ಲಿಂಗಾಯತ ಮೀಸಲಾತಿ ಹೋರಾಟ: ಬಿಜೆಪಿ ನಾಯಕರ ಗಂಭೀರ ಆರೋಪ

0
86

ಹುಬ್ಬಳ್ಳಿ: “ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಮುಗಿಸಿದರೆ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಅಂತ್ಯವಾಗಲಿದೆ ಎಂದು ಕಾಂಗ್ರೆಸ್ ಭಾವಿಸಿದೆ” ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಆರೋಪಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, “ಸ್ವಾಮೀಜಿಗಳು ವಿಷಪೂರಿತ ಆಹಾರ ಸೇವನೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವತಃ ಸ್ವಾಮೀಜಿ ಅವರು ಆಹಾರದಲ್ಲಿ ವಿಷ ಬೆರೆಸಿರುವುದಾಗಿ ಸಂಶಯ ವ್ಯಕ್ತಪಡಿಸಿದ್ದು, ಇದು ಬಹಳ ದೊಡ್ಡ ದೃಷ್ಕೃತ್ಯವಾಗಿದೆ. ಕೆಲವು ದಿನಗಳ ಹಿಂದೆ ಶ್ರೀಮಠಕ್ಕೆ ಬೀಗ ಜಡಿಯಲಾಗಿತ್ತು. ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮರಳಿ ಬೀಗ ತೆಗೆದು ಶ್ರೀಗಳು ಪ್ರವೇಶ ಮಾಡಿದ್ದರು. ಮಠದಲ್ಲಿ ಆಗುವ ಬೆಳವಣಿಗೆ ಗಮನಿಸಲು ಇಬ್ಬರು ಮುಸ್ಲಿಂ ಯುವಕರನ್ನು ಬಿಟಿದ್ದರು. ಅವರು ಒಂದು ದಿನ ಅಡುಗೆ ಮನೆಗೆ ಹೋಗಿದ್ದರು. ಆ ದಿನವೇ ಸ್ವಾಮೀಜಿ ಆರೋಗ್ಯ ಹದಗೆಟ್ಟಿದೆ” ಎಂದು ದೂರಿದರು.

“ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಲು ಸ್ವಾಮೀಜಿ ಹೋರಾಡಿದ್ದರು. ಸದ್ಯ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನೂ ಲಿಂಗಾಯತ ಪಂಚಮಸಾಲಿ ಸಮಾಜ ಗಮನಿಸುತ್ತಿದೆ. ಸ್ವಾಮೀಜಿಗೆ ತೊಂದರೆ ನೀಡಿ, ಅವರನ್ನು ಮುಗಿಸಿ ಹೋರಾಟಕ್ಕೆ ಇತಿಶ್ರೀ ಹಾಕಲು ಹೊರಟ್ಟಿದ್ದಾರೆ. ಅದು ಅಸಾಧ್ಯ. ಸೂಕ್ತ ಸಮಯದಲ್ಲಿ ಕಾಂಗ್ರೆಸ್‌ಗೆ ಸಮಾಜ ಉತ್ತರ ನೀಡಲಿದೆ” ಎಂದು ಕಿಡಿಕಾರಿದರು.

“ಸ್ವಾಮೀಜಿಗಳು ಕೇವಲ ಮಠಕ್ಕೆ ಸೀಮಿತವಾಗಿರುವುದಿಲ್ಲ. ಸುತ್ತಾಡಿ, ಸಮಾಜ ತಿದ್ದುವ ಕೆಲಸ ಮಾಡಬೇಕಿರುತ್ತದೆ. ಸಮಾಜದ ಸಲುವಾಗಿ ಅವರು ರಕ್ತ ಹರಿಸುತ್ತಿದ್ದಾರೆ. ಅವರು, ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ಸಮಾಜದ ಪರವಾಗಿ ಹೋರಾಡುತ್ತಿದ್ದಾರೆ. ಹಿಂದೆ ನಮ್ಮ ಸರ್ಕಾರ 2ಎ ಮೀಸಲಾತಿ ನೀಡುವುದಾಗಿ ಘೋಷಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅನುಷ್ಠಾನ ಮಾಡುತ್ತಿಲ್ಲ. ಸ್ವಾಮೀಜಿಗೆ ಯಾವ ರಾಜಕೀಯ ವ್ಯಕ್ತಿ ಹಾಗೂ ಪಕ್ಷದ ಅವಶ್ಯಕತೆ ಇಲ್ಲ. ಸಮಾಜ ಪರವಾಗಿ ಇದ್ದಾರೆ” ಎಂದು ಹೇಳಿದರು.

ಪೀಠಕ್ಕೆ ಪರ್ಯಾಯ ನೇಮಕಕ್ಕೆ ಚಿಂತನೆ ನಡೆದಿದೆ: ಶನಿವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ, “ಕೂಡಲಸಂಗಮ ಪೀಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ನಡವಳಿಕೆಯಲ್ಲಿ ಬದಲಾವಣೆಗಳಾಗಿವೆ. ಹೀಗಾಗಿ ಕೂಡಲಸಂಗಮ ಪೀಠಕ್ಕೆ ಪರ್ಯಾಯ ನೇಮಕಕ್ಕೆ ಚಿಂತನೆ ನಡೆದಿದೆ” ಎಂದು ಹೇಳಿದ್ದರು.

“ಬಸವತತ್ವ ಪ್ರತಿಪಾದನೆಗೆ ನೇಮಕಗೊಂಡಿದ್ದ ಸ್ವಾಮೀಜಿಗಳು ಅದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಿದ್ದಾರೆ. ಒಂದು ಪಕ್ಷದ ಪರವಾಗಿ, ವ್ಯಕ್ತಿಯ ಪರವಾಗಿ ಮಾತನಾಡುತ್ತಿದ್ದಾರೆ” ಎಂದು ಆರೋಪ ಮಾಡಿದ್ದರು.

Previous articleಶಾಸಕರಿಗೆ ಅನುದಾನ ಹಂಚಿಕೆ: ಯಾರಿಗೆ ಎಷ್ಟು?
Next articleVande Bharat Train: ವಂದೇ ಭಾರತ್ ಟಿಕೆಟ್ ಬುಕ್‌ ಮಾಡಲು ಹೊಸ ನಿಯಮ

LEAVE A REPLY

Please enter your comment!
Please enter your name here