ನ್ಯಾಯಾಂಗ ನಿಂದನೆ ಕೇಸ್ ವಿಚಾರಣೆಗೆ ಸುಪ್ರೀಂಕೋರ್ಟ್‌ ತಡೆ: ಎಚ್‌ಡಿಕೆಗೆ ರಿಲೀಫ್

0
125

ನವದೆಹಲಿ: ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ಕೇತಗಾನಹಳ್ಳಿಯಲ್ಲಿ ನಡೆದಿರುವ ಭೂ ಅತಿಕ್ರಮಣ ಪ್ರಕರಣದಲ್ಲಿ ಮಂಡ್ಯದ ಸಂಸದ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯನ್ನು ನ್ಯಾಯಾಂಗ ನಿಂದನೆ ಪ್ರಕ್ರಿಯೆಗೊಳಪಡಿಸುವ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ಕೇಂದ್ರದ ಭಾರೀ ಕೈಗಾರಿಕಾ ಸಚಿವ ಕುಮಾರಸ್ವಾಮಿ ಕರ್ನಾಟಕ ಹೈಕೋರ್ಟ್‌ ಏಪ್ರಿಲ್ 17ರ ಆದೇಶ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ಬಿ ವರಳೆ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿತು. ಮುಂದಿನ ಆದೇಶದವರೆಗೂ ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಪೀಠವು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದೆ.

ಕೇತಗಾನಹಳ್ಳಿಯ ಸರ್ವೇ ನಂಬರ್ 8, 9, 10, 16, 17 ಮತ್ತು 79ರಲ್ಲಿ 14 ಎಕರೆ ಸರ್ಕಾರಿ ಜಮೀನು ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಬಂಧಿಕರು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ 2020ರಲ್ಲಿ ಆದೇಶಿಸಿತ್ತು. ಆದರೆ, ಇದನ್ನು ಜಾರಿಗೊಳಿಸಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯ, ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.

ಹೈಕೋರ್ಟ್‌ ವಿಭಾಗೀಯ ಪೀಠವು 2020ರ ಜನವರಿ 14ರ ಆದೇಶಕ್ಕೆ ಅಗೌರವ ತೋರಿಸಿದಕ್ಕಾಗಿ ಹೈಕೋರ್ಟ್‌ನಲ್ಲಿ ಈಗ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಮುಂದುವರೆದಿದೆ. ಕರ್ನಾಟಕ ಲೋಕಾಯುಕ್ತ 2014ರ ಆಗಸ್ಟ್ 5ರಂದು ಹೊರಡಿಸಿದ್ದ ಆದೇಶವನ್ನು ಮೂರು ವಾರಗಳೊಳಗಾಗಿ ಪಾಲಿಸುವುದಾಗಿ ನೀಡಿದ ಹೇಳಿಕೆ ಆಧಾರದಲ್ಲಿ ಹೈಕೋರ್ಟ್ 2020ರ ಜನವರಿಯಲ್ಲಿ ಆದೇಶ ಹೊರಡಿಸಿತ್ತು.

ಲೋಕಾಯುಕ್ತದ ಈ ಆದೇಶ ಬಹಳ ವಿಸ್ತೃತವಾಗಿದ್ದರೂ ಮಧ್ಯಂತರ ರೂಪದಲ್ಲಿತ್ತು. ಕೊನೆಗೆ ಲೋಕಾಯುಕ್ತವು 2021ರ ಮಾರ್ಚ್ 3ರಂದು ಪ್ರಕರಣಕ್ಕೆ ಅಂತ್ಯ ಹಾಡಿತ್ತು. ಹೀಗಾಗಿ ಲೋಕಾಯುಕ್ತದ ಮಧ್ಯಂತರ ಆದೇಶ (ಕೊನೆಗೆ ಒಂಬರ್ಡ್ಸಮನ್ ಪ್ರಕರಣಕ್ಕೆ ಅಂತ್ಯಹಾಡಿದ್ದರು) ಮೇಲೆ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜರುಗಿಸುವಂತಿಲ್ಲ. ಇದಲ್ಲದೆ ಈ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಸಚಿವರ ಹೆಸರೂ ಇರಲಿಲ್ಲ. ಈಗಾಗಲೇ ಭೂ ಅತಿ ಅಕ್ರಮಣಕಾರರಿಂದ ಭೂಮಿ ತೆರವು ಮಾಡಲಾಗಿದ್ದರೂ ಸಚಿವರು ಪ್ರಕರಣಕ್ಕೆ ಸಂಬಂಧಪಡದವರಾಗಿದ್ದಾರೆ ಎಂದು ಸಚಿವರ ಪರ ವಕೀಲರಾದ ಸಿ.ಎ. ಸುಂದರಮ್ ವಾದಿಸಿದ್ದರು.

Previous articleಪಿಎಫ್‌ ಹಣ ವಾಪಸ್ ಪಡೆಯುವ ನಿಯಮದಲ್ಲಿ ಮಹತ್ವದ ಬದಲಾವಣೆ
Next articleಎಷ್ಟು ಅಂಕ ಗಳಿಸಿದೆ ಎಂದು ನನ್ನಪ್ಪ ಪ್ರಶ್ನಿಸಲೇ ಇಲ್ಲ: ತಂದೆ ನೆನಪಲ್ಲಿ ಶಾಸಕ ಸುನಿಲ್ ಕುಮಾರ್‌ ಭಾವನಾತ್ಮಕ ಪತ್ರ

LEAVE A REPLY

Please enter your comment!
Please enter your name here