ಬೆಂಗಳೂರು: ಬೆಂಗಳೂರು ಸ್ಕೈ ಡೆಕ್….ಇದು ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ. ಕೆ. ಶಿವಕುಮಾರ್ ಕನಸಿನ ಯೋಜನೆ. ಬ್ರಾಂಡ್ ಬೆಂಗಳೂರು ಯೋಜನೆಯಡಿ ಇದನ್ನು ಜಾರಿಗೊಳಿಸುವುದಾಗಿ ಡಿಸಿಎಂ ಹೇಳಿದ್ದರು.
ಬೆಂಗಳೂರು ನಗರದ ಮಹತ್ವಾಕಾಂಕ್ಷೆಯ ಯೋಜನೆ ಇದು. 250 ಮೀಟರ್ ಎತ್ತರದ ಸ್ಕೈ ಡೆಕ್ ಯೋಜನೆ ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಕೆಲವು ಕಾರಣ ನೀಡಿ ಯೋಜನೆಯನ್ನು ಬಿಡಿಎಗೆ ನೀಡಿದೆ.
ಡಿಕೆ ಶಿವಕುಮಾರ್‌ಗೆ ವರದಿ: ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ವರದಿ ಸಲ್ಲಿಸಿರುವ ನಗರಾಭಿವೃದ್ಧಿ ಇಲಾಖೆ ಯೋಜನೆಯನ್ನು ಬಿಡಿಎಗೆ ವರ್ಗಾಯಿಸಿದೆ. ಜುಲೈ 23ರಂದು ಈ ಕುರಿತು ಆದೇಶವನ್ನು ಹೊರಡಿಸಲಾಗಿದೆ.
ಪ್ರವಾಸೋದ್ಯಮ ಉತ್ತೇಜನ, ಪ್ರವಾಸಿಗರ ಆಕರ್ಷಣೆಗೆ ಕೇಂದ್ರವಾಗಿ ಮಾಡುವುದು ಯೋಜನೆ ಉದ್ದೇಶ. ಈ ಯೋಜನೆಯಿಂದ ದೇಶದ ಉದ್ಯಾನ ನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು 360 ಡಿಗ್ರಿ ವ್ಯಾಪ್ತಿಯಲ್ಲಿ ಬೆಂಗಳೂರು ಸೌಂದರ್ಯ ಕಣ್ತುಂಬಿಕೊಳ್ಳಲು 250 ಮೀಟರ್ ಎತ್ತರದ ಸ್ಕೈ-ಟವರ್ ನಿರ್ಮಾಣ ಮಾಡಲಾಗುತ್ತದೆ.
ಈ ಯೋಜನೆಯನ್ನು ಮೊದಲು ಬೆಂಗಳೂರಿನ ಹೆಮ್ಮಿಗೆಪುರದಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರ ಇರಬೇಕು ಎಂಬ ಕಾರಣದ ಹಿನ್ನೆಲೆಯಲ್ಲಿ ಕೆಂಪೇಗೌಡ ಬಡಾವಣೆಯ ಬಿಡಿಎ ಜಾಗದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡಲು ಚಿಂತನೆ ನಡೆದಿದೆ.
ಯೋಜನೆ ಕುರಿತು ಹಲವು ಟೀಕೆಗಳಿವೆ. ಆದರೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಬಯಸಿದೆ. ಈಗ ಗುರುತಿಸಿರುವ ಸ್ಥಳ ಬಿಡಿಎ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿ ಯೋಜನೆಗೆ ಸುಮಾರು 41 ಎಕರೆ ಭೂಮಿ ಬಳಕೆ ಮಾಡಿಕೊಳ್ಳಲಾಗುತ್ತದೆ.
ಯೋಜನೆಗೆ ಗುರುತಿಸಲಾದ ಭೂಮಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ), ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ನಂದಿ ಮೂಲಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ವಶದಲ್ಲಿವೆ. ಆದ್ದರಿಂದ ಭೂಸ್ವಾಧೀನವು ಸವಾಲು ಎಂದು ಅಂದಾಜಿಸಲಾಗಿದೆ.
ಈ ಸ್ಥಳಕ್ಕೆ ಪ್ರಸ್ತುತ ನೇರ ಪ್ರವೇಶವಿಲ್ಲ, ವಿಶೇಷವಾಗಿ ನೈಸ್ ರಿಂಗ್ ರಸ್ತೆಯಿಂದ ಖಾಸಗಿ ವಾಹನ ಪ್ರವೇಶವನ್ನು ಸಕ್ರಿಯಗೊಳಿಸಲು ಬಿಡಿಎ ಹೊಸ ರಸ್ತೆಯನ್ನು ನಿರ್ಮಿಸಬೇಕಾಗುತ್ತದೆ. ಕಾಮಗಾರಿಯ ಯೋಜನೆ ಡಿಪಿಆರ್ ಸೇರಿದಂತೆ ಎಲ್ಲಾ ತಾಂತ್ರಿಕ ವರದಿಗಳನ್ನು ಬಿಡಿಎಗೆ ಹಸ್ತಾಂತರಿಸುವಂತೆ ಸರ್ಕಾರ ಬಿಬಿಎಂಪಿ ಮತ್ತು ಬಿ-ಸ್ಮೈಲ್‌ಗೆ ನಿರ್ದೇಶನ ನೀಡಿದೆ. ಇದು ದಕ್ಷಿಣ ಏಷ್ಯಾದ ಅತಿ ಎತ್ತರದ ಸ್ಕೈಡೆಕ್ ಎಂದು ಪರಿಗಣಿಸಲಾಗಿರುವ ಯೋಜನೆಗೆ. ಅಂದಾಜು 500 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.