ಶಕ್ತಿ ಯೋಜನೆಯಿಂದ ಮಹಿಳೆಯರ ಉದ್ಯೋಗದಲ್ಲಿ ಶೇ. 23ರಷ್ಟು ಹೆಚ್ಚಳ: ವರದಿ

0
74

ಬೆಂಗಳೂರು: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮಹಿಳೆಯರ ಉದ್ಯೋಗದಲ್ಲಿ ಪ್ರತಿಶತ 23ರಷ್ಟು ಏರಿಕೆಯಾಗಿದೆ ಎಂದು ವರದಿಯೊಂದು ಹೇಳಿದೆ.

ನಿಕೋರ್ ಅಸೋಸಿಯೇಟ್ಸ್ ಪ್ರಕಟಿಸಿದ “Beyond Free Rides: A Multi-State Assessment of Women’s Bus Fare Subsidy Schemes in Urban India”, ಎಂಬ ಶೀರ್ಷಿಕೆಯ ವರದಿಯಿಂದ ಈ ಮಾಹಿತಿ ಹೊರಬಿದ್ದಿದೆ. ದೇಶದ 10 ಪ್ರಮುಖ ನಗರಗಳಲ್ಲಿ 2,500 ಕ್ಕೂ ಹೆಚ್ಚು ಸಮೀಕ್ಷೆಗಳು, ಕೇಂದ್ರೀಕೃತ ಗುಂಪು ಚರ್ಚೆಗಳು ಮತ್ತು ಪ್ರಮುಖರ ಸಂದರ್ಶನಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ಕರ್ನಾಟಕ, ದೆಹಲಿ, ಕೇರಳ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳಾದ್ಯಂತ 10 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಅಧ್ಯಯನ ನಡೆಸಿದ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಶುಲ್ಕ ರಹಿತ ಸಾರ್ವಜನಿಕ ಸಾರಿಗೆ ಮತ್ತು ಮಹಿಳೆಯರಿಗೆ ಇದರಿಂದಾದ ಉದ್ಯೋಗ ಲಾಭದ ನಡುವಿನ ಸಂಬಂಧವನ್ನು ವರದಿ ತಿಳಿಸಿದೆ.

ಹುಬ್ಬಳ್ಳಿ-ಧಾರವಾಡದಲ್ಲಿಯೂ ಸಹ ಶೇ. 21 ರಷ್ಟು ಉದ್ಯೋಗಕ್ಕೆ ಸೇರುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಇದು ಕೂಡ ಶಕ್ತಿ ಯೋಜನೆಯ ಸಕಾರಾತ್ಮಕ ಬದಲಾವಣೆಯನ್ನು ಸೂಚಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮಾಡಲಾದ ಸಮೀಕ್ಷೆಯ ಪೈಕಿ ಸುಮಾರು 27 ಪ್ರತಿಶತ ಮಹಿಳೆಯರು ಶಕ್ತಿ ಯೋಜನೆಯಿಂದ ಶುಲ್ಕ ರಹಿತ ಪ್ರಯಾಣದ ಅವಕಾಶ ದೊರೆತಿದ್ದು, ಬಸ್‌ಗಳ ಮೂಲಕವೇ ತಮ್ಮ ಕೆಲಸಕ್ಕೆ ಹೋಗುವುದಾಗಿ ತಿಳಿಸಿದ್ದಾರೆ. ಇನ್ನು ಅನೇಕರು ಶಿಕ್ಷಣ, ದೂರ ಪ್ರಯಾಣ ಮತ್ತು ಅಗತ್ಯ ಕೆಲಸಗಳಿಗಾಗಿ ಬಸ್‌ ಪ್ರಯಾಣ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.

ಇನ್ನು ವರದಿಯಲ್ಲಿ ಕೆಲ ಸಲಹೆಗಳನ್ನು ನೀಡಲಾಗಿದೆ. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ಕೊಡುವುದು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಸಾಕಷ್ಟು ಬೆಳಕಿನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸ್ಥಾಪಿಸುವುದು. ವಿಶೇಷವಾಗಿ ನಗರ ಪ್ರದೇಶಗಳಿಂದ ಹೊರವಲಯದಲ್ಲಿರುವವರಿಗೆ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕಕ್ಕಾಗಿ ಸ್ಥಳೀಯ ಸಾರಿಗೆ ಸಂಪರ್ಕ ಕಲ್ಪಿಸುವುದು. ಬಸ್ ನಿಲ್ದಾಣಗಳನ್ನು ತಲುಪಲು ಆಟೋರಿಕ್ಷಾಗಳು ಅಥವಾ ಸ್ಥಳೀಯ ಸಾರಿಗೆ ವ್ಯವಸ್ಥೆ ಮಾಡುವುದು. ಈ ಸಮಸ್ಯೆಗಳು ಪ್ರಮುಖವಾಗಿ ಕಂಡು ಬಂದಿವೆ ಎಂದು ವರದಿ ತಿಳಿಸಿದೆ.

ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಸಮೀಕ್ಷೆಗೆ ಒಳಗಾದ ಮಹಿಳೆಯ ಪೈಕಿ ಅರ್ಧಕ್ಕಿಂತ ಕಡಿಮೆ ಮಹಿಳೆಯರು ಪ್ರಯಾಣ ಮಾಡುವಾಗ ತಾವು ಸುರಕ್ಷಿತರಾಗಿದ್ದೇವೆ ಎಂದು ಹೇಳಿದ್ದಾರೆ. ಕಿರುಕುಳ, ಕಳಪೆ ಬೆಳಕು, ಕಿಕ್ಕಿರಿದ ಬಸ್‌ಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಸಿಬ್ಬಂದಿ ಕೊರತೆ ಕೂಡ ಇದರಲ್ಲಿ ಸೇರಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇನ್ನು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಶಕ್ತಿ ಯೋಜನೆಯಡಿ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಓಡಾಡಲು ಆರಂಭಿಸಿದ ಬಳಿಕ ಬೆಂಗಳೂರು, ಹುಬ್ಬಳ್ಳಿ – ಧಾರಾವಾಡದಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ ಎಂದು ಸಸ್ಟೈನೇಬಲ್‌ ಮೊಬಿಲಿಟಿ ನೆಟ್‌ವರ್ಕ್‌ ನಡೆಸಿದ ಸಮೀಕ್ಷಾ ವರದಿ ಹೇಳಿದೆ. ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಔದ್ಯೋಗಿಕ ದರವು ಬೆಂಗಳೂರಿನಲ್ಲಿ ಶೇ. 23 ಮತ್ತು ಹುಬ್ಬಳ್ಳಿ – ಧಾರಾವಾಡದಲ್ಲಿ ಶೇ. 21 ರಷ್ಟು ಏರಿಕೆಯಾಗಿರುವುದು ಅಧ್ಯಯನದಿಂದ ಬಹಿರಂಗವಾಗಿದೆ. ಮಹಿಳೆಯರಿಗೆ ಈ ಯೋಜನೆಯಿಂದಾಗಿ ಶೇ. 30 ರಿಂದ ಶೇ. 50ರಷ್ಟು ಖರ್ಚು ಕಡಿಮೆಯಾಗುತ್ತಿರುವುದಾಗಿ ಸ್ವತಃ ಅವರೇ ಸಮೀಕ್ಷೆಯ ವೇಳೆ ಹೇಳಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

“ಮಹಿಳೆಯರಿಗೆ ಆರ್ಥಿಕ ಬಲ ತುಂಬಿ, ಅವರನ್ನು ಸ್ವಾವಲಂಬಿಯಾಗಿಸುವ ಉದ್ದೇಶದ ಈ ಯೋಜನೆಯ ಬಗೆಗೆ ಕೇಳಿಬಂದ ಟೀಕೆಗಳು, ವ್ಯವಸ್ಥಿತ ಅಪಪ್ರಚಾರ ಎಲ್ಲವೂ ಸಾಧನೆಯ ಮುಂದೆ ಮಂಡಿಯೂರಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ವ್ಯಾಪಕ ಪ್ರಶಂಸೆಗೆ ಒಳಗಾಗಿರುವ ನಮ್ಮ ಗ್ಯಾರಂಟಿ ಯೋಜನೆಗಳು ಇಂದು ನಾಡಿನ ಜನರ ತಲಾದಾಯ ಹೆಚ್ಚಿಸಿ, ಅವರ ಬದುಕಿಗೆ ಆರ್ಥಿಕ ಭದ್ರತೆ ಕಲ್ಪಿಸಿದೆ. ನಮ್ಮ ಯೋಜನೆಯೊಂದು ನಿರೀಕ್ಷೆಗೂ ಮೀರಿ ಸಾಧನೆ ಮಾಡಿದರೆ ನನಗೆ ಅದಕ್ಕಿಂತ ಹೆಚ್ಚು ಸಂತಸದ ವಿಷಯ ಬೇರೆ ಇಲ್ಲ.” ಎಂದು ಅವರು ಬರೆದುಕೊಂಡಿದ್ದಾರೆ.

Previous articleಆಭರಣ ಪ್ರಿಯರಿಗೆ ಗುಡ್‌ನ್ಯೂಸ್: ಮತ್ತೇ ಕುಸಿದ ಬಂಗಾರ
Next articleದರ್ಶನ ಅಭಿಮಾನಿಗಳಿಂದ ಹತ್ಯೆಗೆ ಯತ್ನ: ಪ್ರಥಮ್‌ ಗಂಭೀರ ಆರೋಪ

LEAVE A REPLY

Please enter your comment!
Please enter your name here