ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಕಾಫಿ ಅಂಗಡಿ, ಟೀ ಕೇಂದ್ರಗಳು, ಬೀಡಿ ಮಳಿಗೆಗಳು, ಬೇಕರಿಗಳು, ಹೋಟೆಲ್ ಮತ್ತು ಇತರ ಸಣ್ಣ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ವರದಾನವಾಗಿದ್ದ ಯುಪಿಐ (ಫೋನ್ ಪೇ ಹಾಗೂ ಗೂಗಲ್ ಪೇ) ಡಿಜಿಟಲ್ ಪಾವತಿ ವ್ಯವಸ್ಥೆಗೆ ಗ್ರಹಣ ಆರಂಭವಾಗಿದ್ದು, ಡಿಜಿಟಲ್ ಮೂಲಕ ಹಣ ಸ್ವೀಕರಿಸಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ.
ಈ ಮೊದಲು ಹೋಟೆಲ್, ದಿನಸಿ ಅಂಗಡಿ, ಬೇಕರಿ ಸೇರಿದಂತೆ ಎಲ್ಲೇ ವ್ಯಾಪಾರ, ವಹಿವಾಟು ನಡೆಸಿದರೂ, ವ್ಯಾಪಾರಸ್ಥರು ತಮ್ಮ ಮಳಿಗೆಗಳಲ್ಲಿ ಅಂಟಿಸಿದ್ದ ಯುಪಿಐ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸುವ ವ್ಯವಸ್ಥೆ ಇತ್ತು. ಆದರೆ, ಅದೇ ವ್ಯವಸ್ಥೆ ವ್ಯಾಪಾರಸ್ಥರಿಗೆ ಸದ್ಯ ಶಾಪವಾಗಿ ಮಾರ್ಪಟ್ಟಿದೆ.
ಜೇಬಿನಲ್ಲಿ ಹಣವಿಲ್ಲದಿದ್ದರೂ ಫೋನ್ ಇದೆಯಲ್ಲ. ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಸಂದಾಯ ಮಾಡಬಹುದು ಎಂಬ ಯೋಚನೆಯಿಂದ ಮನೆಯಿಂದ ಹೊರಬೀಳುವವರು ಇನ್ನು ಮುಂದೆ ಎಚ್ಚರಿಕೆಯಿಂದ ಇರಬೇಕು. ವಾಣಿಜ್ಯ ತೆರಿಗೆ ಇಲಾಖೆಯು ಇತ್ತೀಚೆಗೆ ಅನೇಕ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್‌ಗಳನ್ನು ನೀಡುತ್ತಿದೆ. ಇದು ಅವರಿಗೆ ದೊಡ್ಡ ಆರ್ಥಿಕ ಪರಿಣಾಮ ಬೀರುತ್ತದೆಂಬ ಭಯ ವ್ಯಾಪಾರಸ್ಥರನ್ನು ಕಾಡುತ್ತಿದೆ. ಅನೇಕರು ಈ ಯುಪಿಐ ಪೇಮೇಂಟ್ ಸಹವಾಸವೇ ಬೇಡ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
2021ರಿಂದಲೂ ಸಾಕಷ್ಟು ತೆರಿಗೆ ಪಾವತಿಸದ ಕಾಫಿ ಅಂಗಡಿಗಳು, ಟೀ ಸ್ಟಾಲ್ ಗಳು, ಬೀಡಿ-ಸಿಗರೇಟ್ ಮಳಿಗೆಗಳು, ಬೇಕರಿಗಳು ಮತ್ತು ಇತರ ಸಣ್ಣ ವ್ಯಾಪಾರಿಗಳು ಈಗ ತೆರಿಗೆ ಇಲಾಖೆಯ ದಾಳಿಗೆ ಗುರಿಯಾಗಿದ್ದಾರೆ. ಯುಪಿಐ ಮೂಲಕ ಬಂದ ಹಣವನ್ನು ಅವರು ತಮ್ಮ ವ್ಯಾಪಾರ ಆದಾಯದಲ್ಲಿ ಸರಿಯಾಗಿ ಘೋಷಿಸಿಲ್ಲ ಎಂಬ ಆರೋಪವಿದೆ. ಇದರ ಪರಿಣಾಮವಾಗಿ, ಅನೇಕರಿಗೆ ಲಕ್ಷಾಂತರ ರೂಪಾಯಿಗಳ ತೆರಿಗೆ ಬಾಕಿ ಇದೆ ಎಂದು ಹೇಳಿ ನೋಟಿಸ್ ನೀಡಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯು ಸಣ್ಣ ಅಂಗಡಿ ಮಾಲೀಕರಿಗೆ ನೀಡಿರುವ ನೋಟಿಸ್‌ನಲ್ಲಿ ಕೆಲವರಿಗೆ 45 ಸಾವಿರದಿಂದ 1.25 ಲಕ್ಷ ರೂ. ವರೆಗೆ ತೆರಿಗೆ ಪಾವತಿಸುವಂತೆ ಸೂಚಿಸಲಾಗಿದೆ. ಇದು ಧಾರವಾಡ ಜಿಲ್ಲೆಯ ಸಾವಿರಾರು ವ್ಯಾಪಾರಿಗಳಿಗೆ ದೊಡ್ಡ ಆರ್ಥಿಕ ಭಾರವಾಗಿ ಪರಿಣಮಿಸಿದೆ. ಅನೇಕರು ತಮ್ಮ ವ್ಯವಹಾರದಲ್ಲಿ ಈ ರೀತಿಯ ದೊಡ್ಡ ತೆರಿಗೆ ಬಾಕಿ ಎದುರಿಸಲು ಸಿದ್ಧರಿಲ್ಲದೆ ದಿಗಿಲುಗೊಂಡಿದ್ದಾರೆ. ಇನ್ಮುಂದೆ ಗೂಗಲ್ ಪೇ, ಫೋನ್ ಪೇ ಬಳಸದಂತೆ ನಿರ್ಧರಿಸಿರುವ ವ್ಯಾಪಾರಸ್ಥರು, ತಮ್ಮ ಗಂಗಡಿ-ಮುಂಗಟ್ಟುಗಳಲ್ಲಿ ಅಂಟಿಸಿದ್ದ ಯುಪಿಐ ಸ್ಕ್ಯಾನರ್‌ಗಳನ್ನು ತೆಗೆದುಹಾಕಿದ್ದಾರೆ.
ಸಣ್ಣ ಪುಟ್ಟ ವ್ಯಾಪಾರಸ್ಥರನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವ ಉದ್ದೇಶದಿಂದ ಹೊಸ ಆಲೋಚನೆಗೆ ಆದಾಯ ತೆರಿಗೆ, ಮಾರಾಟ ತೆರಿಗೆ ವಿಭಾಗದ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಸಣ್ಣ ಪುಟ್ಟ ವ್ಯಾಪಾರಸ್ಥರನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ಜನರಿಗೂ ಹೊರೆ ಆಗುವುದರ ಜೊತೆಗೆ ಕೇಂದ್ರ ಸರ್ಕಾರದ ಡಿಜಿಟಲೀಕರಣದ ಕನಸಿಗೆ ನೀರೆರಚಿದಂತಾಗಲಿದೆ.
ನೋಟಿಸ್ ಏಕೆ?: ಸಾಂಪ್ರದಾಯಿಕ ಕ್ಯಾಷ್ ಪಾವತಿಗಳಿಗೆ ಬದಲಾಗಿ, ಇತ್ತೀಚಿನ ವರ್ಷಗಳಲ್ಲಿ ಯುಪಿಐ, ಗೂಗಲ್ ಪೇ ಮತ್ತು ಫೋನ್ ಪೇನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳು ಹೆಚ್ಚು ಜನಪ್ರಿಯವಾಗಿದ್ದವು. ಆದರೆ, ಸಣ್ಣ ವ್ಯಾಪಾರಿಗಳು ಈ ವಹಿವಾಟುಗಳನ್ನು ತಮ್ಮ ಆದಾಯದಲ್ಲಿ ಸರಿಯಾಗಿ ರಿಪೋರ್ಟ್ ಮಾಡದಿದ್ದರೆ, ತೆರಿಗೆ ಇಲಾಖೆಗೆ ಈ ಮಾಹಿತಿ ಗೋಚರಿಸುತ್ತದೆ. ಇದರ ಪರಿಣಾಮವಾಗಿ, ಹಿಂದಿನ ವರ್ಷಗಳ ತೆರಿಗೆ ಬಾಕಿಯನ್ನು ಲೆಕ್ಕಹಾಕಿ ನೋಟಿಸ್ ನೀಡಲಾಗುತ್ತಿದೆ.
ನಗದು ವ್ಯವಹಾರಕ್ಕೆ ನಿರ್ಧಾರ: ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಬಳಸುವ ಎಲ್ಲಾ ಸಣ್ಣ ವ್ಯಾಪಾರಿಗಳು ತಮ್ಮ ಆದಾಯವನ್ನು ಘೋಷಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆದಾಯ ತೆರಿಗೆಯನ್ನು ಕಟ್ಟುತ್ತಿದ್ದರೂ, ಡಿಜಿಟಲ್ ಪೇಮೆಂಟ್ ಮೇಲೆ ಮತ್ತೆ ತೆರಿಗೆ ವಿಧಿಸಲಾಗುತ್ತಿದೆ. ಹೀಗಾಗಿ ಡಿಜಿಟಲ್ ವ್ಯವಸ್ಥೆಯನ್ನು ಕಿತ್ತುಹಾಕಿ ಸಾಂಪ್ರದಾಯಿಕವಾಗಿ ನೇರ ನಗದು ವ್ಯವಹಾರ ಮಾಡಲು ನಿರ್ಧರಿಸಿದ್ದೇವೆ ಎಂದು ಹುಬ್ಬಳ್ಳಿಯ ಹೋಟೆಲ್ ಉದ್ಯಮಿ ರಾಕೇಶ ಎ.ಎಂ. ಹೇಳಿದ್ದಾರೆ.