ಮಂಗಳೂರು: ಡ್ರಗ್ಸ್ ಪೂರೈಕೆ ಪ್ರಕರಣದಲ್ಲಿ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದು, ಆರೋಪಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ. ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ಅವರು ತನ್ನ ಆಪ್ತನ ಬಂಧನದ ಬಗ್ಗೆ ಇದುವರೆಗೆ ಮಾತನಾಡಿಲ್ಲ. ನಿಷೇದಿತ ಡ್ರಗ್ಸ್ ಪೂರೈಕೆ ಮಾಡಿ ಸಿಕ್ಕಿಬಿದ್ದಿರುವ ಆಪ್ತನ ಬಗ್ಗೆ ಸಚಿವರು ಸ್ಪಷ್ಟೀಕರಣ ನೀಡಬೇಕು, ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಆಗ್ರಹಿಸಿದರು.
ಕಳೆದ ಒಂದೂವರೆ ವರ್ಷದಿಂದ ಕಲಬುರಗಿಯಲ್ಲಿ ಡ್ರಗ್ಸ್ ಪೂರೈಕೆ ಹೆಚ್ಚಾಗಿದೆ. ಈ ಹಿಂದೆ ಡ್ರಗ್ಸ್ ಸರಬರಾಜು ಪತ್ತೆಯಾಗಿದ್ದರೂ, ರಾಜ್ಯದ ಪೊಲೀಸರು ತನಿಖೆ ನಡೆಸಿಲ್ಲ. ಈಗ ಮಹಾರಾಷ್ಟ್ರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕರ್ನಾಟಕ ಪೊಲೀಸರು ಇದುವರೆಗೆ ಏನು ಮಾಡುತ್ತಿದ್ದರು?. ಆರೋಪಿಗಳಿಗೆ ರಾಜಕೀಯವಾಗಿ ಯಾರ ಆಶೀರ್ವಾದ ಇತ್ತು? ಸ್ಥಳೀಯರಾದ ಅಲ್ಲಮ ಪ್ರಭು ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಆಪ್ತನಾದ ಆರೋಪಿ ವಿರುದ್ಧ ರಾಜ್ಯ ಪೊಲೀಸರು ಏಕೆ ಕ್ರಮ ಕೈಗೊಂಡಿರಲಿಲ್ಲ? ಎಂದು ಶಾಸಕರು ಪ್ರಶ್ನಿಸಿದರು.
ರಿಪಬ್ಲಿಕ್ ಆಫ್ ಕಲಬುರಗಿ: ಮಂಗಳೂರಲ್ಲಿ ಐಟಿ ಪಾರ್ಕ್ ಸ್ಥಾಪಿಸುತ್ತೇವೆ ಎಂದು ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ ಇದುವರೆಗೆ ಕ್ರಮ ಕೈಗೊಂಡಿಲ್ಲ. ಸದಾ ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಮಾತನಾಡುತ್ತಾ, ನಮಗೆಲ್ಲರಿಗೂ ಸ್ವಾಮೀಜಿಯಂತೆ ಉಪದೇಶ ನೀಡುವ ರಿಪಬ್ಲಿಕ್ ಆಫ್ ಕಲಬುರಗಿಯ ಪ್ರಿಯಾಂಕ್ ಖರ್ಗೆ ಡ್ರಗ್ಸ್ ವಿಚಾರದಲ್ಲಿ ಮಾತನಾಡುತ್ತಿಲ್ಲ. ಕಲಬುರಗಿಯಲ್ಲಿ ಡ್ರಗ್ಸ್ ವಿರುದ್ಧ ಕ್ರಮ ಕೈಗೊಳ್ಳದಂತೆ ಕಾಂಗ್ರೆಸ್ ಮುಖಂಡರ ಒತ್ತಡವಿದೆ ಎಂಬ ಅನುಮಾನ ಇದೆ, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಡ್ರಗ್ಸ್ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಮಂಗಳೂರನ್ನು ಉಡ್ತಾ ಪಂಜಾಬ್‌ನಂತೆ ಆಗಲು ಬಿಡುವುದಿಲ್ಲ ಎಂದು ಗೃಹ ಸಚಿವರು ಇತ್ತೀಚೆಗೆ ಹೇಳಿದ್ದರು. ಆದರೆ, ರಾಜ್ಯದಲ್ಲಿ ಡ್ರಗ್ಸ್ ಪೂರೈಕೆ ನಿರಂತರವಾಗಿ ನಡೆಯುತ್ತಿದೆ. ಶಿಕ್ಷಣ ಸಂಸ್ಥೆಗಳು ಅಧಿಕವಾಗಿರುವ ಮಂಗಳೂರಿಗೆ ವಿಶಾಖಪಟ್ಟಣ, ಬೆಂಗಳೂರು, ಕೇರಳದಿಂದ ಡ್ರಗ್ಸ್ ಪೂರೈಕೆ ಆಗುತ್ತಿದೆ. ಈಗ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಡ್ರಗ್ಸ್ ಬರುತ್ತಿದೆ. ಪೊಲೀಸರು ಒಮ್ಮೆ ಕಾರ್ಯಾಚರಣೆ ನಡೆಸಿ, ಒಂದಿಬ್ಬರನ್ನು ಬಂಧಿಸಿ ಸುಮ್ಮನಾಗುತ್ತಾರೆ.
ಶಾಸಕ ಡಾ. ಭರತ್ ಶೆಟ್ಟಿ, “ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್, ಬಿಜೆಪಿಯನ್ನು ಸದಾ ಬಯ್ಯುತ್ತಿರುತ್ತಾರೆ. ತನಗೆ ಎಲ್ಲ ವಿಷಯಗಳು ಗೊತ್ತಿದೆ, ಗೊತ್ತಿಲ್ಲದ ವಿಷಯವೇ ಇಲ್ಲ ಎಂಬ ಸರ್ವಜ್ಞ ಸಿಂಡ್ರೋಮ್ ಪ್ರಿಯಾಂಕ್ ಅವರಿಗಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷದ ಶಾಸಕರು ಯಾವುದೇ ಇಲಾಖೆ ಬಗ್ಗೆ ಮಾತನಾಡಿದರೂ ಅವರು ಮಧ್ಯಪ್ರವೇಶ ಮಾಡಿ ಉತ್ತರ ನೀಡುತ್ತಾರೆ. ಆದರೆ, ತನ್ನ ಆಪ್ತ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದಿರೂ ಅವರು ಸುಮ್ಮನಿದ್ದಾರೆ. ಕರ್ನಾಟಕದಲ್ಲಿ ಡ್ರಗ್ಸ್ ಜಾಲದ ಕಿಂಗ್‌ಪಿನ್ ಅವರೇ ಆಗಿರಬಹುದು. ತಕ್ಷಣ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮರ್ಪಕ ತನಿಖೆಗೆ ಅವಕಾಶ ಮಾಡಿಕೊಡಬೇಕು” ಎಂದು ಒತ್ತಾಯಿಸಿದರು.