ಧಾರವಾಡ: “ಲೋಕಸಭೆ ಚುನಾವಣೆ ನಡೆದು 1 ವರ್ಷ ಕಳೆದಿದೆ. ಲೋಕಸಭೆಯಲ್ಲಿ ಸೋತ ಬಳಿಕ ಮತಗಳ್ಳತನವಾಗಿದೆ, ಆಯೋಗ ಸರಿಯಿಲ್ಲ ಅನ್ನುತ್ತೀರಿ. ಎಲ್ಲೆಲ್ಲಿ ಸೋಲುತ್ತೀರಿ ಆಗ ಇವಿಎಂ ಸರಿ ಇಲ್ಲ ಎನ್ನುತ್ತೀರಿ. ಗೆದ್ದಾಗ ಒಂದೇ ಒಂದು ಮಾತೂ ಆಡುವುದಿಲ್ಲ” ಎಂದು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ಮಾಡಿದರು.
ಶನಿವಾರ ಧಾರವಾಡ ನಗರದ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ 20ನೇ ಕಂತು ವಿತರಣೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೋಶಿ ಮಾತನಾಡಿದರು.
“2013ರಲ್ಲಿ ನಿಮಗೆ ಗೊತ್ತಾಗಲಿಲ್ಲವೇ?. ನಿಮಗೆ ಜನರು 136 ಸೀಟು ಕೊಟ್ಟಿದ್ದಾರೆ. ಲೋಕಸಭೆಯಲ್ಲಿ ನಮಗೆ ಮತ ಹಾಕಿದ್ದಕ್ಕೆ ಈ ವಿಚಾರ ಕೇಳುತ್ತಿದ್ದಾರೆ. ಜಾರ್ಖಂಡ್ನಲ್ಲಿ ನಿಮ್ಮ ಮಿತ್ರ ಪಕ್ಷ ಗೆದ್ದಿದೆ, ನೀವು ಸೋತಿದ್ದೀರಿ. ನಾವು ವಿರೋಧ ಪಕ್ಷದಲ್ಲಿದ್ದೇವೆ. ಆದರೆ ನಿಮ್ಮಂತೆ ಬೇರು ಸಮೇತ ಕಿತ್ತುಹೋಗಿಲ್ಲ” ಎಂದು ಜೋಶಿ ಟೀಕಿಸಿದರು.
“ಸೋತಾಗ ಇವಿಎಂ ಸರಿ ಇಲ್ಲ ಅನ್ನುತ್ತೀರಿ. ಗೆದ್ದಾಗ ಒಂದೇ ಒಂದು ಮಾತೂ ಆಡುವುದಿಲ್ಲ. ಚುನಾವಣೆಯಾಗಿ ಫಲಿತಾಂಶ ಘೋಷಣೆಯಾದ ಬಳಿಕ ಒಂದೇ ಒಂದು ಅರ್ಜಿ ಹಾಕಿದ್ದೀರಾ?. ನಮ್ಮ ಭಾರತದ ಕಣ ಕಣದಲ್ಲಿಯೂ ಪ್ರಜಾಪ್ರಭುತ್ವವಿದೆ” ಎಂದು ಜೋಶಿ ವಿಧಾನಸಭೆ, ಲೋಕಸಭಾ ಚುನಾವಣಾ ಫಲಿತಾಂಶ ಉಲ್ಲೇಖಿಸಿ, ಕಾಂಗ್ರೆಸ್ ಆರೋಪ ತಳ್ಳಿ ಹಾಕಿದರು.
“ಕೇಂದ್ರ ಸರ್ಕಾರ ರೈತರ ಬೇಡಿಕೆಗೆ ಅನುಗುಣವಾಗಿ ಯೂರಿಯಾ ಪೂರೈಕೆ ಮಾಡಿದೆ. ಆದರೆ ಸಮರ್ಪಕ ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ. ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳದಿದ್ದರಿಂದ ರೈತರಿಗೆ ಸಮಸ್ಯೆಯಾಗಿದೆ” ಎಂದರು.
“ಯೂರಿಯಾ ರಸಗೊಬ್ಬರವನ್ನು ರಷ್ಯಾ ಹಾಗೂ ಯುಕ್ರೇನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ಅಲ್ಲಿ ಯುದ್ಧ ನಡೆದಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅನ್ಯ ರಾಷ್ಟ್ರಗಳಿಂದ ಆಮದು ಮಾಡಿಕೊಂಡು ರಾಜ್ಯಕ್ಕೆ ಅಗತ್ಯ ಪ್ರಮಾಣಕ್ಕನುಗುಣವಾಗಿ ಪೂರೈಕೆ ಮಾಡಲಾಗಿದೆ. ರಾಜ್ಯದ ವೈಫಲ್ಯದಿಂದ ಕೆಲವೆಡೆ ಯೂರಿಯಾ ಸಿಗದೇ ರೈತರಿಗೆ ತೊಂದರೆಯಾಗಿದೆ” ಎಂದು ತಿಳಿಸಿದರು.
“ರೈತರ ಆದಾಯ ದ್ವಿಗುಣಗೊಳಿಸುವ ದಿಸೆಯಲ್ಲಿ ಕೇಂದ್ರ ಹಲವು ಯೋಜನೆ ಅನುಷ್ಠಾನಗೊಳಿಸಿದೆ. ಒಮ್ಮೆಲೇ ರೈತರ ಆದಾಯ ದ್ವಿಗುಣಗೊಳ್ಳುವುದಿಲ್ಲ. ಹಂತ ಹಂತವಾಗಿ ಆದಾಯ ಹೆಚ್ಚಾಗಲಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ಈವರೆಗೆ 20 ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ 3,58,000 ಕೋಟಿ ರೂ. ಜಮಾ ಮಾಡಲಾಗಿದೆ. 55 ಕೋಟಿ ಜನರಿಗೆ ಜನ್‌ಧನ್ ಖಾತೆ ಮೂಲಕ ನೇರವಾಗಿ ಜನರ ಖಾತೆಗೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ” ಎಂದು ವಿವರಿಸಿದರು.
“ಧಾರವಾಡ ಜಿಲ್ಲೆಯ 99,983 ರೈತರಿಗೆ ಕಿಸಾನ್ ಸಮ್ಮಾನ್ ನಿಧಿ 20.15 ಕೋಟಿ ರೂ. ಜಮಾ ಮಾಡಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ ನಮ್ಮ ಧಾರವಾಡ ಜಿಲ್ಲೆಯ 2281295 ರೈತರು 456.80 ಕೋಟಿ ಧನಸಹಾಯ ಪಡದಂತಾಗಿದೆ. ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ಯೋಜನೆಯಾಗಿರುವ ಈ ಪಿಎಂ ಕಿಸಾನ್ ಯೋಜನೆ ದೇಶದ ಅನ್ನದಾತನಿಗೆ ವರದಾನವಾಗಿದೆ” ಎಂದು ಕೇಂದ್ರ ಸಚಿವರು ಬಣ್ಣಿಸಿದರು.