ಮಂಗಳೂರ: ನಗರದ ಕದ್ರಿ ಸರ್ಕ್ಯೂಟ್ ಹೌಸ್ ಬಳಿಯ ಬಿಜೈ ಬೆಟ್ಟಗುಡ್ಡದಲ್ಲಿ ಮೇಲ್ಭಾಗದ ಗುಡ್ಡ ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದಾಗಿ ಒಂದು ಬದಿ ರಸ್ತೆ ಸಂಚಾರ ಬಂದ್ ಆಗಿದೆ. ಇಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾತ್ರಿಯೇ ಗುಡ್ಡ ಕುಸಿದಿದ್ದು, ಬೆಳಗ್ಗಿನಿಂದ ಮಧ್ಯಾಹ್ನವರೆಗೆ ಮಣ್ಣು ತೆರವು ಕಾರ್ಯ ನಡೆಸಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಂಗಳೂರಿನ ಪದವಿನಂಗಡಿ ಬಳಿ ಧರೆ ಕುಸಿದ ಪರಿಣಾಮ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ 1 ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. 15ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಮಣ್ಣಿನಡಿ ಸಿಲುಕಿವೆ. ರಾತ್ರಿ ಇಡೀ ಸುರಿದ ಮಳೆಗೆ ಮಣ್ಣು ಸಡಿಲಗೊಂಡು ಗುಡ್ಡ ಕುಸಿತ ಉಂಟಾಗಿತ್ತು.
ತಗ್ಗು ಪ್ರದೇಶಗಳು ಜಲಾವೃತ: ಮೂಲ್ಕಿಯ ಬಪ್ಪನಾಡು ದೇವಳ ಜಲಾವೃತವಾಗಿದೆ. ಕೊಡಿಯಾಲಬೈಲ್, ಮಂಗಳಾದೇವಿ ಸೇರಿದಂತೆ ಹಲವು ಕಡೆಗಳಲ್ಲಿ ರಾತ್ರಿ ಸುರಿದ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ಪರದಾಟ ನಡೆಸುವಂತಾಗಿದೆ. ಪಚ್ಚನಾಡಿ, ಆರ್ಯಸಮಾಜ ರಸ್ತೆಯಲ್ಲಿ ಗುಡ್ಡ ಜರಿದು ಮನೆಗಳಿಗೆ ಆಪಾಯ ಉಂಟಾಗಿದೆ. ಕೊಟ್ಟಾರಚೌಕಿಯಲ್ಲಿ ಅಂಗಡಿಗಳಿಗೆ ನೀರು ನುಗ್ಗಿದೆ.
ಉಳ್ಳಾಲದ ಕೋಟೆಕಾರು, ಉಚ್ಚಿಲ, ಉಳ್ಳಾಲ, ಸೋಮೇಶ್ವರ ಭಾಗಗಳಲ್ಲಿ ಕೂಡ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಇಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಫರಂಗಿಪೇಟೆಯ ಪುದು ಗ್ರಾಮದ ಅಮೆಮ್ಮಾರ್‌ನಲ್ಲಿ ಗುಡ್ಡುಕುಸಿದು ಝುಬೈರ್ ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ. ರಸ್ತೆಗೆ ಮಣ್ಣು ಕುಸಿದು ಇಲ್ಲಿ ಸಂಚಾರಕ್ಕೆ ತೊಂದರೆಯಾಗಿದೆ. ಪಚ್ಚನಾಡಿಯ ಶಿವನಗರದಲ್ಲಿ ಮನೆ ಕುಸಿತಗೊಂಡಿದೆ.
ಸುಭಾಷಿತ ನಗರದ ಬಂಟರ ಭವನ ಬಳಿ ಕೃತಕ ನೆರೆ ಆವರಿಸಿದೆ. ಬಜಪೆ ಕಳವಾರು ಬಳಿಯ ಶಾಂತುಗುಡ್ಡೆ ಎಂಎಸ್‌ಇಝಡ್ ಕಾಲನಿಯಲ್ಲಿ ಗುಡ್ಡು ಕುಸಿದು ಮೂರು ಮನೆಗಳಿಗೆ ಹಾನಿಯಾಗಿದೆ. ನಾಲ್ಕೈದು ವಾಹನಗಳು ಮಣ್ಣಿನಡಿ ಸಿಲುಕಿವೆ.
ಭಾರಿ ಮಳೆಗೆ ತೊಂದರೆಗೆ ಒಳಗಾದ ನಗರದ ಜೈನ ಬಟ್ಟಗುಡ್ಡ, ಪಂಪ್‌ವೆಲ್, ಮಾಲೆಮಾರ್, ಕಾವೂರು, ಕೊಟ್ಟಾರ ಚೌಕಿ ಮುಂತಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದರ್ಶನ್ ಅವರು ಬುಧವಾರ ರಾತ್ರಿ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.