ಮಾಲತೇಶ ಹೂಲಿಹಳ್ಳಿ
ಹುಬ್ಬಳ್ಳಿ: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. 2025ರ ಏಪ್ರಿಲ್ ಅಂತ್ಯದ ವೇಳೆಗೆ 1,369 ಪ್ರಕರಣಗಳು ದಾಖಲಾಗಿದ್ದು, ಇವುಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ಆದೇಶಿಸಿರುವ ಜಾಗೃತಿ ಕ್ರಮಗಳ ಅನುಷ್ಠಾನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ತಡೆಗೆ ಸರಕಾರ ಹತ್ತು ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಆದೇಶಿಸಿದೆ. ರಾಜ್ಯದ ಎಲ್ಲ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ 1098ರ ಕುರಿತು ಸೂಕ್ತ ಸ್ಥಳಗಳಲ್ಲಿ ಗೋಡೆ ಬರಹಗಳನ್ನು ಬರೆಸಬೇಕು.
ಶಾಲೆಯ ವೆಬ್‌ಸೈಟ್‌ನಲ್ಲಿ 1098ರ ಕುರಿತು ಮಾಹಿತಿ ಪ್ರಕಟಿಸಬೇಕು. ಬೆಳಗಿನ ಶಾಲಾ ಅಸೆಂಬ್ಲಿ, ಪ್ರಾರ್ಥನೆ ಸಮಯದಲ್ಲಿ ಮಕ್ಕಳಿಗೆ ಮಾಹಿತಿ ನೀಡಬೇಕು. ಪುಸ್ತಕ ಹಾಗೂ ನೋಟ್ ಬುಕ್‌ಗಳ ಮೇಲೆ ಹಾಗೂ ಕೆಳ ಭಾಗದಲ್ಲಿ ಮಾಹಿತಿ ಪ್ರಕಟಿಸಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಶಾಲಾ ಮುಖ್ಯಸ್ಥರಿಗೆ ನಿರ್ದೇಶನ ನೀಡಲಾಗಿದೆ.
ಆದರೆ ಈ ಎಲ್ಲ ಕ್ರಮಗಳು ಕೇವಲ ವೆಬ್‌ಸೈಟ್ ಜಾಗೃತಿಗೆ ಮಾತ್ರ ಸೀಮಿತವಾಗಿವೆ. ರಾಜ್ಯದಲ್ಲಿ 2024 ರಲ್ಲಿ 6,914 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣಗಳು ದಾಖಲಾಗಿದ್ದವು. ಈ ಸಾಲಿನಲ್ಲಿ ಈಗಾಗಲೇ ಸಾವಿರಾರು ಪ್ರಕರಣಗಳು ದಾಖಲಾಗಿರುವುದು ಸಾರ್ವಜನಿಕರಲ್ಲಿ ಕಳವಳ ಉಂಟು ಮಾಡಿದೆ. ಸರ್ಕಾರ ಈಗಾಲಾದರೂ ವ್ಯಾಪಕ ಜಾಗೃತಿಗೆ ಮುಂದಾಗಬೇಕು ಎಂಬುದು ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳು ಒತ್ತಾಯವಾಗಿದೆ.
ಮಕ್ಕಳ ಮೇಲಿನ ದೌರ್ಜನ್ಯ: ರಾಜ್ಯದಲ್ಲಿ ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಬಾಲಕಿಯರು, ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ, ಸ್ನೇಹಿತರು, ಓಣಿಯವರು, ಶಿಕ್ಷಕರು, ಸಿಬ್ಬಂದಿಯಿಂದ ದೌರ್ಜನ್ಯ, ಕಿರುಕುಳ ನಡಯುತ್ತಲೇ ಇವೆ.
2024ರಲ್ಲಿ ಬೆಂಗಳೂರು ನಗರದಲ್ಲಿ 586 ಪೋಕ್ಸೋ, 415 ಮಕ್ಕಳ ಮೇಲೆ ರೇಪ್, ಮೈಸೂರಲ್ಲಿ 65 ಪೋಕ್ಸೋ, 49 ರೇಪ್, ಹುಬ್ಬಳ್ಳಿ-ಧಾರವಾಡ ನಗರದಲ್ಲಿ 63 ಪೋಕ್ಸೋ, 42 ರೇಪ್, ಮಂಗಳೂರಲ್ಲಿ 63 ಪೋಕ್ಸೋ, 29 ರೇಪ್, ಬೆಂಗಳೂರು ಜಿಲ್ಲೆಯಲ್ಲಿ 133 ಪೋಕ್ಸೋ, 81 ರೇಪ್, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಂಗಳೂರು, ಬೆಳಗಾವಿ ಜಿಲ್ಲೆ, ಮೈಸೂರು, ಮಂಡ್ಯದಲ್ಲೂ ಕೂಡ 100ಕ್ಕೂ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗಿವೆ. 2025ರಲ್ಲಿ ಬೆಂಗಳೂರು ನಗರದಲ್ಲಿ ಏಪ್ರಿಲ್ ಅಂತ್ಯಕ್ಕೆ 171 ಪ್ರಕರಣಗಳಾಗಿವೆ. ಧಾರವಾಡ ಜಿಲ್ಲೆ 31, ಮೈಸೂರು 80, ಬೆಳಗಾವಿ ಜಿಲ್ಲೆ 69 ಪ್ರಕರಣಗಳು ದಾಖಲಾಗಿವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಕ್ಕಳ ಮೇಲಿನ ದೌರ್ಜನ್ಯ ಎರಡಂಕಿ ದಾಟಿದೆ.