ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ವಿವಾಹ ವಿಚ್ಛೇದನ ಘೋಷಣೆ ಮಾಡಿದ್ದಾರೆ. ಪರುಪಳ್ಳಿ ಕಶ್ಯಪ್ ಅವರನ್ನು 7 ವರ್ಷಗಳ ಹಿಂದೆ ಸೈನಾ ವಿವಾಹವಾಗಿದ್ದರು. ಕಶ್ಯಪ್ ಸಹ ಬ್ಯಾಂಡ್ಮಿಟನ್ ಆಟಗಾರ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ದಾಂಪತ್ಯ ಜೀವನ ಅಂತ್ಯಗೊಳಿಸುವ ಕುರಿತು ಸೈನಾ ನೆಹ್ವಾಲ್ ಪೋಸ್ಟ್ ಹಾಕಿದ್ದಾರೆ. 35 ವರ್ಷದ ಸೈನಾ ನೆಹ್ವಾಲ್ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, “ಜೀವನವು ಕೆಲವೊಮ್ಮೆ ವಿಭಿನ್ನ ದಿಕ್ಕುಳಲ್ಲಿ ನಮ್ಮನ್ನು ಕರೆದೊಯ್ಯತ್ತದೆ. ಸಾಕಷ್ಟು ಆಲೋಚಿಸಿ ಬೇರೆಯಾಗಲು ಕಶ್ಯಪ್ ಮತ್ತು ನಾನ ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ.
“ನಾವು ನಮಗಾಗಿ ಪರಸ್ಪರ ಶಾಂತಿ, ಬೆಳವಣಿಗೆಗಾಗಿ ಈ ತೀರ್ಮಾನ ಕೈಗೊಂಡಿದ್ದೇವೆ. ಹಲವು ನೆನಪುಗಳಿಗೆ ನಾವು ಕೃತಜ್ಞರಾಗಿದ್ದೇವೆ. ಈ ಸಮಯದಲ್ಲಿ ಖಾಸಗಿನವನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದು ಸೈನಾ ತಿಳಿಸಿದ್ದಾರೆ.
ವಿಚ್ಛೇದನ ಕುರಿತು ಇದುವರೆಗೂ ಪರುಪಳ್ಳಿ ಕಶ್ಯಪ್ ಯಾವುದೇ ಪೋಸ್ಟ್ ಹಾಕಿಲ್ಲ. ಪ್ರತಿಕ್ರಿಯೆ ನೀಡಿಲ್ಲ. ಬ್ಯಾಡ್ಮಿಂಟನ್‌ಗೆ ನಿವೃತ್ತಿ ಘೋಷಣೆ ಬಳಿಕ ಪರುಪಳ್ಳಿ ಕಶ್ಯಪ್ ಕೋಚ್ ಆಗಿ ಮುಂದುವರೆದಿದ್ದರು. ಸೈನಾ ನೆಹ್ವಾಲ್‌ಗೆ ಉತ್ತಮ ಮಾರ್ಗದರ್ಶಕರಾಗಿದ್ದರು.
ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಒಂದೇ ಕ್ಷೇತ್ರದವರು. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. 2008ರ ಬೀಜಿಂಗ್ ಒಲಂಪಿಕ್ಸ್‌ನಲ್ಲಿ ಸೈನಾ ಕ್ವಾರ್ಟರ್ ಫೈನಲ್ ಪ್ರವೇಶ ಮಾಡುವ ಮೂಲಕ ಜನಪ್ರಿಯತೆ ಪಡೆದರು. 2012ರ ಲಂಡನ್ ಸಮ್ಮರ್ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಪಡೆದರು.
ಹೈದರಾಬಾದ್‌ನಲ್ಲಿ ಸೈನಾ ಮತ್ತು ಕಶ್ಯಪ್ ಪ್ರೇಮ ಕಥೆ ಪ್ರಾರಂಭವಾಗುತ್ತದೆ. ಈ ಇಬ್ಬರೂ ಸಹ ಪುಲ್ಲೇಲಾ ಗೋಪಿಚಂದ್ ಅಕಾಡಮೆಯಲ್ಲಿ ಒಟ್ಟಿಗೆ ತರಬೇತಿಯನ್ನು ಪಡೆಯುತ್ತಿದ್ದರು. 2004ರಲ್ಲಿ ಡೇಟಿಂಗ್ ಪ್ರಾರಂಭವಾಗಿದ್ದರೂ ಸಹ ಜೋಡಿ ವೃತ್ತಿ ಬದುಕಿನ ಬಗ್ಗೆ ಹೆಚ್ಚಿನ ಗಮನಹರಿಸಿದರು. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡರು.
2019ರ ಕಾಮನ್‌ವೆಲ್ತ್‌ನಲ್ಲಿ ಸೈನಾ ಪಿ. ವಿ. ಸಿಂಧು ಸೋಲಿಸಿದರು. ಆಗ ಕಶ್ಯಪ್ ಸೈನಾ ಕೋಚ್ ಆಗಿದ್ದರು. 2018ರಲ್ಲಿ ಈ ತಾರಾ ಜೋಡಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನ ಆರಂಭಿಸಿದರು. 2024ರಲ್ಲಿ ಕಶ್ಯಪ್ ಬ್ಯಾಂಡ್ಮಿಂಟನ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಸೈನಾ ನೆಹ್ವಾಲ್ ಇನ್ನೂ ಆಟವಾಡುತ್ತಿದ್ದಾರೆ.
2015ರಲ್ಲಿ ಕಶ್ಯಪ್ ಕಾಲಿಗೆ ಗಾಯವಾಗಿತ್ತು. ಆಗ ವೃತ್ತಿ ಜೀವನಕ್ಕೂ ತೊಂದರೆ ಉಂಟಾಯಿತು. 2016ರ ರಿಯೋ ಒಲಂಪಿಕ್ಸ್‌ನಿಂದ ಅವರು ದೂರ ಉಳಿದರು. ಆಗ ಸೈನಾ ಅವರಿಗೆ ಭಾವನಾತ್ಮಕ ಬೆಂಬಲವಾಗಿ ನಿಂತಿದ್ದರು.