ರಾಯಚೂರು: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯದಿಂದ ನದಿಗೆ 1,00,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಏಕಶಿಲಾ ವೃಂದಾವನ ಜಲಾವೃತಗೊಂಡಿವೆ, ಶ್ರಾವಣ ಮಾಸ ಆರಂಭವಾದಾಗಿನಿಂದ ರಾಯರ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಯರ ಏಕಶಿಲಾ ವೃಂದಾವನ ದರ್ಶನ ಪಡೆಯಲು ಭಕ್ತರು ಪರದಾಡುತ್ತಿದ್ದಾರೆ.
ಜಲಾಶಯದಿಂದ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆ ತುಂಗಭದ್ರಾ ನದಿತೀರದಲ್ಲಿರುವ ರಾಯರ ಪರಮ ಭಕ್ತ ಅಪ್ಪಣ್ಣಾಚಾರ್ ನಿರ್ಮಿಸಿ ಪೂಜಿಸುತ್ತಿದ್ದ ಗುರುರಾಘವೇಂದ್ರ ಸ್ವಾಮಿ ಏಕಶಿಲಾ ವೃಂದಾವನ ಜಲಾವೃತಗೊಂಡಿದೆ. ಬಿಚ್ಚಾಲಮ್ಮ ದೇವಿ ದೇವಾಲಯ ಬಳಿ ನೀರು ಬಂದಿವೆ.
ಗುರು ರಾಘವೇಂದ್ರ ಸ್ವಾಮಿಗಳು ತಪ್ಪಸ್ಸು ಮಾಡಿದ್ದ ಜಪದ ಕಟ್ಟೆಯೂ ಜಲಾವೃತಗೊಂಡಿದ್ದು, ಅರ್ಚಕರು ನೀರಿನಲ್ಲೇ ತೆರಳಿ ಪೂಜೆ, ಅಭಿಷೇಕ ಮಾಡುತ್ತಿದ್ದಾರೆ. ಜೊತೆಗೆ ಇಲ್ಲಿನ ಉಗ್ರನರಸಿಂಹ ದೇವಾಲಯ, ನಾಗದೇವತೆ ಕಟ್ಟೆ, ಶಿವಲಿಂಗ ಸಹ ಜಲಾವೃತಗೊಂಡಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ.
ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಜಲಾನಯನ ಪ್ರದೇಶಗಳಾದ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ತೆಲಂಗಾಣ ರಾಜಧಾನಿ ಹೈದರಾಬಾದ್, ಮಂತ್ರಾಲಯ ಸೇರಿದಂತೆ ಪ್ರಮುಖ ನಗರಗಳಿಗೆ ಸರಿಯಾದ ಸಂಪರ್ಕ ಸಿಗದಂತಾಗಿದೆ, ಹಲವಡೆ ಸೇತುವೆಗಳು ತುಂಬಿ ಸಂಚಾರಕ್ಕೆ ಅಡಚಣೆಯಾಗಿರುವ ಘಟನೆಗಳು ನಡೆದಿವೆ.
ವಿಜಯನಗರ ಜಿಲ್ಲೆಯ ಹಂಪಿ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಚಕ್ರತೀರ್ಥ ನೀರಿನಿಂದ ಆವೃತಗೊಂಡಿವೆ. ಹಂಪಿಯ ರಾಮ ಲಕ್ಷಣ ದೇವಸ್ಥಾನದ ಅಂಗಳಕ್ಕೆ ನೀರು ಹೊಕ್ಕಿದೆ. ಆನೆಗೊಂದಿ ನವವೃಂದಾವನ, ವಿರೂಪಾಪುರಗಡ್ಡೆಯಿಂದ ಹಂಪಿಗೆ ತೆರಳುವ ಮಾರ್ಗ ಸಂಪರ್ಕ ಕಳೆದುಕೊಂಡಿವೆ, ಕೃಷ್ಣದೇವರಾಯ ಸಮಾಧಿ (64 ಸಾಲಿನ ಕಂಬಗಳ ದೇವಸ್ಥಾನ) ಬಹುತೇಕ ನೀರಿನಲ್ಲಿ ಮುಳುಗಿದ್ದು ಸಂಪೂರ್ಣ ಜಲಾವೃತ ಆಗಿವೆ,
ನದಿಗೆ ನೀರು ಬಿಡುಗಡೆ ಮಾಡಿದ ಪರಿಣಾಮ ಹಂಪಿಯ ಅನೇಕ ಸ್ಮಾರಕಗಳು ಮುಳುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಪ್ರಸಿದ್ಧ ಹಂಪಿ ಸ್ಮಾರಕಗಳಾದ ಪುರಂದರದಾಸ ಮಂಟಪ, ಚಕ್ರತೀರ್ಥ ದೇವಸ್ಥಾನ ಮತ್ತು ಇತರ ಕೆಲವು ಸ್ಮಾರಕಗಳ ಪ್ರವೇಶಕ್ಕೆ ವಿಜಯನಗರ ಜಿಲ್ಲಾ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾನಯನ ಪ್ರದೇಶಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.
ರಾಜ್ಯದಲ್ಲಿ ಮುಂದುವರೆದ ಮಳೆ: ಮಂಗಳವಾರ ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ವ್ಯಾಪಕವಾಗಿ ಸಾಧಾರಣ ಮಳೆ ಸಾಧ್ಯತೆಯಿದ್ದು, ಅಲ್ಲಲ್ಲಿ ಭಾರಿ ಮಳೆ, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾದಾರಣ ಮಳೆ, ಇನ್ನುಳಿದ ದಿನಗಳಲ್ಲಿ ಮಳೆ ಚಟುವಟಿಕೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಚದುರಿದಂತೆ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾದಾರಣ ಮಳೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆಯಿದೆ, ಪ್ರವಾಸ ಕೈಗೊಳ್ಳುವ ಮುನ್ನ ಆಯಾ ಜಿಲ್ಲಾಡಳಿತವು ನೀಡುವ ಆದೇಶಗಳನ್ನು ಗಮನಿಸಿ ಪ್ರಯಾಣಿಸುವಂತೆ ಸೂಚಿಸಲಾಗಿದೆ.