Saina Nehwal: ಮತ್ತೆ ಒಂದಾಗುತ್ತೇವೆ ಎಂದ ಸೈನಾ-ಕಶ್ಯಪ್

0
172

ಮುಂಬೈ: ವಿವಾಹ ವಿಚ್ಛೇದನ ಘೋಷಣೆ ಮಾಡಿದ್ದ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ, ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ದಂಪತಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸೈನಾ ನೆಹ್ವಾಲ್, “ಕೆಲವೊಮ್ಮೆ ದೂರವಾಗಿರುವುದು ಹತ್ತಿರವಾಗಿರುವುದರ ಮೌಲ್ಯವನ್ನು ಕಲಿಸುತ್ತದೆ, ನಾವು ಮತ್ತೆ ಒಂದಾಗಲು ತೀರ್ಮಾನಿಸಿದ್ದೇವೆ” ಎಂದು ಕಶ್ಯಪ್ ಅವರೊಂದಿಗಿನ ಫೋಟೋದೊಂದಿಗೆ ಬರೆದುಕೊಂಡಿದ್ದಾರೆ.

ಪರುಪಳ್ಳಿ ಕಶ್ಯಪ್ ಅವರೊಂದಿಗೆ ಸೈನಾ 7 ವರ್ಷಗಳ ಹಿಂದೆ 2018 ರ ಡಿಸೆಂಬರ್ 14ರಂದು ವಿವಾಹವಾಗಿದ್ದರು. ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಒಂದೇ ಕ್ಷೇತ್ರದವರು. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಕಳೆದ ಜುಲೈ 14 ರಂದು, ಸೈನಾ-ಕಶ್ಯಪ್‌ ಜೋಡಿ ಪರಸ್ಪರ ಡಿವೋರ್ಸ್‌ಗೆ ಮುಂದಾಗಿದ್ದರು. ಅಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, “ಜೀವನವು ಕೆಲವೊಮ್ಮೆ ವಿಭಿನ್ನ ದಿಕ್ಕುಗಳಲ್ಲಿ ನಮ್ಮನ್ನು ಕರೆದೊಯ್ಯತ್ತದೆ. ಸಾಕಷ್ಟು ಆಲೋಚಿಸಿ ಬೇರೆಯಾಗಲು ಕಶ್ಯಪ್ ಮತ್ತು ನಾನು ನಿರ್ಧರಿಸಿದ್ದೇವೆ’ ಎಂದು ಸೈನಾ ಬರೆದುಕೊಂಡಿದ್ದರು.

ಅಲ್ಲದೇ “ನಾವು ನಮಗಾಗಿ ಪರಸ್ಪರ ಶಾಂತಿ, ಬೆಳವಣಿಗೆಗಾಗಿ ಈ ತೀರ್ಮಾನ ಕೈಗೊಂಡಿದ್ದೇವೆ. ಹಲವು ನೆನಪುಗಳಿಗೆ ನಾವು ಕೃತಜ್ಞರಾಗಿದ್ದೇವೆ. ಈ ಸಮಯದಲ್ಲಿ ಖಾಸಗಿನವನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದು ಕೂಡಾ ಸೈನಾ ಹೇಳಿದ್ದರು.

ಹೈದರಾಬಾದ್‌ನಲ್ಲಿ ಸೈನಾ ಮತ್ತು ಕಶ್ಯಪ್ ಪ್ರೇಮ ಕಥೆ ಪ್ರಾರಂಭವಾಗುತ್ತದೆ. ಈ ಇಬ್ಬರೂ ಸಹ ಪುಲ್ಲೇಲಾ ಗೋಪಿಚಂದ್ ಅಕಾಡಮಿಯಲ್ಲಿ ಒಟ್ಟಿಗೆ ತರಬೇತಿಯನ್ನು ಪಡೆಯುತ್ತಿದ್ದರು. 2004ರಲ್ಲಿ ಡೇಟಿಂಗ್ ಪ್ರಾರಂಭವಾಗಿದ್ದರೂ ಸಹ ಜೋಡಿ ವೃತ್ತಿ ಬದುಕಿನ ಬಗ್ಗೆ ಹೆಚ್ಚಿನ ಗಮನಹರಿಸಿದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡರು.

2008ರ ಬೀಜಿಂಗ್ ಒಲಂಪಿಕ್ಸ್‌ನಲ್ಲಿ ಸೈನಾ ಕ್ವಾರ್ಟರ್ ಫೈನಲ್ ಪ್ರವೇಶ ಮಾಡುವ ಮೂಲಕ ಜನಪ್ರಿಯತೆ ಪಡೆದರು. 2012ರ ಲಂಡನ್ ಸಮ್ಮರ್ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಪಡೆದರು. 2019ರ ಕಾಮನ್‌ವೆಲ್ತ್‌ನಲ್ಲಿ ಸೈನಾ ಪಿ.ವಿ. ಸಿಂಧು ಸೋಲಿಸಿದರು. ಆಗ ಕಶ್ಯಪ್, ಸೈನಾ ಕೋಚ್ ಆಗಿದ್ದರು. 2018ರಲ್ಲಿ ಈ ತಾರಾ ಜೋಡಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನ ಆರಂಭಿಸಿದರು. 2024ರಲ್ಲಿ ಕಶ್ಯಪ್ ಬ್ಯಾಂಡ್ಮಿಂಟನ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸೈನಾ ನೆಹ್ವಾಲ್ ಇನ್ನೂ ಆಟವಾಡುತ್ತಿದ್ದಾರೆ.

2015ರಲ್ಲಿ ಕಶ್ಯಪ್‌ ಕಾಲಿಗೆ ಗಾಯವಾಗಿತ್ತು. ಆಗ ವೃತ್ತಿ ಜೀವನಕ್ಕೂ ತೊಂದರೆ ಉಂಟಾಯಿತು. 2016ರ ರಿಯೋ ಒಲಂಪಿಕ್ಸ್‌ನಿಂದ ಅವರು ದೂರ ಉಳಿದರು. ಆಗ ಸೈನಾ ಅವರಿಗೆ ಭಾವನಾತ್ಮಕ ಬೆಂಬಲವಾಗಿ ನಿಂತಿದ್ದರು.

35 ವರ್ಷದ ಸೈನಾ ನೆಹ್ವಾಲ್ ‌ದಂಪತಿ ಮತ್ತೇ ಒಂದಾಗುವ ನಿರ್ಧಾರದ ಕುರಿತು ಸೋಷಿಯಲ್‌ ಮೀಡಿಯಾದಲ್ಲೂ ಮಾಹಿತಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Previous articleಬುಲೆಟ್‌ ಟ್ರೈನ್ ಶೀಘ್ರ ಆರಂಭ: ಎರಡೇ ಗಂಟೆಗಳಲ್ಲಿ ಮುಂಬೈ-ಅಹಮದಾಬಾದ್ ಪಯಣ
Next articleಕರ್ನಾಟಕದಲ್ಲಿ ಮತ್ತೆ ಮಳೆ ಆರ್ಭಟ: ಮುಂದಿನ 7 ದಿನದ ಹವಾಮಾನ ಮುನ್ಸೂಚನೆ

LEAVE A REPLY

Please enter your comment!
Please enter your name here