ಬೆಂಗಳೂರು: ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕೈದಿ ಸಂಖ್ಯೆ 15528 ನೀಡಲಾಗಿದೆ. ಅಲ್ಲದೇ ಜೈಲು ಸಿಬ್ಬಂದಿಯ ಬಿಳಿ ವಸ್ತ್ರವನ್ನು ನೀಡಲಾಗಿದೆ.
ಇಷ್ಟು ದಿನಗಳ ಕಾಲ ಮಹಾರಾಜನಂತೆ ಐಷಾರಾಮಿ ಬದುಕನ್ನು ಸಾಗಿಸಿರುವ ಪ್ರಜ್ವಲ್‌ಗೆ ಈ ಶಿಕ್ಷೆಯಿಂದ ಅವರ ಜೀವನಶೈಲಿಯೇ ಬದಲಾಗಲಿದೆ. ಪ್ರಜ್ವಲ್ ಜೈಲು ಅಧಿಕಾರಿಗಳ ಸೂಚನೆಯಂತೆ ನಡೆಯಬೇಕು. ಜೈಲಿನ ಎಲ್ಲ ಕಾನೂನುಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಜೈಲಿನಲ್ಲಿ ನೀಡಿದ ಉಪಾಹಾರ, ಊಟ ಮಾಡಬೇಕು ಎಲ್ಲ ಕೈದಿಗಳೊಂದಿಗೆ ಸಾಮಾನ್ಯ ಕೈದಿಯಂತೆಯೇ ಬದುಕಬೇಕು.
ಜೈಲಿನ ನಿಯಮಾನುಸಾರ ಪ್ರಜ್ವಲ್ ಕೆಲಸ ಮಾಡಬೇಕಾಗಿದ್ದು, ಒಂದು ವರ್ಷ ಕೌಶಲ್ಯ ರಹಿತ ದಿನಕ್ಕೆ 524 ರೂ. ಸಂಬಳವನ್ನು ನೀಡಲಾಗುತ್ತದೆ. ಇದರೊಂದಿಗೆ ಜೈಲಿನ ಸಜಾಬಂಧಿ ಕೈದಿಗಳ ನಿಯಮಗಳನ್ನು ಕೂಡ ಪ್ರಜ್ವಲ್ ರೇವಣ್ಣ ಕಡ್ಡಾಯವಾಗಿ ಪಾಲಿಸಬೇಕಿದೆ.
ಪ್ರತಿದಿನ 8 ಗಂಟೆ ಕೆಲಸ ಮಾಡಬೇಕಿರುವ ಪ್ರಜ್ವಲ್, ಕರಕುಶಲ ವಸ್ತು ತಯಾರಿಕೆ, ಮರಗೆಲಸ, ಹೈನುಗಾರಿಕೆ, ತರಕಾರಿ ಬೆಳೆಯುವುದು ಸೇರಿ ಯಾವುದಾದರೂ ಒಂದು ಕೆಲಸವೊಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಆರಂಭದಲ್ಲಿ ಕೌಶಲ್ಯ ರಹಿತ ಎಂಬ ಸಂಬಳವನ್ನು ನೀಡಲಾಗುತ್ತದೆ. ಬಳಿಕ ಕೆಲಸದಲ್ಲಿನ ಅನುಭವವನ್ನು ನೋಡಿ ಅವರಿಗೆ ಬಡ್ತಿ ನೀಡಲಾಗುತ್ತದೆ. ಆಗ ಸಂಬಳವನ್ನು ಕೂಡ ಹೆಚ್ಚಿಸಲಾಗುತ್ತದೆ.
ನಿದ್ದೆ ಮಾಡದ ಪ್ರಜ್ವಲ್: ಪ್ರಜ್ವಲ್ ಅವರನ್ನ ಸಜಾಬಂಧಿ ಕೈದಿಗಳ ಬ್ಯಾರಕ್‌ಗೆ ಶನಿವಾರ ಶಿಫ್ಟ್ ಮಾಡಲಾಗಿದ್ದು, ಅಲ್ಲಿ ತಡರಾತ್ರಿವರೆಗೂ ನಿದ್ದೆಯೇ ಮಾಡಿಲ್ಲ ಎಂದು ಹೇಳಲಾಗಿದೆ. ಬೆಳಗ್ಗೆ ಎದ್ದು ನಿತ್ಯಕರ್ಮ ಮುಗಿಸಿ ಸುಮ್ಮನೆ ಕುಳಿತುಕೊಂಡಿದ್ದ ಪ್ರಜ್ವಲ್ ಇಂದು ಕೂಡ ಶಾಕ್‌ನಿಂದ ಹೊರಬಂದತಿಲ್ಲ. ಇನ್ನು ಮುಂಜಾನೆಯ ಉಪಾಹಾರವಾಗಿ ಜೈಲು ಸಿಬ್ಬಂದಿ ಅವಲಕ್ಕಿ, ಉಪ್ಪಿಟ್ಟು ತಿನ್ನಲು ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆಜೀವ ಪರ್ಯಂತ ಶಿಕ್ಷೆ: ಪ್ರಕರಣದ ವಾದ-ಪ್ರತಿವಾದ ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಸಂತೋಷ ಗಜಾನನ ಭಟ್ ಅವರು ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಶನಿವಾರ ತೀರ್ಪು ಪ್ರಕಟಿಸಿದ್ದರು. ಐಪಿಸಿ ಸೆಕ್ಷನ್ 376 (ಎನ್) ಅಡಿ ಜೀವನ ಅಂತ್ಯವಾಗುವವರೆಗೆ ಸಜೆ ವಿಧಿಸಲು ಅವಕಾಶವಿದೆ. ಅದೇ ಮಹಿಳೆಯನ್ನ ಪದೇ ಪದೆ ಅತ್ಯಾಚಾರ ಎಸಗಿದ್ರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ ಈ ಸೆಕ್ಷನ್ ಅಡಿಯಲ್ಲಿ ಪ್ರಜ್ವಲ್‌ಗೆ ಆಜೀವ ಪರ್ಯಂತ ಶಿಕ್ಷೆ ನೀಡಿ ಕೋರ್ಟ್ ಆದೇಶಿಸಿದೆ.
ಪ್ರಜ್ವಲ್‌ಗೆ ಗರಿಷ್ಠ ಶಿಕ್ಷೆ ಜೊತೆ 2 ಸೆಕ್ಷನ್‌ಗಳಡಿ ತಲಾ 5 ಲಕ್ಷದಂತೆ ಒಟ್ಟು 10 ಲಕ್ಷ ರೂ. ದಂಡ ಕೂಡ ವಿಧಿಸಲಾಗಿದೆ. ಜೊತೆಗೆ ಸಂತ್ರಸ್ತೆಗೆ 11.25 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದೆ. ತೀರ್ಪಿನ ಪ್ರತಿಯನ್ನು ಅಪರಾಧಿಗೆ ತಲುಪಿಸುವಂತೆ ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಅವರಿಗೆ ಕೆಲವು ವರ್ಷ ಶಿಕ್ಷೆಯಾಗಬಹುದು ಎಂದು ಸಚಿವ ಎಚ್.ಡಿ. ರೇವಣ್ಣ, ಭವಾನಿ ರೇವಣ್ಣ ಅಂದಾಜಿಸಿದ್ದರು. ಆದರೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.