್ಕಲ್‌ನಿಂದ ಆನಂದ ರಾವ್ ಫ್ಲೈ ಓವರ್, ಓಲ್ಡ್ ಜೆಡಿಎಸ್ ಕ್ರಾಸ್ ಶೇಷಾದ್ರಿ ರಸ್ತೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚಾರ ನಡೆಸುವ ವಾಹನಗಳು ಲೂಲು ಮಾಲ್, ಕೆಎಂಎಫ್, ರಾಜೀವ್ ಗಾಂಧಿ ಸರ್ಕಲ್, ಮಂತ್ರಿ ಮಾಲ್, ಸ್ವಸ್ತಿಕ್ ಸರ್ಕಲ್, ಶೇಷಾದ್ರಿಪುರಂ, ನೆಹರು ಸರ್ಕಲ್, ರೇಸ್ ಕೋರ್ಸ್ ಫ್ಲೈ ಓವರ್, ರೇಸ್ ಕೋರ್ಸ್ ರಸ್ತೆ ಮೂಲಕ ಸಂಚರಿಸುವುದು.
- ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ಸರ್ಕಲ್ ಕಡೆಗೆ ಸಾಗುವ ವಾಹನಗಳು ಕೆಜಿ ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ಕೆ.ಜಿ ಜಂಕ್ಷನ್, ಎಲೈಟ್, ಟಿಬಿ ರಸ್ತೆ, ಕೆ.ಎಫ್.ಎಂ, ರಾಜೀವ್ ಗಾಂಧಿ ಸರ್ಕಲ್, ಸ್ವಸ್ತಿಕ್, ನೆಹರು ಸರ್ಕಲ್, ರೇಸ್ ಕೋರ್ಸ್ ಫೈ ಓವರ್ ರಸ್ತೆ ಮೂಲಕ ಸಂಚರಿಸುವುದು.
- ಚಾಲುಕ್ಯ ಸರ್ಕಲ್‌ನಿಂದ ಮೈಸೂರು ಬ್ಯಾಂಕ್ ಕಡೆಗೆ ಚಾಲುಕ್ಯ ಸರ್ಕಲ್, ಎಲ್‌ಆರ್‌ಡಿ, ರಾಜಭವನ ರಸ್ತೆ, ಇನ್ ಫೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್‌ನಿಂದ ತೆರಳುವುದು.
- ಕಾಳಿದಾಸ ರಸ್ತೆ ಕನಕದಾಸ ಜಂಕ್ಷನ್ ಕಡೆಯಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು ಕನಕದಾಸ ಜಂಕ್ಷನ್ ಬಲ ತಿರುವು ಪಡೆದು ಸಾಗರ ಜಂಕ್ಷನ್ ಕಡೆಗೆ ಸಂಚರಿಸಬಹುದಾಗಿದೆ.
- ಮೌರ್ಯ/ ಸುಬ್ಬಣ್ಣ ಜಂಕ್ಷನ್‌ನಿಂದ ಫ್ರೀಡಂ ಪಾರ್ಕ್ ಕಡೆಗೆ ಸಂಚರಿಸುವ ವಾಹನಗಳು
ಸುಬ್ಬಣ್ಣ ಜಂಕ್ಷನ್‌ನಿಂದ ಬಲ ತಿರುವು ಆನಂದ್ ರಾವ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
ಪ್ರತಿಭಟನೆಗೆ ಭಾರೀ ಭದ್ರತೆ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಭಟನೆಗೆ ಭಾರೀ ಭದ್ರತೆ ಕಲ್ಪಿಸಲಾಗಿದೆ. 4,524 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅದರಲ್ಲೂ ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರ್ಕಾರ ರಾಹುಲ್ ಬೆಂಗಳೂರು ಭೇಟಿ ವೇಳೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ನೇತೃತ್ವದಲ್ಲಿ 11 ಡಿಸಿಪಿ, 45 ಎಸಿಪಿ, 133 ಇನ್ಸ್‌ಪೆಕ್ಟರ್, 421 ಸಬ್ ಇನ್ಸ್‌ಪೆಕ್ಟರ್, 3,323 ಹೆಡ್ ಕಾನ್ ಸ್ಟೆಬಲ್ ಹಾಗೂ ಕಾನ್ ಸ್ಟೆಬಲ್‌ಗಳು ಹಾಗೂ 591 ಮಹಿಳಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದೆ. ಕೆಎಸ್‌ಆರ್‌ಪಿ ತುಕಡಿ, ಡಿಎಸ್‌ಎಂಡಿ ತುಕಡಿ (ಮೆಟಲ್ ಡಿಟೆಕ್ಟರ್), ಅಂಬ್ಯುಲೆನ್ಸ್, ಅಗ್ನಿಶಾಮಕ ವಾಹನ, ವಾಟರ್ ಜೆಟ್ ವಾಹನ, ಡಿ-ಸ್ಪಾಟ್, ಗರುಡ ಪಡೆಗಳನ್ನು ನಿಯೋಜಿಸಲಾಗಿದೆ.