ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಂ ಸೋ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದೆ. 2ನೇ ವಾರದ ಪ್ರದರ್ಶನ ಕಾಣುತ್ತಿರುವ ಸಿನಿಮಾದ ಟಿಕೆಟ್ ಸಿಗುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಭಾರೀ ಸುದ್ದು ಮಾಡುತ್ತಿದೆ.
ಜುಲೈ 25ರಂದು ಬಿಡುಗಡೆಯಾದ ಚಿತ್ರ ಗಳಿಕೆಯಲ್ಲಿ ಈ ವರ್ಷದಲ್ಲಿ ಹೊಸ ದಾಖಲೆ ಮಾಡಿದೆ. ಚಿತ್ರ ಬಿಡುಗಡೆ ಮುನ್ನವೇ ಶಿವಮೊಗ್ಗ, ಮಂಗಳೂರು ಸೇರಿದಂತೆ ವಿವಿಧಡೆ ಪ್ರಿಮಿಯರ್ ಶೋ ಮಾಡಲಾಗಿತ್ತು.
ಚಿತ್ರದ ಪ್ರಚಾರಕ್ಕೆ ತಂಡ ವಿನೂತನ ಮಾದರಿ ಅನುಸರಿಸಿತ್ತು. ಬಿಡುಗಡೆಯಾದ ಮೊದಲ ದಿನದಿಂದಲೇ ದಿನದ ಎಲ್ಲಾ ಶೋಗಳು ಬುಕ್ ಆಗುತ್ತಿವೆ. ಈಗ ಸಿನಿಮಾ ನೋಡಬೇಕು ಅಂದರೂ ಟಿಕೆಟ್ ಸಿಗುತ್ತಿಲ್ಲ.
ಆಗಸ್ಟ್ 1ರಂದು ‘ಸು ಫ್ರಮ್ ಸೋ’ ಕೇರಳದಲ್ಲಿ ತೆರೆ ಕಾಣುತ್ತಿದೆ. ಕನ್ನಡದ ಜೊತೆಗೆ ಮಲಯಾಳಂ ಭಾಷೆಯ ಕಲೆಕ್ಷನ್ ಕೂಡ ಸೇರ್ಪಡೆ ಆಗಲಿದೆ. ಇದರಿಂದ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮತ್ತೆ ಅಬ್ಬರಿಸಲಿದೆ.
ಚಿತ್ರ ನಿರ್ಮಾಣ ಮಾಡಿ, ನಟಿಸಿರುವ ರಾಜ್ ಬಿ ಶೆಟ್ಟಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಚಿತ್ರದ ರಿಪೋರ್ಟ್ ಕಾರ್ಡ್ ಕೊಟ್ಟಿದ್ದಾರೆ. ಸಿನಿಮಾ ಬಿಡುಗಡೆಗೊಂಡ ಮೊದಲ ವಾರದಲ್ಲೇ ಟಿಕೆಟ್ ಮಾರಾಟದಿಂದಲೇ ದೇಶಾದ್ಯಾಂತವಾಗಿ ಚರ್ಚೆಗೆ ಕಾರಣವಾಗಿದೆ.
ಮೊದಲ 7 ದಿನಗಳಲ್ಲಿ ಈ ಚಿತ್ರ 774.88 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ. ಪ್ರತಿಯೊಂದು ದಿನವೂ ಟಿಕೆಟ್ ಬುಕ್ಕಿಂಗ್‌ಗಳಲ್ಲಿ ಟ್ರೆಂಡಿಂಗ್ ಲಿಸ್ಟ್‌ನಲ್ಲಿ ಚಿತ್ರ ಸ್ಥಾನ ಪಡೆದಿದ್ದು ವಿಶೇಷ. ವಿಕೆಂಡ್‌ನಲ್ಲಿ 7ನೇ ದಿನಕ್ಕೆ ಶನಿವಾರ ಅಥವಾ ರವಿವಾರದ ವೀಕ್ಷಣೆ ಮೂಲಕ ಅತ್ಯಧಿಕ ಟಿಕೆಟ್ ಮಾರಾಟವಾಗಿವೆ.
ಇನ್ನು ಈ ಚಿತ್ರವನ್ನು ನೋಡಿದ ಪ್ರೇಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, BookMyShow ವೆಬ್‌ಸೈಟ್‌ನಲ್ಲಿ 9.6 ರೇಟಿಂಗ್ ಪಡೆದಿದೆ. ಇದು ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಕ್ಕೆ ದೊರಕಿದ ಅತ್ಯುತ್ತಮ ರಿವ್ಯೂಗಳಲ್ಲಿ ಒಂದಾಗಿದೆ. ಚಿತ್ರತಂಡ ಈಗ 2ನೇ ವಾರದಲ್ಲೂ ಅದೇ ಯಶಸ್ಸಿನ ನಿರೀಕ್ಷೆಯಲ್ಲಿದೆ.
ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿರುವ ಈ ಸಿನಿಮಾ ಮುಂದೆ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ಸು ಫ್ರಮ್ ಸೋ ಚಿತ್ರವನ್ನು ರಾಜ್ ಬಿ. ಶೆಟ್ಟಿ ಹಾಗೂ ಜೆಪಿ ತುಮಿನಾಡ ಅವರು ನಿರ್ಮಾಣ ಮಾಡಿ ನಟಿಸಿದ್ದಾರೆ. ಸುಮೇಧ್ ಸಂಗೀತ ಕೂಡ ಸಿನಿಮಾದ ಅಂದವನ್ನು ಹೆಚ್ಚಿಸಿದೆ.
ಸಾಮಾಜಿಕ ಜಾಲತಾಣ ಮತ್ತು ಮೌತ್ ಪಬ್ಲಿಸಿಟಿ ಮೂಲಕ ಚಿತ್ರ ಜನರನ್ನು ಸೆಳೆಯುತ್ತಿದೆ. ‘ಸು ಫ್ರಂ ಸೋ’ ಸಿನಿಮಾದ ಈವರೆಗಿನ ಕಲೆಕ್ಷನ್ ಅಂದಾಜು ರೂ.20 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಸಿನಿಮಾ ಮುಂದಿನವಾರ ಬೇರೆ ಭಾಷೆಗಳಲ್ಲಿ, ಬೇರೆ ದೇಶಗಳಲ್ಲಿ ರಿಲೀಸ್ ಆಗಲಿದೆ.