ಅಂಕಣ ಬರಹ: ಸಮಷ್ಟಿ ಸಮಾಜಕ್ಕೆ ಪಂಚಾಚಾರ್ಯರ ಶೃಂಗ ನಾಂದಿ

0
98

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ನೂರಾರು ಜಾತಿ… ಹತ್ತಾರು ಧರ್ಮಗಳು… ಅವುಗಳಲ್ಲಿ ಒಳಪಂಗಡಗಳು, ಒಳಜಾತಿ… ವಿಭಿನ್ನ ಪರಂಪರೆ ಸಂಪ್ರದಾಯ ಹೊಂದಿರುವ ಈ ನಾಡು ನೈಜ ಅರ್ಥದಲ್ಲಿ ಚೆಲುವ ಕನ್ನಡ ನಾಡು. ಸರ್ವ ಜನಾಂಗದ ಶಾಂತಿಯ ತೋಟ. ಈ ನೆಲದ ಒಂದೆರಡು ಕಡೆ ಪ್ರತಿನಿತ್ಯವೂ ಆಯಾ ಸಮುದಾಯ, ಜಾತಿ, ಮತಬಾಂಧವರ ಸಮಾವೇಶಗಳು ಜರುಗುತ್ತಲೇ ಇರುತ್ತವೆ. ಕರುನಾಡಿನ ಸಮಷ್ಟಿ ಪ್ರಜ್ಞೆಗೆ ಪೂರಕವಾಗಿಯೇ ಇವೆಲ್ಲ ಸಂಘಟಿತವಾಗುವುದು ರಾಷ್ಟ್ರೀಯ ಧಾರೆಗೆ ಪೂರಕವಾದ ಅಂಶ.

ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ಜರುಗಿದ ಪಂಚಾಚಾರ್ಯರ ಶೃಂಗ ಸಮಾವೇಶ ಪ್ರಸ್ತುತ ಸಂದರ್ಭದಲ್ಲಿ ಹೊಸ ಸಂದೇಶವನ್ನು ಸಮುದಾಯದ ಜನರಿಗೆ ಬಿತ್ತರಿಸಿದೆ. ಜೊತೆಗೆ ತಮ್ಮ ಸಂಘಟನೆಯ ಅಗತ್ಯತೆಯನ್ನು ಪ್ರತಿಪಾದಿಸಿದೆ. ವೀರಶೈವ ಲಿಂಗಾಯತರ ಈ ಸಮಾವೇಶ ಪಂಚಪೀಠಾಧೀಶರನ್ನು ಹದಿನಾರು ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಸೇರಿಸಿದ್ದರ ಜೊತೆಗೆ, ಶರಣ ಶಿವಾಚಾರ್ಯರನ್ನೂ ಆಹ್ವಾನಿಸಿ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಇಚ್ಛೆಯನ್ನು ಪ್ರದರ್ಶಿಸಿತು.

ಪಂಚಾಚಾರ್ಯ, ಶಿವಾಚಾರ್ಯ ವೇದಿಕೆ ಸಿದ್ಧಪಡಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ತೊಂಬತ್ತೈದರ ಹರೆಯದ ಶಾಮನೂರು ಶಿವಶಂಕರಪ್ಪ ಅವರ ಕರ್ಣಧಾರತ್ವದಿಂದ ಇದು ಸಾಧ್ಯ ಎನಿಸಿತು; ವೀರಶೈವ ಲಿಂಗಾಯತರಿಗೆ, ವಿಶೇಷವಾಗಿ ಪಂಚಪೀಠಗಳ ಶಿಷ್ಯರಿಗೆಲ್ಲ ಅಂತೂ ಪಂಚಾಚಾರ್ಯರೆಲ್ಲ ಒಂದಾದರಲ್ಲ ಎನ್ನುವ ಸಮಾಧಾನ ಮತ್ತು ಹೆಮ್ಮೆ ಈ ಸಮಾವೇಶದ ಸಂದೇಶವಾಗಿ ಉಳಿಯಿತು.

ಸಮಾವೇಶ ಸಂಘಟನೆಗೆ ಈಗ ಕಳೆದೆರಡು ವರ್ಷಗಳಿಂದ ಎದ್ದಿರುವ ಜಾತಿಜನಗಣತಿ ಲೆಕ್ಕಾಚಾರ ಹಾಗೂ ಈಗ ರಾಷ್ಟ್ರಾದ್ಯಂತ ನಡೆಸಲು ಉದ್ದೇಶಿಸಿರುವ ಜಾತಿಜನಗಣತಿಯೇ ಹಿನ್ನೆಲೆ. ಸಿದ್ದರಾಮಯ್ಯ ಸರ್ಕಾರದ ನೇತೃತ್ವದಲ್ಲಿ ನಡೆದ ಜಾತಿಗಣತಿ ಸಾಕಷ್ಟು ಸದ್ದು ಮಾಡಿ ವಿವಾದ, ಸಂಘರ್ಷಗಳಿಗೆ ಕಾರಣವಾಗಿ ಸಂಪುಟದ ಮತ್ತು ಸರ್ಕಾರದ ಬುಡಕ್ಕೆ ಕೊಳ್ಳಿ ಇಟ್ಟಂತಾದ ನಂತರ ಅದನ್ನು ಸದ್ಯದ ಮಟ್ಟಿಗೆ ಪಿಂಡೋರಾ ಬಾಕ್ಸ್'ನಲ್ಲಿ ಇಡಲಾಗಿದೆ. ಅಂದು ಜಾತಿಗಣತಿ ನಡೆಸುವ ನಿರ್ಧಾರದ ಹಿಂದೆ ಹತ್ತಾರು ರಾಜಕೀಯ ಲೆಕ್ಕಾಚಾರ... ಹಿಂದೆ ಮುಂದೆಅಹಿಂದ’ ಪ್ರಾಬಲ್ಯ ಮೆರೆಯುವ ವ್ಯವಸ್ಥಿತ ತಂತ್ರಗಾರಿಕೆ ಇತ್ತು.

ಈ ಮಧ್ಯೆ ಲಿಂಗಾಯತ ಧರ್ಮ ಪ್ರತ್ಯೇಕವಾಗಿಸುವ ಒಡಕು ಸೃಷ್ಟಿಯಾಯಿತು. ಇದಕ್ಕೆ ಪರೋಕ್ಷವಾಗಿ ಅಂದಿನ ಸರ್ಕಾರದ ಪ್ರಮುಖರೇ `ಸಿದ್ಧ’ ಮುಷ್ಠಿಯ ಬಲವೊಡ್ಡಿದ್ದರು. ಎಷ್ಟು ಪ್ರಬಲವಾಗಿತ್ತೆಂದರೆ ವೀರಶೈವರು, ಲಿಂಗಾಯತರು, ಶರಣರು ಒಳಪಂಗಡಗಳ ಆದಿಯಾಗಿ ಪ್ರತ್ಯೇಕವಾದೀತೇನೋ ಎನ್ನುವ ಮಟ್ಟಕ್ಕೆ ಈ ಹೋರಾಟ ಹಬ್ಬಿತ್ತು. ವಾಸ್ತವವಾಗಿ ಪ್ರತ್ಯೇಕ ಧರ್ಮವಾಗಿ ಪರಿಗಣಿಸುವ ಅಧಿಕಾರ ಯಾರಿಗಿದೆ ಎನ್ನುವುದು ಜಿಜ್ಞಾಸೆಯವರೆಗೂ ಹೋಗಿತ್ತು.

ಇದರ ಪರಾಕಾಷ್ಠೆಯೇ ಸರ್ಕಾರದ, ವಿಶೇಷವಾಗಿ ಪ್ರತ್ಯೇಕ ಧರ್ಮಕ್ಕೆ ಕೂಗೆತ್ತಿದ್ದವರನ್ನೇ ಸಮಾಜದ ಮತಪ್ರಭುಗಳು ಮನೆಗಟ್ಟಿದರು. ಅಥವಾ ಬಲಕುಗ್ಗಿಸಿದರು. ಆಗ ಬಹಿರಂಗವಾಗಿಯೇ `ತಪ್ಪಾಯಿತು ಸ್ವಾಮಿ, ನಮ್ಮನ್ನು ಕ್ಷಮಿಸಿಬಿಡಿ’ ಎನ್ನುವ ದಯನೀಯ ಮನವಿಯನ್ನು ಮಾಡಿಕೊಂಡರು. ಪ್ರಾಯಶ್ಚಿತ್ತಕ್ಕೂ ಇಳಿದರು! ಈಗಲೂ ಪ್ರತ್ಯೇಕ ಧರ್ಮ ಹೋರಾಟದ ಒಂದು ವೇದಿಕೆ ಇದ್ದೇ ಇದೆ. ಆದರೆ ವೀರಶೈವರು, ಲಿಂಗಾಯತರು ಎರಡೂ ಒಂದೇ ಎಂಬ ಕೂಗಿನಡಿ ಅದು ಕ್ಷೀಣಿಸಿದೆ ಅಷ್ಟೇ.

ಅಂದಿನ ಜಗದ್ಗುರು ಸಿದ್ಧಗಂಗಾ ಮಠದ ಹಿರಿಯ ಶ್ರೀಗಳೇ ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ, ಇದರಲ್ಲಿ ಭಿನ್ನಮತ ಕಾಣಬೇಡಿ ಎಂದು ಅಣತಿ ನೀಡಿದಾಗಲೇ ಈ ಪ್ರತ್ಯೇಕತೆಯ ಮುಂಚೂಣಿಯಲ್ಲಿದ್ದವರಿಗೆ ಹಿನ್ನಡೆಯಾಯಿತು. ಆ ನಂತರ ಮೀಸಲಾತಿ ಹಾಗೂ ಜಾತಿ ಸಮೀಕ್ಷೆ. ವೀರಶೈವ ಲಿಂಗಾಯತರ ಪ್ರಬಲ ಗುಂಪು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಬೇಕು ಎನ್ನುವ ಹೋರಾಟ ಎದ್ದು ನಿಂತಿತು.

ಅದು ಒಂದರ್ಥದಲ್ಲಿ ತಾರ್ಕಿಕ ಅಂತ್ಯ ಕಾಣುತ್ತದೆ ಎನ್ನುವಾಗ ನ್ಯಾಯಾಲಯದ ಮತ್ತು ಸಂವಿಧಾನ ತಜ್ಞರ ಎಚ್ಚರಿಕೆಯಿಂದ ಹಾಗೇ ಉಳಿಯಿತು. ಮೀಸಲಾತಿ ಘೋಷಿಸಿದವರು ತಮ್ಮ ಲಾಭದತ್ತ ನೋಡುತ್ತಿದ್ದರೆ ಅನ್ಯರು ನಷ್ಟದ ಮುನ್ಸೂಚನೆ ನೀಡಿದ್ದರು. ಒಂಭತ್ತು ವರ್ಷಗಳ ಹಿಂದೆ ನಡೆದ ಜಾತಿಗಣತಿ ಬಹಿರಂಗವಾಗದಿದ್ದರೂ ವೀರಶೈವ ಲಿಂಗಾಯತ ಸಮುದಾಯ ಕೇವಲ 70 ಲಕ್ಷ ಮಂದಿಯಷ್ಟೇ ಇದ್ದಾರೆ ಎನ್ನುವ ಸಮೀಕ್ಷೆಯ ವರದಿ ಗೌಪ್ಯ ಸಂಚಾರವಾಗಿದ್ದು, ಮತ್ತೆ ರಾಜ್ಯದ ಪ್ರಬಲ ಜಾತಿಗಳು, ಸಮುದಾಯಗಳು ವಿರೋಧಿಸಲು ಮುಗಿಬೀಳುವಂತಾಯಿತು.

ಸಮೀಕ್ಷೆಯ ಸತ್ಯಾಸತ್ಯತೆ, ಕ್ರಮ, ಹಿನ್ನೆಲೆ ಎಲ್ಲವೂ ಒಂದೊಂದಾಗಿ ಬಹಿರಂಗಗೊಂಡವು. ಅದು ಆರ್ಥಿಕ- ಸಾಮಾಜಿಕ ಸಮೀಕ್ಷೆ ಎಂದರೂ ಜಾತಿ ಜನಗಣತಿಯೇ ಆಗಿತ್ತು. ಅದರ ಪರಿಣಾಮವೇ ಈಗ ಪಂಚಾಚಾರ್ಯರ ಶೃಂಗ ಸಮ್ಮೇಳನ!! ವೀರಶೈವ ಲಿಂಗಾಯತರಷ್ಟೇ ಅಲ್ಲ, ಈಗಾಗಲೇ, ಬಲಾಢ್ಯ ಸಮಾಜವಾದ ಒಕ್ಕಲಿಗರೂ ಕೂಡ ಜಾತಿಗಣತಿ ವಿರೋಧಿಸಿ ಹೋರಾಟ ಹಾಗೂ ಸಮಾವೇಶಗಳನ್ನು ನಡೆಸಿದ್ದಾರೆ.

ವೀರಶೈವ ಲಿಂಗಾಯತರ ಈ ಶೃಂಗಸಭೆಗೆ ಇನ್ನಷ್ಟು ಮಹತ್ವ ಏಕೆಂದರೆ ಈ ಸಾರೆ ಇದು ರಾಜಕೀಯೇತರವಾಗಿ ಸಂಯೋಜನೆಯಾಗಿದ್ದು. ಪಂಚಾಚಾರ್ಯರಲ್ಲದೇ, ಶಿವಾಚಾರ್ಯರೂ, ಒಳಪಂಗಡಗಳ ಮುಖಂಡರೂ ಪಾಲ್ಗೊಂಡಿದ್ದು. ಹಾಗೆಯೇ ರಾಜಕೀಯ ಮುಖಂಡರು ಪಾಲ್ಗೊಂಡರೂ ಅಲ್ಲಿ ರಾಜಕಾರಣ ಬಿತ್ತದೇ ಗುರುಶರಣರಲ್ಲಿ ಏಕೋಭಾವನೆಯಿಂದ ಬೆಂಬಲ ವ್ಯಕ್ತಪಡಿಸಿದ್ದು!!

ಪಂಚಾಚಾರ್ಯರಲ್ಲೂ ಸಹ ಕೆಲ ಭಿನ್ನಮತ ಹಲವು ಸಾರೆ ಬಹಿರಂಗಗೊಂಡಿತ್ತು. ಶಾಖಾ ಮಠ, ಶಿಷ್ಯರ ನೇಮಕ, ಅಂತಸ್ತು ಶ್ರೇಷ್ಠತೆ ಎಲ್ಲ ವಿವಾದಗಳು-ಆಂತರಿಕ ಸಂಘರ್ಷ ಎಲ್ಲವೂ ಇವೆ. ಆದರೆ ಒಟ್ಟಾರೆ ಅಸ್ತಿತ್ವದ ಪ್ರಶ್ನೆ ಬಂದಾಗ ಒಂದಾಗಲೇಬೇಕು; ಒಕ್ಕಟ್ಟು ಪ್ರದರ್ಶಿಸಬೇಕು ಎನ್ನುವ ಉದ್ದೇಶ ಸಮಾವೇಶದಲ್ಲಿ ಇರೋದು ಸ್ಪಷ್ಟ.

ಹಾಗಾಗಿಯೇ ಪಂಚಾಚಾರ್ಯರ ಹನ್ನೆರಡು ನಿರ್ಣಯಗಳೇ ಸಮಾಜದ ಮುಂದಿನ ನಡೆಯ ಘೋಷಣೆಯಂತಿವೆ. ಜಾತಿಗಣತಿ ವೇಳೆ ಎಲ್ಲ ಒಳಪಂಗಡಗಳೂ ವೀರಶೈವ ಲಿಂಗಾಯತ ಎಂದೇ ಬರೆಸಬೇಕು; ಒಕ್ಕಟ್ಟು ಕಾಪಾಡಿಕೊಂಡು ಹೋಗಬೇಕು; ಒಳಪಂಗಡಗಳಿಗೆ ಒಬಿಸಿ ಮೀಸಲಾತಿ ದೊರಕಿಸಿಕೊಡಲು ರಚನಾತ್ಮಕ ಕಾರ್ಯಕ್ರಮ ಹಾಕಿಕೊಳ್ಳಬೇಕು; ಪ್ರಮುಖವಾಗಿ ಯುವ ಜನರಲ್ಲಿ ನಶಿಸುತ್ತಿರುವ ವೀರಶೈವ ಲಿಂಗಾಯತ ಶರಣ ಮೂಲ ತತ್ವ ಸಿದ್ಧಾಂತ- ವಿಚಾರಧಾರೆಗಳನ್ನು ಪುನರುಜ್ಜೀವನಗೊಳಿಸಬೇಕು; ಸಂಸ್ಕಾರ ಪರಂಪರೆಗಳ ಬೀಜ ಇನ್ನಷ್ಟು ದಷ್ಟಪುಟ್ಟವಾಗಿ ಬೆಳೆದು ನಿಲ್ಲುವಂತೆ ಪೋಷಿಸಬೇಕು ಎನ್ನುವ ಈ ನಿರ್ಣಯಗಳೇನಿವೆಯಲ್ಲ, ಇವು ಎಲ್ಲ ಪಂಚಾಚಾರ್ಯರ ಕಾರ್ಯಸೂಚಿಯಾಗಿವೆ.

ಪಂಚಾಚಾರ್ಯರ ಶೃಂಗಸಭೆ ಸಮುದಾಯದ ಜನತೆಗೆ ಬಲ ನೀಡಿದ್ದೇನೋ ಸತ್ಯ. ಆದರೆ ಎಲ್ಲ ಒಳಪಂಗಡಗಳ, ಬಡ ಸಮುದಾಯದ ಸಾಮಾನ್ಯ ಜನರ ಬದುಕು, ಬವಣೆಗಳ ಸ್ಪಂದನೆಗೆ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿದಾಗ ಮಾತ್ರ ಇಂತಹ ಶೃಂಗಸಭೆಗೆ ಸಾರ್ಥಕ್ಯ.

ಇತ್ತ ಪಂಚಾಚಾರ್ಯರ ಸಮಾವೇಶ ನಡೆಯುತ್ತಿದ್ದಾಗ, ಪಂಚಮಸಾಲಿ ಜಗದ್ಗುರುಗಳ ಮಠಕ್ಕೆ ಬೀಗ ಹಾಕಿದ, ಜಯ ಮೃತ್ಯುಂಜಯ ಸ್ವಾಮೀಜಿಗೆ ವಿಷಪ್ರಾಷನ ಮಾಡಲಾಗಿದೆ ಎನ್ನುವ ವಿವಾದ ಎದ್ದಿತು. `ಕಾವಿ ಖಾದಿ ನೆಚ್ಚಿಕೊಂಡಷ್ಟೂ ಅದು ಸಂಘಟನೆಗೆ ಅಪಾಯ. ಜನಸಾಮಾನ್ಯರನ್ನು ಒಳಗೊಂಡು, ನಂಬಿ ನಡೆಸುವ ಹೋರಾಟ ಯಶಸ್ವಿಯಾಗುತ್ತದೆ’ ಎಂಬುದನ್ನು 12ನೇ ಶತಮಾನದಲ್ಲೇ ಬಸವಣ್ಣನವರು ತೋರಿಕೊಟ್ಟಿದ್ದಾರೆ.

ಕೇವಲ ಜಾತಿಗಣತಿಗಾಗಿ ಪಂಚಾಚಾರ್ಯರ ಶೃಂಗಸಭೆ ಸೀಮಿತಗೊಳ್ಳಬಾರದು. ಸಮಾಜಕ್ಕೊಂದು ಉತ್ತಮ ನಾಯಕತ್ವ ದೊರಕಿಸಿಕೊಡುವ ಪ್ರಯತ್ನ ನಡೆಸಬೇಕು. ದಿಕ್ಕು ಗುರಿಗಳನ್ನು ತೋರಿಸಬೇಕು. ಹೀಗಾದಾಗ ಬಸವಣ್ಣನವರ ಕಲ್ಪನೆಯ ಶಿವಶರಣರ ಸ್ವಚ್ಛ – ಸದೃಢ – ಸಮಷ್ಟಿ ಭಾವದ ಸಮಾಜ ನಿರ್ಮಾಣಕ್ಕೆ ಮೇಲ್ಪಂಕ್ತಿಯಾದೀತು!

Previous articleಮೊದಲು ಶಿಕ್ಷಕರ ವರ್ಗಾವಣೆ ಆಮೇಲೆ ಹೊಸ ನೇಮಕ
Next articleಮಹದಾಯಿ ಯೋಜನೆ: ಬಿಜೆಪಿ, ಜೆಡಿಎಸ್ ಕರ್ನಾಟಕದ ಜನರ ವಿರುದ್ಧ ಸೇಡು

LEAVE A REPLY

Please enter your comment!
Please enter your name here