ಬೆಂಗಳೂರು: ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ವಿಸ್ತರಣಾ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಮತ್ತೊಂದು ಹೊಸ ಮೇಲ್ಸೇತುವೆಯ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ಸದ್ಯ ನಾಗವಾರ ಕಡೆಯಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಈ ರಸ್ತೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಲಿದೆ. ಈಗಾಗಲೇ ಈ ಕಾಮಗಾರಿಗೆ ವಿಸ್ಕೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಪ್ರಾಧಿಕಾರದ ಆಡಳಿತ ಮಂಡಳಿ ಅನುಮೋದನೆ ನೀಡಿದೆ.
2019ರಲ್ಲಿಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೆಬ್ಬಾಳ ಜಂಕ್ಷನ್ ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ವೇತುವೆ ಯೋಜನೆ ರೂಪಿಸಿತ್ತು. 25 ಕೋಟಿ ರೂ.ಗಳ ವೆಚ್ಚದಲ್ಲಿ 11 ಕಂಬಗಳನ್ನು ನಿರ್ಮಿಸಿತ್ತು. ಆದರೆ, ಭವಿಷ್ಯದ ಮೆಟ್ರೊ ಮಾರ್ಗಗಳಿಗೆ ಅದು ಅಡ್ಡಿಯಾಗುತ್ತದೆ ಎಂಬ ಕಾರಣದಿಂದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದಾಗಿ ಯೋಜನೆಯನ್ನು ಕೈಬಿಡಲಾಯಿತು.
ಯೋಜನೆ ಕೈ ಬಿಟ್ಟಿದ್ದರಿಂದಾಗಿ ಅಂದು ನಿರ್ಮಿಸಿಲಾಗಿದ್ದ ಸಿಮೆಂಟ್ ಕಂಬಗಳು ಕೂಡ ಹಾಗೆ ಉಳಿದುಕೊಂಡಿದ್ದವು. ಸದ್ಯ ಬಿಎಂಆರ್‌ಸಿಎಲ್ ಆಕ್ಷೇಪಣೆ ಇಲ್ಲದ್ದರಿಂದ ಹೊಸ ಮೇಲ್ವೇತುವೆ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದ್ದು, ಕಂಬಗಳನ್ನು ಮರುಬಳಕೆ ಮಾಡುವ ಕುರಿತು ಪ್ರಾಧಿಕಾರ ಚಿಂತನೆ ನಡೆಸಿದೆ.
ನಾಗವಾರದಿಂದ ತುಮಕೂರು ರಸ್ತೆ, ಮೇನ್ರಿ ವೃತ್ತ, ಬಿಇಎಲ್ ವೃತ್ತ ಮತ್ತು ಕೆಐಎ ಕಡೆಗೆ ಸಂಚರಿಸುವ ವಾಹನಗಳಿಗೆ ಈ ರಸ್ತೆ ಸಂಚಾರ ದಟ್ಟಣೆ ತಪ್ಪಿಸಲಿದೆ. ಅಲ್ಲದೇ ಯೋಜನೆಯ ವೆಚ್ಚವನ್ನು ತಪ್ಪಿಸಲು ಜಂಕ್ಷನ್ ಬಳಿಯ ಟೀ ಪಾರ್ಕ್‌ನಲ್ಲಿ ನಿರ್ಮಿಸಿದ್ದ ಸಿಮೆಂಟ್ ಕಂಬಗಳನ್ನು ಮರುಬಳಕೆ ಮಾಡಲು ಯೋಜಿಸಲಾಗಿದೆ.
ಒಂದು ಕಿಲೋ ಮೀಟರ್‌ಗಿಂತಲೂ ಕಡಿಮೆ ಉದ್ದದ ಮೇಲ್ಸೇತುವೆ ಇದಾಗಿದ್ದು, ಯೋಜನೆಯ ವೆಚ್ಚ ಕಡಿಮೆಯಾಗಲಿದೆ. ಜತೆಗೆ ಕಂಬಗಳ ಮರುಬಳಕೆಯಿಂದ ನಿರ್ಮಾಣದ ವೆಚ್ಚ ಕಡಿತಗೊಳಿಸಬಹುದಾಗಿದೆ ಎಂದು ಚಿಂತನೆ ನಡೆದಿದೆ. ಇದಕ್ಕೆ ಸರಿಯಾದ ರೀತಿಯಲ್ಲಿ ಹೊಸ ಮೇಲ್ಸೇತುವೆ ವಿನ್ಯಾಸವನ್ನು ಸಂಯೋಜಿಸಲು ಸಾಧ್ಯವಾದರೆ ಕಾಮಗಾರಿ ಆರಂಭಕ್ಕೆ ಸುಲಭವಾದಂತಾಗುತ್ತದೆ ಎಂದು ಹೇಳಲಾಗಿದೆ.
ನಾಗವಾರ ಕಡೆಯಿಂದ ಬರುವ ವಾಹನಗಳ ಪ್ರತ್ಯೇಕ ರಾಂಪ್ ಇಲ್ಲದಿರುವುದರಿಂದ ಸಂಚಾರ ದಟ್ಟಣೆಯಾಗುತ್ತದೆ. ಈ ಮಾರ್ಗದಿಂದ ಬರುವ ವಾಹನಗಳಿಗೆ ಹೆಬ್ಬಾಳ ಮೇಲ್ಸೇತುವೆ ಪ್ರವೇಶಿಸಲು ಕೆಂಪಾಪುರ ವೃತ್ತದ ಮೂಲಕ ಎಸ್ಟೀಮ್ ಮಾಲ್ ಬಳಿಯ ಸರ್ವಿಸ್ ರಸ್ತೆ ಮೂಲಕವೇ ಹೋಗಬೇಕಾಗುತ್ತದೆ. ಹೀಗಾಗಿ ಸಂಚಾರ ದಟ್ಟಣೆಯಾಗುತ್ತಿದೆ. ಹೀಗಾಗಿ ಈ ಮೇಲ್ಸೇತುವೆ ನಿರ್ಮಾಣದಿಂದ ಸಂಚಾರ ಸುಲಭವಾಗಲಿದೆ ಎಂದು ಹೇಳಲಾಗಿದೆ.
ಒಟ್ಟಾರೆ ಯೋಜನೆ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತಜ್ಞರ ಸಲಹೆ ಸೂಚನೆ ಪಡೆಯುತ್ತಿದ್ದು, ಹೊಸ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಸಾಧಕ-ಬಾಧಕಗಳನ್ನು ಚರ್ಚಿಸಿ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಿದೆ. ಇದು ಯೋಜನೆಯ ಮೊದಲ ಹೆಜ್ಜೆಯಾಗಿದೆ ಎಂದು ಮೂಲಗಳು ತಿಳಿಸಿವೆ.