ಬೀದರ್: “ಕೇಂದ್ರದ ಮಾಜಿ ಮಂತ್ರಿ ಭಗವಂತ್ ಖೂಬಾ ನನ್ನ ವಿರೋಧಿ `ಟೀಮ್‌ನ ಕ್ಯಾಪ್ಟನ್’ ಆಗಿದ್ದಾರೆ” ಎಂದು ಶಾಸಕ ಪ್ರಭು ಚವ್ಹಾಣ್ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನನ್ನು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಿರ್ನಾಮ ಮಾಡಲು ಮಾಜಿ ಸಂಸದ ಭಗವಂತ ಖೂಬಾ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಿದ್ದಾರೆ. ನಮ್ಮ ಕೌಂಟುಬಿಕ ಪ್ರಸಕ್ತ ವಿಪ್ಲವ'ಕ್ಕೆ ಭಗವಂತ ಖೂಬಾ ಮತ್ತು ಅವರ ತಂಡ ನೇರ ಕಾರಣ ಎಂದು ಪ್ರತಿಪಾದಿಸಿದರು. ಭಗವಂತ ಖೂಬಾ ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ನನಗೆ ವಿಧ ವಿಧವಾಗಿ
ಟಾರ್ಚರ್’ ನೀಡುತ್ತಿದ್ದಾರೆ. ನನ್ನ ವಿರುದ್ಧದ ಕೆಲಸ ಕಾರ್ಯಗಳಿಗೆ ಭಗವಂತ ಖೂಬಾ ಸ್ವತಃ ಎಲ್ಲಿಯೂ ಹೋಗುವುದಿಲ್ಲ. ಬದಲಿಗೆ ತಮ್ಮ ದೂತರನ್ನು' ಮತ್ತು
ಭಂಟರನ್ನು’ ಕಳುಹಿಸಿಕೊಡುತ್ತಾರೆ” ಎಂದು ಆರೋಪಿಸಿದರು.
“2018 ಮತ್ತು 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಪರಾಭವಗೊಳಿಸಲು ಭಗವಂತ ಖೂಬಾ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರು. ಆದರೆ, ಯಶಸ್ವಿಯಾಗಲಿಲ್ಲ. ಔರಾದ್ ವಿಧಾನಸಭಾ ಕ್ಷೇತ್ರದ ಜನರು ಚುನಾವಣೆಗಳಲ್ಲಿ ನನಗೆ ಆಶೀರ್ವದಿಸಿದ್ದಾರೆ. ಆದರೆ, ನಾನು ಎಂದೂ ಕೂಡ ಶಾಸಕನಂತೆ ನಡೆದುಕೊಂಡಿಲ್ಲ, ನಾನು ಜನರ ಸೇವಕನಾಗಿರುವೆ” ಎಂದರು.
“ಭಗವಂತ ಖೂಬಾ ಒಬ್ಬ ಸುಳ್ಳಿನ ಸರದಾರ. ಸುಳ್ಳು ಹೇಳುವುದೇ ಅವರ ಕೆಲಸ. ನನ್ನ ವಿರುದ್ಧ ಹುನ್ನಾರ ಮಾಡಿ, ನನ್ನ ಹೆಸರು ಹಾಳು ಮಾಡಬೇಕೆಂದು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಆರ್‌ಟಿಇ ಹಾಕಿಸುವುದು, ನನ್ನ ವಿರುದ್ಧ ದೂರು ಕೊಡಿಸುವುದು, ಸರ್ಕಾರಿ ಕಾಮಗಾರಿ ಮಾಡುತ್ತಿರುವವರಿಗೆ ಕಿರಿಕಿರಿ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಪ್ರಕರಣ ದಾಖಲು: ಮಹಾರಾಷ್ಟ್ರ ಮೂಲದ ಓರ್ವ ಯುವತಿ ನೀಡಿದ ದೂರಿನ ಮೇರೆಗೆ ಔರಾದ್ ತಾಲೂಕಿನ ಘುಮಸುಬಾಯಿ ಬೋಂತಿ ತಾಂಡಾದ ಪ್ರತೀಕ್ ಚವ್ಹಾಣ್ ವಿರುದ್ಧ ಭಾರತೀಯ ದಂಡ ಸಂಹಿತೆ 376 (2) (ಎನ್), 366, 324 ಮತ್ತು 506 ಸೆಕ್ಷನ್‌ಗಳಡಿ ಬೀದರ್‌ನಲ್ಲಿಯ ಮಹಿಳಾ ಠಾಣೆ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.