ಹುಬ್ಬಳ್ಳಿ: “ರಾಜ್ಯದ ಅಭಿವೃದ್ಧಿಗಾಗಿ ಕಳೆದ ಬಜೆಟ್‌ನಲ್ಲಿ 83 ಸಾವಿರ ಕೋಟಿ ರೂ. ಮೀಸಲಿರಿಸಿದ್ದೇವೆ. ಇಷ್ಟು ಹಣವನ್ನ ಹಿಂದಿನ ಯಾವ ಸರ್ಕಾರಗಳೂ ಮೀಸಲು ಇಟ್ಟಿರಲಿಲ್ಲ” ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದರುವ ಅವರು, “ಶಾಸಕರಿಗೆ ಅನುದಾನ ಹಂಚಿಕೆ ವಿಚಾರವಾಗಿ ಬಜೆಟ್ ಮೀಟಿಂಗನಲ್ಲೇ ಚರ್ಚೆ ಮಾಡಲಾಗಿದೆ. ರಾಜ್ಯದ ಎಲ್ಲ ಸಚಿವರಿಗೂ ತಲಾ 50 ಕೋಟಿ ರೂ. ವಿಶೇಷ ಅನುದಾನ ಕೊಡುವ ಬಗ್ಗೆ ಚರ್ಚೆ ಆಗಿತ್ತು. ಎಲ್ಲವನ್ನೂ ಲೆಕ್ಕ ಹಾಕಿದರೆ 11 ಸಾವಿರ ಕೋಟಿ ಹಣ ಬೇಕಾಗಿತ್ತು. ಹೀಗಾಗಿ ಅದನ್ನು 8 ಸಾವಿರ ಕೋಟಿ ರೂ.ಗೆ ಸೀಮಿತಗೊಳಿಸಲಾಯಿತು” ಎಂದು ತಿಳಿಸಿದರು.
“ಬಿಬಿಎಂಪಿಗೆ 11 ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡುತ್ತಿರುವುದರಿಂದ ಬೆಂಗಳೂರು ವ್ಯಾಪ್ತಿಗೆ ಬರುವ 28 ಶಾಸಕರನ್ನು ಹೊರತುಪಡಿಸಿ, ಉಳಿದ 196 ಶಾಸಕರ ಪೈಕಿ ವಿಪಕ್ಷದ 68 ಸದಸ್ಯರಿಗೆ ತಲಾ 25 ಕೋಟಿ ರೂ., ಕಲ್ಯಾಣ ಕರ್ನಾಟಕದ 27 ಶಾಸಕರಿಗೆ 25 ಕೋಟಿ ರೂ. ನೀಡಲಾಗುವುದು. ಇನ್ನುಳಿದ 101 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ. ಅನುದಾನ ನೀಡುವ ಬಗ್ಗೆ ಚರ್ಚೆಯಾಗಿದೆ” ಎಂದರು.
“ಎಲ್ಲ ಶಾಸಕರನ್ನೂ ಒಳಗೊಂಡಂತೆ 7,455 ಕೋಟಿ ರೂ. ವಿಶೇಷ ಅನುದಾನ ನೀಡುವ ನಿರ್ಧಾರ ಆಗಿತ್ತು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲ ಶಾಸಕರ ಜೊತೆ ಮಾತನಾಡಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ಜು. 30ರಂದು ಕಲ್ಯಾಣ ಕರ್ನಾಟಕ, 31ರಂದು ಕಿತ್ತೂರು ಕರ್ನಾಟಕ ಹಾಗೂ ಆ. 3ರಂದು ಹಳೇ ಮೈಸೂರು ಭಾಗದ ಶಾಸಕರನ್ನು ಭೇಟಿ ಮಾಡಿ ವಿಶೇಷ ಅನುದಾನದ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂಬುದನ್ನು ಮುಖ್ಯಮಂತ್ರಿಗಳು ಮನವರಿಗೆ ಮಾಡಿಕೊಡಲಿದ್ದಾರೆ” ಎಂದರು.
ಇದೇ ಸಂದರ್ಭದಲ್ಲಿ ವಿಪಕ್ಷದವರನ್ನು ತರಾಟೆಗೆ ತೆಗೆದುಕೊಂಡ ರಾಯರಡ್ಡಿ, “ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಾದ ಸಾಕಷ್ಟು ಕೆಲಸಗಳಿವೆ. 15ನೇ ಹಣಕಾಸು ಆಯೋಗದ ಪ್ರಕಾರ ರಾಜ್ಯಕ್ಕೆ ಕೇಂದ್ರದಿಂದ 5,443 ಕೋಟಿ ರೂ. ಬರಬೇಕಿದೆ. 2023-24ರಲ್ಲೇ ನಿರ್ಮಲಾ ಸೀತಾರಾಮನ್ ಅವರು ಭದ್ರಾ ಯೋಜನೆಗೆ 5,400 ಕೋಟಿ ರೂ. ನೀಡುವುದಾಗಿ ಹೇಳಿದ್ದರು. ಎಲ್ಲವೂ ಸೇರಿ ಒಟ್ಟು 16 ಸಾವಿರ ಕೋಟಿ ಹಣ ಬಿಡುಗಡೆ ಆಗಬೇಕಿತ್ತು. ಆದರೆ, ಈ ಬಗ್ಗೆ ಬಿಜೆಪಿಯ ರಾಜ್ಯ ನಾಯಕರು ತುಟಿ ಬಿಚ್ಚುತ್ತಿಲ್ಲ” ಎಂದು ಆರೋಪಿಸಿದರು.
“14ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಪ್ರತಿ ವರ್ಷ ಬರುತ್ತಿದ್ದ ಜಿಎಸ್‌ಟಿ ಹಣದಲ್ಲಿ ನಮಗೆ 21 ಸಾವಿರ ಕೋಟಿ ಕಡಿಮೆ ಬರುತ್ತಿದೆ. ಈ ಬಗ್ಗೆ ತಾತ್ವಿಕವಾಗಿ ಸೀತಾರಾಮನ್ ಸರಿ ಮಾಡುವುದಾಗಿ ಹೇಳಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಗ್ಯಾರಂಟಿ ಯೋಜನೆಯ 52 ಸಾವಿರ ಕೋಟಿ ರೂ. ಪೈಕಿ 32 ಸಾವಿರ ಕೋಟಿ ರೂ. ಗೃಹಲಕ್ಷ್ಮೀ ಯೋಜನೆಗೆ ಹೋಗುತ್ತಿದೆ. ಗೃಹ ಜ್ಯೋತಿ ಯೋಜನೆ 1.02 ಕೋಟಿ ಕುಟಂಬಗಳಿಗೆ ನೇರ ಲಾಭವಾಗುತ್ತಿದೆ. ಇದನ್ನೆಲ್ಲ ಜನ ಅರಿತುಕೊಳ್ಳಬೇಕಿದೆ” ಎಂದರು.