ಕೊಪ್ಪಳ : ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ಕಳಕಪ್ಪ ನಿಡುಗುಂದಿ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೋಟಿ ಕೋಟಿ ರೂ. ಆಸ್ತಿ ಪತ್ತೆ ಹಚ್ಚಿದ್ದಾರೆ.
‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆ ಕೊಪ್ಪಳ ಕೆಆರ್‌ಐಡಿಎಲ್‌ನಲ್ಲಿ 62 ಕೋಟಿ ಗೋಲ್ಮಾಲ್ ಎಂದು ವರದಿ ಮಾಡಿತ್ತು. ಕೆಆರ್‌ಐಡಿಎಲ್‌ನಲ್ಲಿ ಹೊರಗುತ್ತಿಗೆ ನೌಕರನಾಗಿದ್ದ ಕಳಕಪ್ಪ ನಿಡುಗುಂದಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
ಬೇನಾಮಿ ಆಸ್ತಿ ಮಾಡಿದ್ದ ಕಳಕಪ್ಪ: ಕೊಪ್ಪಳ ಹಾಗೂ ಭಾಗ್ಯ ನಗರ ಸೇರಿದಂತೆ ವಿವಿಧ ಕಡೆ 24 ಮನೆಗಳು, 6 ಪ್ಲಾಟ್, ಸೇರಿದಂತೆ 40 ಎಕರೆ ಕೃಷಿ ಜಮೀನು ಹಾಗೂ 350 ಗ್ರಾಂ ಚಿನ್ನಾಭರಣ, ಒಂದೂವರೆ ಕೆಜಿ ಬೆಳ್ಳಿಯ ಆಭರಣಗಳು, 2 ಬೈಕ್ ಮತ್ತು 2 ಕಾರುಗಳು ಮತ್ತು ತಮ್ಮ ಹಾಗೂ ತಮ್ಮನ ಹೆಂಡತಿಯ ಹೆಸರಿನಲ್ಲಿ ಕಳಕಪ್ಪ ನಿಡುಗುಂದಿ ಬೇನಾಮಿ ಆಸ್ತಿ ಮಾಡಿರುವುದು ಈಗ ಬಯಲಾಗಿದೆ.
ಮನೆಯಲ್ಲಿದ್ದ ಆಸ್ತಿ ದಾಖಲೆಗಳ ಪರಿಶೀಲನೆ ನಂತರ ಕೆಆರ್‌ಐಡಿಎಲ್ ನಿಗಮದ ಎಡಬ್ಲ್ಯೂಇ ಮತ್ತು ಡಬ್ಲೂಇ ಕಚೇರಿಗಳಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಕಳಕಪ್ಪ ನಿಡಗುಂದಿ ಕೆಲಸಕ್ಕೆ ಸೇರಿದ ಆರಂಭದಲ್ಲಿ 200 ರೂ. ವೇತನ ಪಡೆಯುತ್ತಿದ್ದು, 17 ವರ್ಷಗಳ ಸೇವಾವಧಿಯ ಕೊನೆಯಲ್ಲಿ ತಿಂಗಳಿಗೆ 15 ಸಾವಿರ ರೂ. ಸಂಬಳ ಪಡೆಯುತ್ತಿದ್ದರು. ಆದರೆ ಮನೆಯಲ್ಲಿ ಸಿಕ್ಕ ಆಸ್ತಿ ನೋಡಿ ಲೋಕಾಯುಕ್ತ ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.
ಅಧಿಕಾರಿಗಳಿಂದ ಲೋಕಾಯುಕ್ತಕ್ಕೆ ದೂರು: ಕೆಆರ್‌ಐಡಿಎಲ್‌ನಲ್ಲಿ 2022ರಿಂದ 2024ರ ನಡುವೆ ಕೈಗೆತ್ತಿಕೊಂಡ ವಿವಿಧ ಕಾಮಗಾರಿಗಳಲ್ಲಿ 72 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಅಕ್ರಮ ಕುರಿತಾಗಿ ಅಧಿಕಾರಿಗಳು, ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಕಚೇರಿಯಲ್ಲಿದ್ದ ಹಿಂದಿನ ಇಇ ಜೆಡ್.ಎಂ. ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ನೌಕರ ಕಳಕಪ್ಪ ನಿಡಗುಂದಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ದೂರು ಕೇಳಿಬಂದ ಬೆನ್ನಲ್ಲೇ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿತ್ತು. ಆದರೆ ಜೆಡ್.ಎಂ.ಚಿಂಚೋಳಿಕರ್ ತನ್ನ ಮೇಲಿನ ಅಮಾನತು ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಲ್ಲದೆ, ಮಾತೃ ಇಲಾಖೆಯ ಸೇವೆಗೆ ಮರಳಿ, ದಾವಣಗೆರೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಸುಮಾರು 72 ಕೋಟಿ ರೂ. ಅಕ್ರಮ ಎಸಗಲಾಗಿದೆ ಎಂಬ ಆರೋಪದ ಕುರಿತು ಕಳಕಪ್ಪ ನೀಡಗುಂದಿ ವಿರುದ್ದ ದೂರು ದಾಖಲಾಗಿತ್ತು.