ಪಂಚಾಚಾರ್ಯರ ಕಡೆಗೆ ಪಂಚಮಸಾಲಿ ಪೀಠ?

1
212

ಮಲ್ಲಿಕಾರ್ಜುನ ದರಗಾದ
ಬಾಗಲಕೋಟೆ(ಹುನಗುಂದ): ಬಸವ ತತ್ವದ ಪರ ನಿಷ್ಠೆ ಹೊಂದಿದ್ದ ಕೂಡಲಸಂಗಮ ಪಂಚಮಸಾಲಿ ಪೀಠ ಇನ್ಮುಂದೆ ಪಂಚ ಪೀಠಾಧೀಶ್ವರರ ಪರ ವಾಲಲಿದೆಯೇ? ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ಟಸ್ಟಿನ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ ಇದಕ್ಕೆ ಪುಷ್ಟಿ ನೀಡುವಂತಿದೆ.

2008ರಲ್ಲಿ ಕೂಡಲಸಂಗಮದಲ್ಲಿ ಪೀಠ ಸ್ಥಾಪನೆಯಾದ ನಂತರ ಅದರ ಪೀಠಾಧಿಪತಿ ಬಸವಜಯಮೃತ್ಯುಂಜಯ ಸ್ವಾಮಿಗಳು ಸಂಪೂರ್ಣ ಬಸವತತ್ವ ಅಳವಡಿಸಿಕೊಳ್ಳುವುದರ ಜೊತೆಗೆ ಲಿಂಗಾಯತ ಮಹಾಸಭಾ ಕೈಗೊಂಡ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಪ್ರಮುಖ ಮಠಾಧೀಶರ ಸಾಲಿನಲ್ಲಿ ಒಬ್ಬರಾಗಿದ್ದರು. ಆದರೆ, ದಾವಣಗೆರೆಯಲ್ಲಿ ನಡೆದ ವೀರಶೈವ ಪೀಠಾಚಾರ್ಯರ-ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿಜಯಾನಂದ ಕಾಶಪ್ಪನವರ ಪಂಚ ಪೀಠಗಳ ಐದು ಸ್ವಾಮೀಜಿಗಳನ್ನು ಕೂಡಲಸಂಗಮದ ಪೀಠಕ್ಕೆ ಕರೆಯಿಸಿ ಮಠ ಶುದ್ಧೀಕರಣ ಮಾಡುವ ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸ ಒದಗಿಸಿದೆ.

2008ರಲ್ಲಿ ಸ್ಥಾಪಿಸಿದ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಕ್ಕೆ ಪಂಚಪೀಠದ ಪರ ಇರುವ ಮನಗೂಳಿಯ ಲಿಂ. ಮಹಾಂತ ಸ್ವಾಮಿಗಳನ್ನು ಚರಧೀಶರನ್ನಾಗಿ ಹಾಗೂ ನೆಲೋಗಿಯ ಸಿದ್ಧಲಿಂಗ ಸ್ವಾಮಿಗಳನ್ನು ಹರಧೀಶರನ್ನಾಗಿ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಘೋಷಿಸಿ, ಅವರ ಪಟ್ಟಾಧಿಕಾರಕ್ಕೆ ದಿನಾಂಕ ನಿಗದಿ ಪಡಿಸಿದ ನಂತರ ಜನ್ಮ ತಾಳಿದ್ದೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠ. ಇದು ಹರಿಹರ ಪೀಠಕ್ಕಿಂತಲೂ ಮೊದಲು ಸ್ಥಾಪನೆಯಾಗಿ ಪ್ರಥಮ ಪೀಠ ಎನಿಸಿಕೊಂಡಿದ್ದರೂ, ಟ್ರಸ್ಟಿಗಳನ್ನು ಹೊರತುಪಡಿಸಿ ಸಮಾಜದ ಸಮಗ್ರ ಜನರ ಭಾಗಿತ್ವಕ್ಕೆ ಇಲ್ಲಿ ಅವಕಾಶ ಇಲ್ಲದಿರುವುದು ಎಲ್ಲರೂ ಒಪ್ಪುವ ಮಾತು.

ಮುರುಘಾ ಶರಣರ ಆಸಕ್ತಿ: ಚಿತ್ರದುರ್ಗದ ಮುರಘಾ ಶರಣರ ಆಸಕ್ತಿಯೂ ಕೂಡಲಸಂಗಮ ಪೀಠ ಸ್ಥಾಪನೆಗೆ ಕಾರಣ. ಹರಿಹರ ಪೀಠಕ್ಕೆ ನೇಮಕಗೊಂಡ ಇಬ್ಬರೂ ಸ್ವಾಮಿಗಳು ಪಂಚಪೀಠದ ಪರ ಇರುವುದರಿಂದ ಲಿಂಗಾಯತ ಒಳ ಪಂಗಡಗಳಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮಾಜ ಬಸವ ತತ್ವದಿಂದ ದೂರವಾಗಬಾರದು ಎಂಬ ಉದ್ದೇಶದಿಂದ ಮುರುಘಾ ಶರಣರು ಪಂಚಮಸಾಲಿ ಸಂಘದಿಂದ ಮುನಿಸಿಕೊಂಡಿದ್ದ ಶ್ರೀಶೈಲಪ್ಪ ಬಿದರೂರ, ಸಿದ್ನಾಳ, ಕಾಶಪ್ಪನವರ ಸೇರಿ ಹಲವು ಮುಖಂಡರೊಂದಿಗೆ ಚರ್ಚಿಸಿ, ಕೂಡಲಸಂಗಮ ಪೀಠ ಸ್ಥಾಪಿಸಿದರು. ಇದಕ್ಕೆ ಮುರಘಾಮಠದ ದಾವಣಗೆರೆ ಶಾಖಾ ಮಠಕ್ಕೆ ನೇಮಕಗೊಂಡಿದ್ದ ಬಸವಜಯ ಮೃತ್ಯುಂಜಯ ಸ್ವಾಮಿಗಳನ್ನು ನೇಮಿಸಿ ಹರಿಹರ ಪೀಠಕ್ಕೂ ಮೊದಲು ಪಟ್ಟಾಧಿಕಾರ ಮಹೋತ್ಸವ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು.

6 ಎಕರೆ ಜಮೀನು ಖರೀದಿ: ಸಮಾಜದ ಮುಖಂಡರ ನೆರವಿನಿಂದ ಕೂಡಲಸಂಗಮದಲ್ಲಿ 6 ಎಕರೆ ಜಮೀನು ಖರೀದಿಸಿ ಸರ್ಕಾರದ ಅನುದಾನದಲ್ಲಿ ಕಟ್ಟಡವನ್ನು ಕಟ್ಟಲಾಗಿದೆ. ಪೀಠ ಸ್ಥಾಪನೆಯಿಂದ ಇಲ್ಲಿಯವರೆಗೂ ಕಾಶಪ್ಪನವರ ಮತ್ತು ಬಸವಜಯಮೃತ್ಯುಂಜಯ ಸ್ವಾಮಿಗಳ ಸಂಬಂಧ ಅನ್ಯೋನ್ಯವಾಗಿತ್ತು. 2ಎ ಮೀಸಲಾತಿ ಹೋರಾಟ ಇಬ್ಬರ ಮುಂದಾಳತ್ವದಲ್ಲಿಯೇ ನಡೆಯಿತು. ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೋರಾಟದ ವಿಷಯದಲ್ಲಿ ಇಬ್ಬರ ಮಧ್ಯೆ ವೈಮನಸ್ಸು ಮೂಡಿ ಮಠಕ್ಕೆ ಬೀಗ ಹಾಕುವುದರ ಜೊತೆಗೆ ಶ್ರೀಗಳನ್ನು ಬದಲಾಯಿಸುವ ಮಟ್ಟಕ್ಕೆ ತಲುಪಿದೆ.

Previous articleಭಾರತದ ಕಾಲೇಜು ವಿದ್ಯಾರ್ಥಿಗಳಿಗೆ ಗೂಗಲ್ ಬಂಪರ್ ಆಫರ್!
Next articleಉಪರಾಷ್ಟ್ರಪತಿ ಆಯ್ಕೆ ಹೇಗೆ?: ಎಷ್ಟು ಮತ ಬೇಕು, ಠೇವಣಿ ಎಷ್ಟು?

1 COMMENT

  1. Harihara peetha panchapeetada paravagittu annodu sullu. Aa thara iddidre sirigere sreegalu udgaatana samarambana attend maadtiralilla and pancha peetadavru yaake attend maadlilla. Samajada daari tappiso article idu

LEAVE A REPLY

Please enter your comment!
Please enter your name here